ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ ʼಬ್ರ‍್ಯಾಂಡ್ ಮಂಗಳೂರುʼ ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್ 2ರಂದು ಪ್ರಕಟವಾದ “ಹುಲಿ ವೇಷಕ್ಕೆ ಖದರ್ ನೀಡಿದ್ದ ಆಸಿಫ್” ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ₹5,001 ಮತ್ತು ಪ್ರಶಸ್ತಿ ಪತ್ರದ ಜತೆಗೆ ಒಂದು ಸ್ಮರಣಿಕೆಯನ್ನು ಒಳಗೊಂಡಿದೆ. ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ಹಿರಿಯ ಪತ್ರಕರ್ತ ಜೈದೀಪ್ ಶೆಣೈ, ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ತೀರ್ಪುಗಾರರಾಗಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಕೋಟ್ಯಾನ್ ಪಡು ಅವರು ಹೊಸದಿಗಂತ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿ ವಿಜಯ ಕರ್ನಾಟಕದಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 2019-20ನೇ ಸಾಲಿನ ಪ.ಗೋ. ಪ್ರಶಸ್ತಿ, 2022ರಲ್ಲಿ ಕಲಬುರಗಿಯಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಡ್ರಗ್ಸ್ ಸಂಬಂಧಿತ ಸ್ಕೂಪ್ ವರದಿಗೆ ಬಿ ಎಸ್ ವೆಂಕಟರಾಂ ರಾಜ್ಯ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನೀಡುವ ಪ್ರತಿಷ್ಠಿತ `ಅಭಿಮಾನಿ ದತ್ತಿ ಪ್ರಶಸ್ತಿ’ ಲಭಿಸಿದೆ. ಇವರು
ನೀರುಮಾರ್ಗ ಪಡು ಬೊಂಡಂತಿಲ ಗ್ರಾಮದ ಗೋಪಾಲ ಪೂಜಾರಿ ಮತ್ತು ಕಮಲ ದಂಪತಿಯ ಪುತ್ರ.
ಇದನ್ನೂ ಓದಿದ್ದೀರಾ? ಬಿಪಿಎಲ್ ಕುಟುಂಬಗಳಿಗೆ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಸರ್ಕಾರ ಚಿಂತನೆ; ತಗ್ಗುವುದೇ ಮಧ್ಯವರ್ತಿಗಳ ಹಾವಳಿ
ಪ್ರಶಸ್ತಿ ಪ್ರದಾನ ಸಮಾರಂಭ: ಜೂನ್ 25ರ ಬೆಳಿಗ್ಗೆ 11ಕ್ಕೆ ಪತ್ರಿಕಾಭವನದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡುವರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿರುವರು.