ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ರವರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡುವಾಗ ಲೋಕಸಭಾ ಚುನಾವಣೆಯಲ್ಲಿ ಕಳೆದ 25 ವರ್ಷಳಿಂದ ಒಂದೇ ಅಭ್ಯರ್ಥಿಗೆ ಮತ ಹಾಕುತ್ತಿದ್ದೀರಿ, ಅವರು ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆಂದು ಕೇಳಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ.
ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್ ರಾಜಶೇಖರ್ ನಾಗಪ್ಪ ಅವರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ದಾವಣಗೆರೆ ಜಿಲ್ಲೆಗೆ ನಿಮ್ಮ ಕುಟುಂಬದವರ ಕುರಿತು ಕೇಳುತ್ತಿದ್ದೇವೆ. ಕಳೆದ 20 ವರ್ಷಗಳಿಂದ ದಾವಣಗೆರೆ ನಗರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಿಮ್ಮ ಮಾವ ಶಾಮನೂರು ಶಿವಶಂಕರಪ್ಪನವರಿಗೆ ಈ ಕ್ಷೇತ್ರದ ಮತದಾರರು ಮತ ನೀಡಿದ್ದಾರೆ. ದಾವಣಗೆರೆಗೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಕುಟುಂಬದ ಕೊಡುಗೆ ಏನು? ಪ್ರತಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಬಹಿರಂಗವಾಗಿ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೊದಲು ಅವರ ಪ್ರಶ್ನೆಗೆ ಉತ್ತರ ಕೊಡಿ” ಎಂದು ಹೇಳಿದರು.
“ಪ್ರಭಾ ಮಲ್ಲಿಕಾರ್ಜುನ್ ಅವರ ಪತಿ 8ನೇ ಬಾರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಮೊದಲು ಪಟ್ಟಿ ಕೊಡಿ. ಗ್ರಾಮಾಂತರ ಭಾಗದಲ್ಲಿ ಯಾವ ಹಳ್ಳಿಗಳಿಗೆ ಅನುದಾನ ನೀಡಿದ್ದಾರೆ ಎನ್ನುವುದನ್ನು ಮೊದಲು ಲೆಕ್ಕ ಕೊಡಿ. 8 ವರ್ಷ ಉಸ್ತುವಾರಿ ಸಚಿವರಾಗಿ ಯಾವ ಹಳ್ಳಿಗೆ ಹೋಗಿದ್ದಾರೆ ಎಂಬುದನ್ನು ಮೊದಲು ತಿಳಿಸಿ. ಸಂಸದರಾಗಿ ಕಳೆದ 20 ವರ್ಷಗಳಲ್ಲಿ ಜಿ ಎಂ ಸಿದ್ದೇಶ್ವರ ಅವರು 1,300 ಹಳ್ಳಿಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಅನ್ನೋದನ್ನು ನಾವು ಪಟ್ಟಿ ಕೊಡುತ್ತೇವೆ. ಎಷ್ಟು ಅನುದಾನ ಕೊಟ್ಟಿದ್ದಾರೆ ಎನ್ನುವ ಲೆಕ್ಕ ಕೊಡುತ್ತೇವೆ” ಎಂದು ಸವಾಲು ಹಾಕಿದರು.
“ಪ್ರಭಾ ಮಲ್ಲಿಕಾರ್ಜುನ್ ಅವರೇ ಲೆಕ್ಕ ಕೊಡಲು ಸಿದ್ಧರಿದ್ದೀರಾ? ನಿಮ್ಮ ಶಾಸಕರ ಪರವಾಗಿ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆ ಎನ್ನುವುದರ ಬಗ್ಗೆ ಮಾತನಾಡಿ. ದಾವಣಗೆರೆ ಈ ದಿನ ಸುಂದರವಾಗಿ ಕಾಣುತ್ತಿರುವುದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ₹100 ಕೋಟಿಯಂತೆ ಮೂರು ವರ್ಷದಂತೆ ಒಟ್ಟು ₹300 ಕೋಟಿ ರೂಪಾಯಿ ಅನುದಾನ ಬಂದಿತ್ತು. ಕೇಂದ್ರ ಸರ್ಕಾರದಿಂದ ಬಂದ ಯುಐಡಿಎಸ್‌ಎಸ್‌ಎಂಟಿ ಯೋಜನೆಯಿಂದ ಬಂದ ₹88 ಕೋಟಿ ಅನುದಾನದಿಂದ, ಸ್ಮಾರ್ಟ್ ಸಿಟಿ ಯೋಜನೆಯಡಿ ಬಂದ ₹1,070 ಕೋಟಿ ಅನುದಾನದಿಂದ ಇವತ್ತು ದಾವಣಗೆರೆ ಸುಂದರವಾಗಿ ಕಾಣುತ್ತಿದೆ. ಆದರೆ ಈ ನಗರಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಮೊದಲು ದಾವಣಗೆರೆ ನಗರದ ಜನತೆಗೆ ತಿಳಿಸಿ” ಎಂದು ಹೇಳಿದರು.
“ಶಾಮನೂರು ಶಿವಶಂಕರಪ್ಪ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಕೊಡುಗೆ ಶೂನ್ಯ. ಇನ್ನು ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ನಾವು ಈಗಾಗಲೇ ಸರ್ವೆ ಮಾಡಿಸಿ, ಅಗತ್ಯ ಜಮೀನು ಗುರುತಿಸಿ ಏರ್ ಪೋರ್ಟ್ ಅಥಾರಿಟಿಯಿಂದ ಅನುಮತಿ ಪಡೆಯುವ ಪ್ರಯತ್ನ ಮಾಡಿದ್ದೇವೆ. ಅಗತ್ಯ ಜಮೀನು ಭೂಸ್ವಾಧೀನಕ್ಕಾಗಿ ₹142 ಕೋಟಿ ಬೇಕಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ವರದಿಯನ್ನೂ ನೀಡಿದ್ದೇವೆ. ಮೊದಲು ಜಮೀನು ಭೂಸ್ವಾಧೀನಕ್ಕೆ ಬೇಕಾಗಿರುವ ಹಣವನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿ” ಎಂದು ಹೇಳಿದರು.
“ಮಹಿಳಾ ಅಭ್ಯರ್ಥಿ ಕುರಿತು ನಿಮ್ಮ ಮಾವನವರು ಮಹಿಳೆಯರು ಅಡುಗೆ ಮಾಡಲು ಲಾಯಕ್ ಎಂಬ ಹೇಳಿಕೆ ನೀಡಿದ್ದು, ನೀವು ಕೂಡ ಮಹಿಳೆಯಾಗಿ ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನೆಂಬುದನ್ನು ಮೊದಲು ಜನರಿಗೆ ತಿಳಿಸಿ. ನಿಮ್ಮ ಮಾವನವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಿ. ಇಲ್ಲದಿದ್ದರೆ ಹೇಳಿಕೆ ನೀಡಿದ್ದು ತಪ್ಪು ಎಂದಾದರೂ ಹೇಳಿ. ಇದನ್ನು ಬಿಟ್ಟು ಜನರನ್ನು ದಿಕ್ಕುತಪ್ಪಿಸುವ ಹೇಳಿಕೆ ನೀಡುವ ಮೂಲಕ ಪಲಾಯನ ಮಾಡುತ್ತಿದ್ದೀರಿ. ಜನ ನಿಮ್ಮನ್ನು ನಂಬುವುದಾದರು ಹೇಗೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಹೊರಗುತ್ತಿಗೆ ಕಾರ್ಮಿಕರಿಗೆ ರಜೆ; ಕೆಎಂಎಫ್ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ
ದೂಡಾ ಮಾಜಿ ಅಧ್ಯಕ್ಷ ಎ ವೈ ಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಸತೀಶ್ ಕೊಳೇನಹಳ್ಳಿ, ಹೆಚ್ ಪಿ ವಿಶ್ವಾಸ್ ಮತ್ತಿತರರು ಇದ್ದರು.
