ಟೀಕೆಗಳು ಅಳಿಯುತ್ತವೆ, ನಾವು ಕೈಗೊಂಡ ಅಭಿವೃದ್ಧಿ ಕೆಲಸಗಳು ಜನಮಾನಸದಲ್ಲಿ ಉಳಿಯುತ್ತವೆ ಎಂಬ ಸಿದ್ದಾಂತದೊಂದಿಗೆ ರಾಜಕಾರಣ ಮಾಡುತ್ತಿದ್ದೇನೆ. ಯಾರು ಸಮರ್ಥರು ಎಂಬುದನ್ನು ಜನ ನಿರ್ಧರಿಸುತ್ತಾರೆ. ಇಂಡಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕೈಗೊಂಡು ಜನರ ಹೃದಯಕ್ಕೆ ಹತ್ತಿರವಾಗಿದ್ದೇನೆ. ಹೀಗಾಗಿ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.
ವಿಜಯಪುರ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು ಎನಿಸಿಕೊಂಡಿದ್ದ ಇಂಡಿಯನ್ನು ಅಭಿವೃದ್ಧಿ ಹೊಂದಿದ ತಾಲೂಕಾಗಿ ಪರಿವರ್ತಿಸಲಾಗಿದೆ. ಭೀಮಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭ, ಕೆರೆ ತುಂಬುವ ಯೋಜನೆ, ನಿಂಬೆ ಅಭಿವೃದ್ಧಿ ಮಂಡಳಿ, ನಿಂಬೆ ಜಿಐ ಟ್ಯಾಗ್, ಸರಕಾರಿ ಕಚೇರಿಗಳ ಆರಂಭ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಇಂಡಿ ಕ್ಷೇತ್ರದಲ್ಲಿ ಜನರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿದ್ದೇನೆ. ರೇವಣಸಿದ್ದೇಶ್ವರ ಏತ ನೀರಾವರಿ ಭೂಮಿ ಪೂಜೆ ಸಂದರ್ಭ ನಾನು ರಾಜಕಾರಣ ಮಾಡಿಲ್ಲ. ನಮ್ಮ ಭಾಗಕ್ಕೆ ನೀರಾವರಿ ಆಗುತ್ತದೆಂದು ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಬೇರೆಯವರು ಕೂಡ ಮಾಡಬಾರದು” ಎಂದು ಹೇಳಿದರು.
“ಜುಲೈ 14 ರಂದು ಇಂಡಿಯಲ್ಲಿ ನಡೆಯುತ್ತಿರುವುದು ಸರ್ಕಾರದ ಕಾರ್ಯಕ್ರಮ. ಶಿಷ್ಟಾಚಾರದ ಜೊತೆಗೆ ಸಂಸದರು ಸೇರಿದಂತೆ ಎಲ್ಲರೂ ಬನ್ನಿ ಎಂದು ಮಾಧ್ಯಮ ಮೂಲಕ ಆಹ್ವಾನಿಸುವೆ. ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಒಬ್ಬ ಅಧಿಕಾರಿಯೂ ಇರಲಿಲ್ಲ. ಯಾರೇ ಅಭಿವೃದ್ಧಿ ಕೆಲಸ ಕೈಗೊಂಡರು ಕ್ರೆಡಿಟ್ ಕೊಡುವ ಸ್ವಚ್ಛ ಮನಸ್ಸು ನನ್ನದು. ನಮ್ಮ ಜನರಿಗೆ ಕೆಲಸ ಆಗಬೇಕು ಅಷ್ಟೇ. ನಿತಿನ್ ಗಡ್ಕರಿ ಅವರ ರಸ್ತೆ ಅಭಿವೃದ್ಧಿ ಕಾರ್ಯವನ್ನು ಶ್ಲಾಘಸಿದ್ದೇನೆ” ಎಂದರು.
ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರಾತಿಗೆ ಆಗ್ರಹ
“ಕಾಲುವೆ ಯೋಜನೆಗೆ ರಾಜ್ಯ ಸರ್ಕಾರ ಕೂಡ ಶೇ 40 ರಷ್ಟು ಅನುದಾನ ಕೊಡುತ್ತದೆ. ಸಿಡಬ್ಲ್ಯೂಸಿ ಬಗ್ಗೆ ನಮ್ಮ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ರಾಜ್ಯ ಸರ್ಕಾರ ಆದಷ್ಟು ಬೇಗ ಡಿಪಿಆರ್ ಸಿದ್ದಪಡಿಸಿ ಕಳಿಸಲಾಗಿದೆ ಎಂದು ತಿಳಿಸಿದರು. ಗೋಳಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದಿತ್ತು. ಗೋವಿಂದ ಕಾರಗೋಳ ಅವರು ವಿಮಾನ ನಿಲ್ದಾಣ ಮಾಡಿದ್ದಾರೆ. ಈಗ ಕೇಂದ್ರದಿಂದ ಪರಿಸರದ ಅನುಮತಿ ಕೊಡಸಲಿ” ಎಂದರು.