ಎರಡು ಜಡೆ ಹಾಕಿಲ್ಲ ಎಂಬ ಕಾರಣಕ್ಕೆ ಶಾಲೆಯ ಶಿಕ್ಷಕರು ಮೂವರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿ ಪುರುಷಾಧಿಪತ್ಯದ ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಗೆ ಬಂದ 8ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಕೂದಲು ಬಾಚಿದ್ದರೂ, ಎರಡು ಜಡೆ ಹಾಕಿಲ್ಲವೆಂಬ ಕಾರಣಕ್ಕೆ ಅವರ ಕೂಲದನ್ನು ಕತ್ತರಿಸಲಾಗಿದೆ. ದೈಹಿಕ ಶಿಕ್ಷಕ ಶಿವಕುಮಾರ್, ಸಹಶಿಕ್ಷಕಿ ಪವಿತ್ರಾ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಶಿಕ್ಷಕರ ಕೃತ್ಯವನ್ನು ವಿದ್ಯಾರ್ಥಿನಿಯರ ಪೋಷಕರು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಗೆ ಅಕ್ಕೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.