ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಜನರನ್ನು ಬೆಚ್ಚಿಬೀಳಿಸುವಂತಹ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ, ಮೈಸೂರು ಜಿಲ್ಲೆಯ ತಿ. ನರಸೀಪುರ ಬಳಿ ಬೀಕರ ಅಪಘಾತ ನಡೆದು 10 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿಯೂ ಅಪಘಾತಕ್ಕೆ ಒಬ್ಬರು ಬಲಿಯಾಗಿ, ಮೂವರ ಸ್ಥಿತಿ ಗಂಭೀರವಾಗಿದೆ. ಈ ಘಟನೆಗಳ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ.
ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ವೇಗವಾಗಿ ಬಂದ ಕಾರೊಂದು ಹರಿದಿರುವ ಘಟನೆ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ.
ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ವಿ.ಪಿ, ಬಿಂಬಿಕಾ, ಹನಿಷ್ಕಾ ಎಸ್.ಆರ್., ಶಾಲಿನಿ ಎಂ., ಜಷ್ಮಿತಾ, ಕೃತಿ ಗುರುವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಕಾರು ವಿದ್ಯಾರ್ಥಿನಿಯರ ಮೇಲೆ ಹರಿದಿದೆ.
ಘಟನೆಯಲ್ಲಿ ಸಿಂಚನಾ ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರಾದ ಬಿಂಬಿಕಾ, ಹನಿಷ್ಕಾರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆದಾಖಲಿಸಲಾಗಿದೆ. ಶಾಲಿನಿ, ಜಷ್ಮಿತಾ, ಕೃತಿ ಅವರಿಗೆ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗಿದೆ.
ಅಪಘಾತ ಎಸಗಿದ ಕಾರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.