ಕೊಡಗು ಜಿಲ್ಲೆಯಲ್ಲಿರುವ ಕೇರಳ-ಕರ್ನಾಟಕದ ಗಡಿ ಭಾಗದಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ, ಮಾವೋವಾದಿ ಕಾರ್ಯಕರ್ತನೊಬ್ಬ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ವ್ಯಕ್ತಿ ಚಿಕಿತ್ಸೆಗಾಗಿ ಕೊಡಗು ಜಿಲ್ಲೆಗೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಕೊಡಗಿನ ಗಡಿಭಾಗದಿಂದ 4 ರಿಂದ 5 ಕಿ.ಮೀ ದೂರದ ಕೇರಳ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ವಿರುದ್ಧ ಗುಂಡಿನ ಚಕಮಕಿ ನಡೆಸಿರುವವರು ಕಾಡುಪ್ರಾಣಿಗಳ ಬೇಟೆಗಾರರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅವರನ್ನು ಮಾವೋವಾದಿಗಳೆಂದು ಪೊಲೀಸರು ಹೇಳುತ್ತಿದ್ದಾರೆ.
ಕೇರಳದಿಂದ ಕೊಡಗು ಪ್ರವೇಶಿಸುವ ರಸ್ತೆಗಳಲ್ಲಿರುವ ಚೆಕ್ ಪೋಸ್ಟ್ಗಳಲ್ಲಿ ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಗಡಿ ಭಾಗದ ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ಹೋಂಸ್ಟೇಗಳಿಗೂ ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಅಲ್ಲದೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಟುಂಬದ ದೀಪ ನಂದಿಸಿದ ದೀಪಾವಳಿ; ಪಟಾಕಿ ಸಿಡಿದು ಯುವಕ ಸಾವು
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು ಗಡಿಭಾಗಗಳಾದ ಬಿರುನಾಣಿ, ತೆರಾಳು, ಪರಕಟಗೆರೆ ಮತ್ತು ಕುಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆ ಕುರಿತು ಚರ್ಚಿಸಿದ್ದಾರೆ.
ಕಳೆದ ವಾರವಷ್ಟೇ ಕೇರಳ ಗಡಿಯಲ್ಲಿ ಐವರು ಮಾವೋವಾದಿಗಳು ಹಾಗೂ ಕೇರಳ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇಬ್ಬರನ್ನು ಪೊಲೀಸರು ಬಂಧಿಸಿದ್ದರು.