ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ “ದುರುಗ ಮುರುಗಿ” ಸಮುದಾಯದವರು ಊರಿನೊಳಕ್ಕೆ ಬರುವುದನ್ನು ಒಂದು ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಮುದಾಯವು ಮಾರಮ್ಮನ ಹೆಸರಿನ ದೇವಿಯನ್ನು ತಲೆ ಮೇಲೆ ಹೊತ್ತು ತಿರುಗುವ ಒಂದು ಅಲೆಮಾರಿ ಪೂಜಾರಿ ಕುಟುಂಬ. ಇದೊಂದು ಧಾರ್ಮಿಕ ಕಾರ್ಯ ಚಟುವಟಿಕೆ ಮಾತ್ರವಲ್ಲದೆ, ಆರಾಧನೆಯ ಸಾಂಸ್ಕೃತಿಕ ವೈಶಿಷ್ಟ್ಯ. ಅಲೆಮಾರಿ ಜನಾಂಗದ ಜನಪದ ಕಲೆಗಳ ಜೀವಂತ ಪ್ರದರ್ಶನ.
ಕರ್ನಾಟಕದ ಗ್ರಾಮೀಣ ಜನಪದ ಜೀವನವು ನಂಬಿಕೆ, ಭಕ್ತಿ ಹಾಗೂ ಸಂಸ್ಕೃತಿಯ ಉಗಮಸ್ಥಾನವಾಗಿದೆ. ಇಂಥ ಆಚರಣೆಯಲ್ಲೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿರುವ ದುರುಗ ಮುರುಗಿ ಸಮುದಾಯದ ʼದುರ್ಗಾ ಮಾರಮ್ಮನ ಸಂಚಾರಿ ಆರಾಧನೆʼಯ ಜನಪ್ರಿಯತೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿದ್ದು, ಈ ಆಚರಣೆ, ಶ್ರದ್ಧೆ ಮತ್ತು ಕಲೆಯ ಶಕ್ತಿಶಾಲಿ ಅಭಿವ್ಯಕ್ತಿಯಾಗಿದೆ.

ಪುರುಷರು ಮುಖಕ್ಕೆ ಅರಿಶಿಣ, ಹಣೆಗೆ ದೊಡ್ಡದಾದ ಕುಂಕುಮ, ಕಾಡಿಗೆ, ಮೀಸೆ, ಎದೆಗೂ ಅರಿಶಿಣ, ಕುಂಕುಮ ಭಂಡಾರದ ಲೇಪನ, ಕೈ ರಟ್ಟೆಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆ ಗೆಜ್ಜೆ, ಸೀರೆಯ ದೋತಿ, ಕೈಯಲ್ಲಿ ಚಾವಟಿ ಅಥವಾ ಚಡಿ- ಇವು ಪೆಟ್ಟಿಗೆ ಹೊತ್ತ ಪೂಜಾರಿಯ ವೇಷ. ಅವನ ಜೊತೆ ಬರುವ ಹೆಣ್ಣಿನದ್ದು ಮಾಮೂಲಿ ಮಹಿಳೆಯರ ವೇಷವಾದರೂ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ವಿವಿಧ ಬೆಳ್ಳಿಯ ಒಡವೆಗಳಿರುತ್ತವೆ. ನಡುವಿನ ಒಂದು ಕಡೆ ಬಟ್ಟೆಯಲ್ಲಿ ತೂಗು ಹಾಕಿಕೊಂಡ ಮಗು, ಇನ್ನೊಂದು ಕಡೆ ಭಿಕ್ಷೆ ಸಂಗ್ರಹಿಸುವ ಅಸುಬೆ ಚೀಲ, ಕುತ್ತಿಗೆಗೆ ನೇತು ಹಾಕಿಕೊಂಡ ಅರೆ ಅಥವಾ ಉರುಮೆ ವಾದ್ಯ. ಇದು ದುರುಗ ಮುರುಗಿ ಸಮುದಾಯದ ವಿಶೇಷ ವೇಷ ಭೂಷಣವಾಗಿದೆ.
ದುರುಗ ಮುರುಗಿ ಆಚರಣೆಯು ಆ ಸಮುದಾಯದ ಹೊಟ್ಟೆಪಾಡಿನ ಕಾಯಕವೂ ಆಗಿದೆ. ತಲೆಯ ಮೇಲೆ ದುರುಗಿ ಮಾರಮ್ಮನನ್ನು ಹೊತ್ತು ಊರಿಂದ ಊರಿಗೆ ಅಲೆಯುತ್ತಾರೆ. ಊರಿನ ಆಯಕಟ್ಟಿನ ಸ್ಥಳ, ನಾಲ್ಕು ದಾರಿ ಸೇರುವ ಸ್ಥಳ, ದೇವಸ್ಥಾನ, ಊರಿನ ಅಗಸಿಯಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ ಅಥವಾ ಮರದ ಪೆಟ್ಟಿಗೆಯಲ್ಲಿ ದೇವಿ ದುರ್ಗಿ ಮಾರಮ್ಮನನ್ನು ಪ್ರದರ್ಶಿಸಿ ನಂತರ ಚಾವುಟಿಯಿಂದ ಬಾರಿಸಿಕೊಳ್ಳುತ್ತಾರೆ. ಡೋಲನ್ನು ದುರಗ, ಮುರಗ, ಡ್ರಂವ್, ಡ್ರಂವ್ ಎಂದು ಬಾರಿಸುತ್ತಾ
“ಮರಗಮ್ಮ ಬಂದಾಳ್ರೇ ಯವ್ವಾ
ದುರುಗಮ್ಮ ಬಂದಾಳ್ರೇ ಯವ್ವಾ
ತಾಯಿ ಬಂದಾಳ ಬರ್ರೇ ಯವ್ವಾ
ಬರ್ರೇ ತಾಯಿ ಬರ್ರೇ ತಾಯಿ
ಬುರು ಬುರು ಪೋಚಮ್ಮ ಬಂದಾಳ ಬರ್ರೇ ಯವ್ವ
ಕಂವಟಿಗಿ ಮುರಗಮ್ಮ ಆವ್ಲಾರ ದುರ್ಗಮ್ಮ ಬಂದಾಳ
ಆಲಳ್ಳಿ ಮರಗಮ್ಮ ಬಂದಾಳ ಬರ್ರೇ ತಾಯೀ
ಬಸಪಟ್ಟಣ ಮರಗಮ್ಮ ಬಂದಾಳ ನೋಡ್ರೇ ಯವ್ವಾ
ಭಾರಾ ಭಾರಾ ಬರ್ರೀ ಮರದಾಗ ಜ್ವಾಳಾ ತಗಂಡು ಬರ್ರೇ”
ಎಂದು ದುರಗಿ ಮಾರಮ್ಮನನ್ನು ಹಾಡಿ ಹೊಗಳುತ್ತಾರೆ. ಪೂಜಾರಿ ಕೈಯಲ್ಲಿ ಐದಾರು ಅಡಿ ಉದ್ದದ ಚಾವಟಿಯನ್ನು ಹಿಡಿದು ಆವೇಶದಿಂದ ಬೀಸಿ ಮೈಗೆ ಬಾರಿಸಿಕೊಳ್ಳುತ್ತಾನೆ. ಚಾವಟಿಯನ್ನು ಬೀಸುವುದೂ ಒಂದು ಚಾಕಚಕ್ಯತೆ. ಕೈ ಚಾಚಿ ಚಾವಟಿ ಬೀಸಿ ಬರ ಸೆಳೆದನೆಂದರೆ ʼಚಟಾರ್’ ಎಂದು ಸದ್ದು ಬರುತ್ತದೆ.

ಚಾವಟಿ ಆಟದ ಮಧ್ಯೆ ತಲೆಯ ಮೇಲಿನ ಮಾರಮ್ಮನ ಪೆಟ್ಟಿಗೆಯನ್ನು ಕೆಳಗಿಳಿಸಿ ಜನರಿಗೆದುರಾಗಿದ್ದ ಮುಂಭಾಗದ ತೆರೆ ಜರುಗಿಸಿ ಪೂಜಾರಿ ಗಂಟೆ ಬಾರಿಸುತ್ತಾ ಪೂಜೆ ಮಾಡುತ್ತಾನೆ. ಹೀಗೆ ಪೂಜಿಸುವಾಗ ಮಾರಮ್ಮನನ್ನು ಸ್ತುತಿಸುವ ಹಾಡುಗಳನ್ನು ಹಾಡುತ್ತಾರೆ. ತಾಯಂದಿರು ದೇವಿಗೆ ನೀರು ಹಾಕಿ ಜೋಳ, ಅಕ್ಕಿ ಸೇರಿ ಇತರೆ ಧಾನ್ಯ, ಹಿಟ್ಟು ಕೊಟ್ಟು ಆಶೀರ್ವಾದ ಪಡೆಯುತ್ತಾರೆ.
ಈ ಸಂಚಾರವು ಹಳ್ಳಿಗಳಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಹಳ್ಳಿಗರ ನಂಬಿಕೆ ಪ್ರಕಾರ, ಈ ಆಚರಣೆ ಊರ ಕಷ್ಟಗಳನ್ನು ದೂರ ಮಾಡುತ್ತದೆಯಂತೆ.
ಈ ಕುರಿತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದ ದುರುಗಿ ಮುರುಗಿ ಸಮುದಾಯದ ಮಹಿಳೆ ಮಾತನಾಡಿ, “ನಾನು ಚಿಕ್ಕವಳಿದ್ದಾಗಿನಿಂದ ನಾವು, ನಮ್ಮ ಹಿರಿಯರು ಈ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದೇವೆ. ನನಗೀಗ 60 ವಯಸ್ಸು. ಆದರೂ ನಾವು ಇಂದಿಗೂ ಈ ಆಚರಣೆಗಳನ್ನು ಬಿಟ್ಟಿಲ್ಲ ಮತ್ತು ಇದು ಹೊಟ್ಟೆಪಾಡಿನ ಕಾಯಕವೂ ಆಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಜನರು ದುರುಗಿ ಮಾರಮ್ಮನನ್ನು ಭಕ್ತಿ ಗೌರವದಿಂದ ಕಾಣುತ್ತಾರೆ. ಧಾನ್ಯಗಳನ್ನು ನೀಡುತ್ತಾರೆ ಕೆಲವರು ಹಣ ನೀಡುತ್ತಾರೆ. ದುರುಗಿ ಮಾರಮ್ಮ, ಶೆಟ್ಗೆಮ್ಮ ದೇವಿ ಜನರ ಕಷ್ಟನಿವಾರಣೆ ಮಾಡುವ ದೇವಿಯಾಗಿದ್ದಾಳೆ. ಇದರಿಂದಲೇ ನಾವು ಹೊಟ್ಟೆ ಒರೆದುಕೊಳ್ಳುತ್ತೇವೆ” ಎಂದರು.
ಮಾರಮ್ಮನ ಸಂಚಾರಿ ಆರಾಧನೆ ಎನ್ನುವುದು ಕೇವಲ ಧಾರ್ಮಿಕ ಆಚರಣೆ ಅಲ್ಲ. ಅದು ಒಂದು ಬದುಕು, ಒಂದು ಜೀವನೋಪಾಯ, ಒಂದು ಶ್ರದ್ಧೆಯ ಶಕ್ತಿ ಮತ್ತು ಒಂದು ಜನಪದ ಕಲಾ ಪ್ರದರ್ಶನ. ಇದು ಹಳ್ಳಿ ಸಂಸ್ಕೃತಿಯ ಒಂದು ಉಸಿರಾಟ. ಇಂಥ ಆಚರಣೆಗಳು ಉಳಿದುಕೊಳ್ಳಬೇಕೆಂದರೆ ಅವುಗಳಿಗೆ ನಾವು ಮೌಲ್ಯ ನೀಡಿ ಗೌರವಿಸಬೇಕು.
ದುರುಗ ಮುರುಗಿ ಅಲೆಮಾರಿ ಸಮುದಾಯದ ಸಂಚಾರಿ ಆರಾಧನೆ ನಮ್ಮ ಗ್ರಾಮೀಣ ಸಮಾಜದಲ್ಲಿ, ನಂಬಿಕೆ ಮತ್ತು ಕಲೆಯ ಅಪರೂಪದ ಪರಂಪರೆಯಾಗಿದೆ. ಇಂಥ ಸಂಸ್ಕೃತಿಗಳು ನಮಗೆ ಸಾಮಾಜಿಕ ಸಂಬಂಧಗಳ ನೆನಪನ್ನು ತರುವ ಮಹತ್ತರ ಪ್ರಚಾರಕಗಳಾಗಿವೆ. ಈ ಆಚರಣೆಗಳನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೂ ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಡುವ ಮಹತ್ವದ ಹೆಜ್ಜೆಯಾಗಲಿದೆ. ಸರ್ಕಾರ ಈ ಸಮುದಾಯದ ಕಲೆಯ ಪರಂಪರೆ ಉಳಿಸುವುದರ ಜತೆಗೆ ಈ ಸಮುದಾಯದ ಮಕ್ಕಳು ಎಲ್ಲರಂತೆ ಶಿಕ್ಷಿತರಾಗುವತ್ತ ಗಮನ ಹರಿಸಲಿ ಎನ್ನುವುದೇ ಆಶಯ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು