ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇದೆ. ಆದರೆ ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ಅಮಿತ್ ಶಾ ಬಂದು ಸುಳ್ಳು ಹೇಳಿಕೊಂಡು ಹೋಗಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆಂದು ಹೇಳಿ ಮಾಡಿದ್ದಾರೆಯೇ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.
“ಡಾಲರನ್ನು 45 ರೂ.ಗೆ ಇಳಿಸುತ್ತೇವೆಂದು ಹೇಳಿದ್ದರು. ಅದೀಗ ₹83 ಆಗಿದೆ. ಜನರಿಗೆ ಮಾತನ್ನು ಕೊಟ್ಟ ಮೇಲೆ ಉಳಿಸಿಕೊಳ್ಳುವುದು ಬಹಳ ಮುಖ್ಯ. ಬಿಜೆಪಿಯವರು ಹೇಳಿದ್ದನ್ನು ಯಾವುದನ್ನಾದರೂ ಮಾಡಿದ್ದಾರೆಯೇ” ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
“ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿದೆ, ನಂಬಿಕೆ ಬಂದಿದೆ. ಬಿಜೆಪಿ ಗ್ಯಾರಂಟಿ ಬಗ್ಗೆ ಯಾವುದೇ ನಂಬಿಕೆ ಇಲ್ಲ. ದೇಶದಲ್ಲಿ ಕಾನೂನಾತ್ಮಕ ಭ್ರಷ್ಟಾಚಾರ ಮಾಡಿದ್ದು ಬಿಜೆಪಿ. ಕಾನೂನು ಬಳಸಿಕೊಂಡು ₹12 ಸಾವಿರ ಕೋಟಿ ಲೂಟಿ ಮಾಡಿದೆ. ಐಟಿ, ಇಡಿ ದಾಳಿ ಮಾಡಿಸಿ, ಹಣವಂತರನ್ನು ಬೆದರಿಸಿ ಬಿಜೆಪಿ ಹಣ ಕಿತ್ತುಕೊಂಡಿದೆ” ಎಂದು ಹೇಳಿದರು.
“ಅತ್ಯಂತ ಅಸಮಂಜಸ ಸ್ಥಿತಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಜನ ಇದನ್ನು ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ನಮಗೆ ಸಿದ್ದರಾಮಯ್ಯ ಸರ್ಕಾರದ ನೀತಿಗಳು, ಗ್ಯಾರಂಟಿ ಯೋಜನೆಗಳು ಕೈಹಿಡಿಯುತ್ತವೆ” ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗ್ಯಾರಂಟಿ ಯೋಜನೆಗಳ ಬಗೆಗಿನ ತಪ್ಪು ಸಂದೇಶಗಳಿಗೆ ಕಿವಿಕೊಡಬೇಡಿ: ಗೀತಾ ಶಿವರಾಜಕುಮಾರ್
“ರಾಜ್ಯಕ್ಕೆ ಅಮಿತ್ ಶಾ ಬಂದು ಸುಳ್ಳನ್ನೇ ಹೇಳಿಕೊಂಡು ಹೋಗಿದ್ದಾರೆ. ಬರ ಪರಿಹಾರದ ಬಗ್ಗೆ ಸುಳ್ಳು ಹೇಳಿಕೆಯನ್ನು ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬಿಜೆಪಿ ಮಾಡಿರುವ ಮೋಸಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
