ಸಮಾನ ಮನಸ್ಕ ಬ್ರಾಹ್ಮಣ ವೇದಿಕೆ ಹೆಸರಿನಲ್ಲಿ ದ.ಕ ಜಿಲ್ಲೆಯ ಸುಮಾರು ನೂರು ಜನ ಬ್ರಾಹ್ಮಣ ಮುಖಂಡರು ಮಂಗಳೂರು ನಗರದಲ್ಲಿ ಸಭೆ ಸೇರಿ, ಧಾರ್ಮಿಕ ಅಸಹಿಷ್ಣುತೆ, ಕೋಮುವಾದ, ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆ ತರುವ ವಿಚಾರದ ವಿರುದ್ಧ ಧ್ವನಿಯೆತ್ತಿದ್ದಾರೆ.
ಕರಾವಳಿಯಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ, ಇತ್ತೀಚಿನ ವರ್ಷಗಳಿಂದ ಬಿಜೆಪಿ ಬ್ರಾಹ್ಮಣ ನಾಯಕತ್ವಕ್ಕೆ ಮಣೆ ಹಾಕಿದ್ದು ಹೆಚ್ಚು. ಇದು ಬ್ರಾಹ್ಮಣ ಸಮುದಾಯ ಬಿಜೆಪಿಯತ್ತವಾಲಲು ಮುಖ್ಯ ಕಾರಣವಾಗಿತ್ತು.
ಬಿಜೆಪಿಯೇತರ ಪಕ್ಷದ ಬ್ರಾಹ್ಮಣ ಸಮುದಾಯದ ಮುಖಂಡರು, ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸುವ ರಾಜಕೀಯ ತಂತ್ರಗಾರಿಕೆ ಕೂಡ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆದಿತ್ತು. ಇಂತಹ ಧೋರಣೆಗಳಿಗೆ, ಬೆದರಿಕೆಗಳಿಗೆ ಉತ್ತರ ನೀಡುವ ಸಲುವಾಗಿ ಈ ಸಭೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ ಸಭೆ ಸೇರಿದವರು.
ಬ್ರಾಹ್ಮಣರೆಲ್ಲರೂ ಬಿಜೆಪಿಗರು, ಬಿಜೆಪಿಗೆ ಬೆಂಬಲಿಸದವರು ಬ್ರಾಹ್ಮಣರೇ ಅಲ್ಲ ಹಿಂದೂಗಳೇ ಅಲ್ಲ ಎಂಬಂತ ಬೆದರಿಕೆಯ ಸ್ವರೂಪದ ಪ್ರಚಾರದ ವಿರುದ್ಧ ಅಭಿಪ್ರಾಯ ರೂಪಿಸುವ ನಿರ್ಣಯವನ್ಮು ಈ ಸಭೆ ಕೈಗೊಂಡಿದೆ.
ಕೋಮುವಾದವನ್ನೇ ಬಂಡವಾಳವಾಗಿಸಿಕೊಂಡಿರುವ ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಇದೊಂದು ಹೊಸ ಆಶಾದಾಯಕ ಬೆಳವಣಿಗೆಯಾಗಿದೆ.
ಬಡ ಬ್ರಾಹ್ಮಣರಿಗೆ ನೆರವು
ಬಡತನದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ತಲುಪಿಸುವ ಯೋಜನೆ ರೂಪಿಸಲೂ ಕೂಡ ಈ ಚಿಂತನ ಮಂಥನ ಸಭೆ ನಿರ್ಧರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮಾಜದ ಪ್ರಭಾವಿ ನಾಯಕ ಶ್ರೀಧರ ಭಿಡೆ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.
ಬ್ರಾಹ್ಮಣರು ದೇಶದ ಸಮಗ್ರ ಜನರನ್ನೂ ಪ್ರೀತಿಸುವ ಮತ್ತು ಸಮಾಜದ ಸುಧಾರಣೆಯ ನಾಯಕತ್ವವನ್ನು ವಹಿಸಿದವರು. ಹಿಂದೂ ಮುಸ್ಲಿಂ ಸಂತ ಪರಂಪರೆಯನ್ನು ಬೆಳೆಸಿದವರು.ಈ ಕಾಲಘಟ್ಟದಲ್ಲಿ ಕೂಡ ಎಲ್ಲರ ಜೊತೆಗೆ ಹೆಜ್ಜೆ ಹಾಕುವ ಹೃದಯ ವೈಶಾಲಿಗಳು ಎಂದು ಸಭೆಯಲ್ಲಿ ಅಭಿಪ್ರಾಯ ಪಟ್ಟರು. ಕರಾವಳಿಯಲ್ಲಿ ಬ್ರಾಹ್ಮಣರು ಒಂದೇ ಪಕ್ಷಕ್ಕೆ ಸೀಮಿತಗೊಂಡವರಲ್ಲ ಎಂಬುದನ್ನು ಈ ಸಭೆಯ ಮೂಲಕ ನಿರೂಪಿಸುತ್ತಿದ್ದೇವೆ ಎಂದು ಶ್ರೀಧರ ಭಿಡೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಖ್ಯಾತ ಚಿಂತಕ ಪ್ರೊ. ರಾಜಾರಾಮ ತೋಳ್ಪಾಡಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬರುತ್ತಿರುವಾಗ ಸಮಾನ ಮನಸ್ಕ ಬ್ರಾಹ್ಮಣರು ಈ ನಿಟ್ಟಿನಲ್ಲಿ ತಮ್ಮ ಸಮುದಾಯಕ್ಕೆ ಸತ್ಯ ಸಂದೇಶ ತಿಳಿಸುವ ಕಾರ್ಯ ನಡೆಸಬೇಕಾಗಿದೆ ಎಂದರು.
ಬ್ಯಾಂಕ್ ನೌಕರ ಸಂಘದ ಹಿರಿಯ ನಾಯಕ ಟಿ .ಆರ್.ಭಟ್ ಮಾತನಾಡಿ, ಬ್ರಾಹ್ಮಣರೆಲ್ಲರೂ ನಿರ್ದಿಷ್ಟ ಸಿದ್ದಾಂತ ಮತ್ತು ಪಕ್ಷಕ್ಕೇ ಸೇರಬೇಕು ಅಥವಾ ಸೇರಿದ್ದಾರೆ ಎಂಬ ನಿಲುವಿನ ವಿರುದ್ದ ನಾವು ಮಾತನಾಡಲೇಬೇಕು. ದೇಶದ ಆಗುಹೋಗುಗಳ ಬಗ್ಗೆ ಭಿನ್ನಾಭಿಪ್ರಾಯ, ನಿಜ ಅಭಿಪ್ರಾಯ ವ್ಯಕ್ತಪಡಿಸುವ ಪರಿಸ್ಥಿತಿಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಘಟಕ ಎಂ.ಜಿ. ಹೆಗಡೆ ಮಾತನಾಡಿ, ಬಿಜೆಪಿ ಮತ್ತು ಕೋಮು ಸಂಘಟನೆಗಳಿಗೆ ಬೆಂಬಲಿಸದ ಬ್ರಾಹ್ಮಣರಿಗೆ ಕಿರುಕುಳ ನೀಡುವಂತಹ, ಹೀಯಾಳಿಸುವ, ವ್ಯವಹಾರಿಕವಾಗಿ ತೊಂದರೆ ಕೊಡುವ ಭಯದ ವಾತಾವರಣ ಕರಾವಳಿಯಲ್ಲಿ ಇದೆ. ಬ್ರಾಹ್ಮಣ ಸಮುದಾಯದವರೆಲ್ಲ ಒಂದೇ ಪಕ್ಷವನ್ನು ಬೆಂಬಲಿಸಬೇಕೆಂಬ ಬೆದರಿಕೆ ಧೋರಣೆಯ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರದ ಸವಲತ್ತು ಸಿಗುವಂತೆ ಸಮುದಾಯದ ಮುಖಂಡರೆಲ್ಲರೂ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಎಂ.ಜಿ.ಹೆಗಡೆ ತಿಳಿಸಿದರು.
ಸಭೆಯಲ್ಲಿ ಸುರತ್ಕಲ್‌ನ ಹಿರಿಯ ಮುಂದಾಳು ಗುರುರಾಜ ಆಚಾರ್ಯ, ಬೆಟ್ಟ ರಾಜಾರಾಮ ಭಟ್, ಮಹೇಶ ಕುಮಾರ ಸುಳ್ಯ, ಸತ್ಯೇಂದ್ರ ವೇಣೂರು, ಡಾ.ಶಿವಾನಂದ ಮುಂಡಾಜೆ, ರಮೇಶ ಕೋಟೆ, ಕೆ. ರಾಘವೇಂದ್ರ, ವಿನಯ ಆಚಾರ್ಯ, ಬೆಟ್ಟ ಜಯರಾಮ ಭಟ್, ದಿನೇಶ್ ರಾವ್, ಬಾಲಕೃಷ್ಣ ಭಟ್, ಕೆಮ್ಮಟ್ಟು ಸ್ವರ್ಣ ಭಟ್, ವಕೀಲೆ ವಿಧ್ಯಾ ಭಟ್, ನಮಿತಾ ರಾವ್, ಚೈತನ್ಯ ಭಟ್, ಪ್ರವೀಣ ಭಟ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.
