ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು-ಕೇರಳದಿಂದ ಮುಂಬೈಗೆ ತೆರಳುವ ಹೆದ್ದಾರಿಗಳೆರಡು ಸಂಧಿಸುವ ನಂತೂರು ಪ್ರದೇಶದಲ್ಲಿ ರಸ್ತೆಗಳು ಗುಂಡಿಮಯವಾಗಿರುವ ಕಾರಣ ಸ್ವತಃ ಪೊಲೀಸರೇ ಹಾರೆ, ಗುದ್ದಲಿ ಹಿಡಿದು ಹೊಂಡ ಮುಚ್ಚುವ ಕೆಲಸ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರದಲ್ಲಿ ಅತಿ ಹೆಚ್ಚು ಅಪಘಾತಗಳು ನಡೆಯುವ ನಂತೂರು ಪ್ರದೇಶದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಅಂಡರ್ ಪಾಸ್ ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂಬ ಬೇಡಿಕೆ ಬಹುತೇಕ ನೆನೆಗುದಿಗೆ ಬಿದ್ದಿದೆ. ಸರಿಯಾಗಿ ವಾಹನ ಕೊಂಡೊಯ್ಯಲೂ ಅಸಾಧ್ಯವಾದ ಈ ಜಂಕ್ಷನ್‌ನಲ್ಲಿ ಹೊಂಡ ಗುಂಡಿಗಳು ದ್ವಿಚಕ್ರ ವಾಹನ ಸವಾರರನ್ನು ಧೃತಿಗೆಡಿಸಿದ್ದು, ಹೊಂಡ ತಪ್ಪಿಸಲು ಹೋಗಿ ಬಿದ್ದ ಉದಾಹರಣೆಳು ಸಾಕಷ್ಟಿವೆ. ಇದನ್ನು ದಿನಾ ನೋಡುವ ಪೊಲೀಸರು ಸ್ವತಃ ತಾವೇ ಹೊಂಡ ಮುಚ್ಚಲು ಮುಂದಾಗಿದ್ದಾರೆ.
ಸಿಟಿ ಕಾರ್ಪೊರೇಶನ್ ಅಥವಾ ಹೆದ್ದಾರಿ ಇಲಾಖೆಗಳು ಮಾಡುತ್ತವೆಂದು ಕಾದು ಕುಳಿತರೆ, ಮತ್ತಷ್ಟು ತಿಂಗಳುಗಳು ಕಳೆದು ಪ್ರಾಣಹಾನಿಯಾಗಬಹುದೆಂಬ ಕಾಳಜಿಯಲ್ಲಿ ಪೊಲೀಸರು ಸ್ವತಃ ತಾವೇ ಹೊಂಡ ಮುಚ್ಚಿರುವ ಕಾರ್ಯಕ್ಕೆ ಸಾರ್ವತ್ರಿಕ ಶ್ಲಾಘನೆ ದೊರೆತಿದೆ.
ʼಆ್ಯಕ್ಸಿಡೆಂಟ್ ಸ್ಪಾಟ್ʼ ಎಂದೇ ಹೆಸರು ಹೊಂದಿರುವ ನಂತೂರು ಜಂಕ್ಷನ್ ರಸ್ತೆ ಹೊಂಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿಂದೆ ಗುಂಡಿಗಳಿಂದಲೇ ಆ್ಯಕ್ಸಿಡೆಂಟ್ ಆಗಿ ಜೀವಗಳು ಬಲಿಯಾಗುತ್ತಿದ್ದವು. ಈ ಸಂಭಾವ್ಯ ಅಪಾಯ ಹಾಗೂ ಸಂಚಾರ ಅಡಚಣೆಯನ್ನು ತಪ್ಪಿಸಲು ನಂತೂರಿನ ರಸ್ತೆ ಗುಂಡಿಗಳನ್ನು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳೇ ಸ್ವತಃ ಮುಚ್ಚಿರುವ ಕಾರ್ಯಕ್ಕೆ ನಿತ್ಯಸಂಚಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಈಶ್ವರ ಸ್ವಾಮಿ, ಎಎಸ್‌ಐ ವಿಶ್ವನಾಥ ರೈ ಸೇರಿ ಹಾರೆ, ಗುದ್ದಲಿ ಹಿಡಿದು ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಒಂದೆರಡು ಬಾರಿ ಇಲ್ಲಿ ರಸ್ತೆ ಗುಂಡಿಯನ್ನು ತೇಪೆ ಹಾಕುವ ಕಾರ್ಯ ನಡೆದಿದೆ. ಸ್ವಲ್ಪ ಸಮಯದ ಬಳಿಕ ಗುಂಡಿ ಯಥಾ ಸ್ಥಿತಿಯಲ್ಲಿ ಬಾಯಿತೆರೆದು ನಿಂತಿದೆ. ಇಲ್ಲಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದೇ ವಾಹನ ಚಲಾಯಿಸುವಂತಾಗಿತ್ತು.
ಈ ಸುದ್ದಿ ಓದಿದ್ದೀರಾ? ಹಾಸನ | ಪೌರಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು: ಸಾಮಾಜಿಕ ಹೋರಾಟಗಾರ ನೂರ್ ಅಹ್ಮದ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ನಂತೂರಿನ ತಿರುವಿನ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳು ಸೃಷ್ಟಿಯಾಗಿದ್ದವು. ನಗರದ ರಸ್ತೆಗಳೊಂದಿಗೆ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೂ ಕೂಡ ಇಲ್ಲಿ ಹಾದು ಹೋಗುತ್ತವೆ. ಇದರಿಂದ ಸಂಚಾರ ವ್ಯವಸ್ಥೆಗೂ ಭಾರೀ ತೊಂದರೆ ಉಂಟಾಗುತ್ತಿತ್ತು. ಇದೀಗ ಪೊಲೀಸ್ ಅಧಿಕಾರಿಗಳೇ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಂಡೂ ಕಾಣದಂತೆ ನಟಿಸೋ ಸಂಬಂಧಪಟ್ಟ ಪಾಲಿಕೆಗೆ ಮತ್ತು ಇಲಾಖೆಗೆ ಇದು ನಾಚಿಕೆಗೇಡಲ್ಲವೇ ?
ಪೋಲಿಸರಾದರೂ ಯಾರೋ ಮಾಡಿದ ಕರ್ಮವನ್ನು ತಾತ್ಕಾಲಿಕವಾಗಿ ಸರಿಪಡಿಸಿ ಮಾನವೀಯತೆ ಮರೆದಿದ್ದಾರೆ.ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ವಾಹನಚಾಲಕರ ಪ್ರಾಣ ಕಾಪಾಡುವರೇ ?