ಸರ್ಕಾರಿ ಬಸ್ ಸೇವೆಗೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆ ಬೈಂದೂರು ತಾಲೂಕಿನ ನಾಡ, ಪಡುಕೋಣೆ, ಹಡವು, ಬಡಾಕೆರೆ, ಹಕ್ಲಾಡಿ ಗ್ರಾಮಸ್ಥರಿಂದ ಮಂಗಳೂರಿನ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರು ಡಿವೈಎಫ್ಐ, ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಬೈಂದೂರು ತಾಲೂಕು ನಾಡ, ಹಡವು, ಬಡಾಕೆರೆ, ಕೊಲ್ಲೂರು, ಕುಂದಾಪುರ ತಾಲೂಕು ಆಲೂರು, ಹಕ್ಲಾಡಿ, ಗುಲ್ವಾಡಿ ಗ್ರಾಮಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
“ಕಳೆದ ನಾಲ್ಕು ತಿಂಗಳಿನಿಂದ ಗ್ರಾಮ ಪಂಚಾಯಿತಿ ಮುಂಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಬೇಡಿಕೆ ಈಡೇರದೇ ಇರುವುದರಿಂದ 100 ಕಿಮೀ ಗೂ ಹೆಚ್ಚು ದೂರ ಇರುವ ಮಂಗಳೂರಿಗೆ ಬಂದು ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವಂತಾಗಿದೆ” ಎಂದು ಪ್ರತಿಭಟನಾಕಾರರು ಹೇಳಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಯೋಜನೆಯ ಫಲ ತಮಗೆ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, “ಗ್ರಾಮಗಳಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳು ಓಡಾಡದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತಲುಪಲು, ಕಾರ್ಮಿಕರು, ನೌಕರರು ಉದ್ಯೋಗದ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ” ಎಂದು ಅಲವತ್ತುಕೊಂಡರು.
ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು.
ಶೀಘ್ರವೇ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಯತ್ನಿಸುವುದಾಗಿ ತಿಳಿಸಿದ್ದು, ಸದರಿ ಗ್ರಾಮಗಳಿಗೆ ಬಸ್ ಓಡಿಸಲು ಕೆಎಸ್‌ಆರ್‌ಟಿಸಿಗೆ ಅನುಮತಿ ನೀಡುವಂತೆ ಈಗಾಗಲೆ ಆರ್‌ಟಿಒಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೆ-ಸೆಟ್ ಪರೀಕ್ಷೆ-2023; ಆನ್‌ಲೈನ್ ತರಬೇತಿಗೆ ಚಾಲನೆ
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ನಾಡ ಗ್ರಾಮ ಪಂಚಾಯತ್ ಸದಸ್ಯ, ಕಾರ್ಮಿಕ ನಾಯಕ ರಾಜು ಪಡುಕೋಣೆ, ಸಿಪಿಐಎಂ ಹಿರಿಯ ನೇತಾರ ಕೆ ಶಂಕರ್, ವೆಂಕಟೇಶ ಕೋಣಿ, ಸ್ಥಳೀಯ ಪ್ರಮುಖರುಗಳಾದ ರಾಜೇಶ್ ಪಡುಕೋಣೆ, ನಾಗರತ್ನ ನಾಡ, ಶೀಲಾವತಿ ಹಡವು, ಗ್ರಾಪಂ ಸದಸ್ಯೆ ಶೋಭಾ, ನಿಸರ್ಗ ಪಡುವರಿ, ನಿಸರ್ಗ ಪಡುಕೋಣೆ, ಬಲ್ಕೀಸ್ ಕುಂದಾಪುರ, ರೊನಾಲ್ಡ್ ರಾಜೇಶ್ ಬೈಂದೂರು, ಡಿವೈಎಫ್ಐ ದಕ ಜಿಲ್ಲಾ ಮುಖಂಡರಾದ ಬಿಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರಿಜ್ವಾನ್ ಹರೇಕಳ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ ಸೇರಿದಂತೆ ಇತರರು ಇದ್ದರು.