ಲೋಕಸಭಾ ಚುಣಾವಣೆಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಮಂಗಳವಾರ (ಮಾ.12) ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕರಾಗಿ ಮಾತನಾಡಿದ್ದಾರೆ. “ಟಿಕೆಟ್ ಮಿಸ್ ಆದ್ರೆ ನನಗೆ ಏನು ಬೇಸರ ಇಲ್ಲ. ಪಕ್ಷದ ಕೆಲಸ ಮಾಡ್ತೇನೆ. ಪಕ್ಷ ಗುಡಿಸು ಅಂದ್ರೆ ಗುಡಿಸುತ್ತೇನೆ, ಒರಸು ಅಂದ್ರೆ ಒರಸುತ್ತೇನೆ, ನನಗೆ ಯಾವ ಬೇಸರವೂ ಇಲ್ಲ” ಎಂದಿದ್ದಾರೆ.
“ಟಿಕೆಟ್ ನಿರಾಕರಣೆಯಾದರೆ ನನಗಂತು ಅಸಮಾಧಾನ ಇಲ್ಲ. ಅಸಮಾಧಾನ ಯಾಕೆ? ಪಕ್ಷ ನನಗೆ ಮೂರು ಅವಧಿ ಅವಕಾಶ ನೀಡಿದೆ. 15 ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದೆ” ಎಂದರು.
“ನಮ್ಮ ಪಾರ್ಟಿಯಲ್ಲಿ ತುಳಿಯುವ ಕೆಲಸ ನಡೆಯಲ್ಲ. ಬೆಳೆಸುವ ಕೆಲಸ ನಡೆಯುತ್ತೆ, ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ಕೆಲಸ ಮಾಡಿಕೊಂಡಿದ್ದೆ, ಬಿಜೆಪಿಯ ಕೆಲಸ ಮಾಡೋ ಅಂದ್ರು, ಆಕೆಲಸ ಮಾಡಿದ್ದೇನೆ. ಯಾವ ಪಾರ್ಟಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ರಾಜ್ಯಾಧ್ಯಕ್ಷ ಮಾಡ್ತಾರೆ? ನನಗೆ ಇಂತಹ ಅವಕಾಶ ಪಕ್ಷ ಕೊಟ್ಟಿದೆ. ಅದರ ಬಗ್ಗೆ ತೃಪ್ತಿ ಇದೆ” ಎಂದು ನಳಿನ್ ಹೇಳಿದರು.
“ಅವಕಾಶ ಸಿಕ್ಕಾಗ ನನಗೆ ನ್ಯಾಯ, ಸಿಕ್ಕಿದೆ ಅವಕಾಶ ಸಿಗ್ಲಿಲ್ಲ ಅಂದಾಗ ಅನ್ಯಾಯ ಆಗಿದೆ ಅನ್ನುವ ಜಾಯಮಾನ ನನ್ನದಲ್ಲ. ಪಾರ್ಟಿ ಏನು ಹೇಳುತ್ತೋ ಆ ಕೆಲಸ ಮಾಡುವವರು ನಾವು, ಗುಡಿಸಿ ಅಂದರೆ ಗುಡಿಸುವವರರು, ಒರೆಸಿ ಎಂದರೆ ಒರೆಸುವವರು. ರಾಷ್ಟ್ರೀಯ ನಾಯಕರ ಚಿಂತನೆಗಳಿಗೆ, ಅವರ ನಿರ್ಧಾರಕ್ಕೆ ನಾನು ಬದ್ಧ” ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.