ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಇನ್ನೊಂದು ಕೈಯಲ್ಲಿ ಹಿಡಿದಿದ್ದ ಮೊಬೈಲ್ ನೋಡಿಕೊಂಡೇ ಸ್ಟೇರಿಂಗ್ ತಿರುಗಿಸುತ್ತ ಸಿಟಿ ಬಸ್ ಓಡಿಸುತ್ತಿದ್ದ ಚಾಲಕನ ನಿರ್ಲಕ್ಷ್ಯವನ್ನು ಬಸ್ ಪ್ರಯಾಣಿಕರೊಬ್ಬರು ವೀಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಿಂದ ತಲಪಾಡಿ ನಡುವೆ ಓಡಾಟ ನಡೆಸುವ 42 ರೂಟ್ ಸಂಖ್ಯೆಯ “ಸೈಂಟ್ ಆಂಟನಿ” ಸಿಟಿ ಬಸ್ಸಿನ ಚಾಲಕ ನಿರ್ಲಕ್ಷ್ಯದಿಂದ ಬಸ್ಸು ಚಲಾಯಿಸಿರುವ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನದ ವೇಳೆ ಪ್ರಯಾಣಿಕರಿಂದ ತುಂಬಿದ್ದ ಬಸ್ಸು ಮಂಗಳೂರಿನಿಂದ ತಲಪಾಡಿಗೆ ಸಾಗುತ್ತಿದ್ದ ವೇಳೆ ಚಾಲಕ ಮೊಬೈಲ್ ನೋಡಿಕೊಂಡು ಒಂದೇ ಕೈಯಲ್ಲಿ ಸ್ಟೇರಿಂಗ್ ತಿರುಗಿಸಿ ಬಸ್ ಚಲಾಯಿಸಿರುವುದು ಕಂಡುಬಂದಿದೆ.
ಬಸ್ಸಿನ ಎದುರಿನ ಕ್ಯಾಬಿನ್ ಸೀಟಿನಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕರೊಬ್ಬರು ಚಾಲಕನ ನಡೆಯಿಂದ ಕುಪಿತಗೊಂಡಿದ್ದು, ಜಪ್ಪಿನಮೊಗರುವಿಗೆ ಬಸ್ ತಲುಪಿದಾಗ ತನ್ನ ಮೊಬೈಲಲ್ಲಿ ಅಜಾಗರೂಕತೆಯ ಚಾಲನೆಯ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಚಾಲಕನನ್ನು ನಂಬಿಯೇ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ನಂಬಿಕಸ್ಥ ಚಾಲಕನೇ ಈ ರೀತಿ ಯಾರ ಗೊಡವೆ ಇಲ್ಲದೆ ಮೊಬೈಲ್ ನೋಡಿಕೊಂಡು ಬಸ್ ಚಲಾಯಿಸುವಾಗ ಹೆಚ್ಚು ಕಡಿಮೆಯಾದರೆ ಯಾರು ಹೊಣೆ?. ಚಾಲನೆಯಲ್ಲಿ ಮೊಬೈಲ್ ಬಳಸಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸುವ ಹಕ್ಕು ಆರ್‌ಟಿಒ ಅಧಿಕಾರಿಗಳಿಗೆ ಇದೆ. ಇಂತಹ ಬೇಜವ್ದಾರಿ ಚಾಲಕರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ತಪ್ಪಿತಸ್ಥ ಬಸ್ ಚಾಲಕನ್ನು ಈಗಾಗಲೇ ಗುರುತಿಸಿದ್ದು, ಅವರ ವಿರುದ್ಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಅವರ ಡಿಎಲ್ ರದ್ದುಗೊಳಿಸಲು ಆರ್‌ಟಿಒಗೆ ಕಳುಹಿಸಲಾಗುವುದು” ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.