ಮನೆಯ ಬಳಿ ಕಂಬದಿಂದ ವಿದ್ಯುತ್ ಪ್ರವಹಿಸಿ ಯುವತಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿ ಸುರಿಯುತ್ತಿರವ ಭಾರೀ ಮಳೆಗೆ ಎರಡು ದಿನಕ್ಕೆ 7 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ(20) ಮೃತ ಯುವತಿ. ಪಾರ್ಸೆಲ್ ತೆಗೆದುಕೊಳ್ಳಲು ಮನೆಯಿಂದ ಹೊರಗೆ ಬಂದಾಗ ಘಟನೆ ಸಂಭವಿಸಿದೆ. ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿ ಪ್ರತೀಕ್ಷಾ ಮೃತಪಟ್ಟಿದ್ದಾರೆ.
ಕೊಕ್ಕಡದಲ್ಲಿ ಮೆಡಿಕಲ್ ಶಾಪ್‌ನಲ್ಲಿ ಪ್ರತೀಕ್ಷಾ ಕೆಲಸ ಮಾಡುತ್ತಿದ್ದರು. ಸದ್ಯ ಯುವತಿಯ ಮೃತದೇಹವನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರಲ್ಲಿ ಮುಂದುವರಿದ ದುರಂತ: ವಿದ್ಯುತ್ ತಂತಿ ಬಿದ್ದು ದಾರುಣ ಅಂತ್ಯ ಕಂಡ ಇಬ್ಬರು ರಿಕ್ಷಾ ಚಾಲಕರು
ಕರಾವಳಿಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಸಾವು-ನೋವುಗಳು ಸಂಭವಿಸುತ್ತಿರುವುದು ವರದಿಯಾಗುತ್ತಲೇ ಇದೆ. ಇತ್ತೀಚೆಗೆ ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಮೃತಪಟ್ಟಿದ್ದರು. ಗಾಳಿ ಮಳೆಗೆ ನೆಲಕ್ಕುರಿಳಿದ ವಿದ್ಯುತ್ ತಂತಿ ಸ್ಪರ್ಶಿಸಿ ಆಟೋ ಚಾಲಕರಿಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಯುವತಿ ಮೃತಪಟ್ಟಿರುವುದು ತಿಳಿದುಬಂದಿದೆ.
