ದಕ್ಷಿಣ ಕನ್ನಡ ಜಿಲ್ಲೆ ಕಡಬ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ವಿದ್ಯಾರ್ಥಿನಿಯರನ್ನು ಕರ್ನಾಟಕ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿಯಾಗಿ ವಿದ್ಯಾರ್ಥಿನಿಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಲಾ ₹4 ಲಕ್ಷ ಚಿಕಿತ್ಸಾ ಪರಿಹಾರ ನೀಡಲಾಗುವುದು. ವಿದ್ಯಾರ್ಥಿನಿಯರು ಮತ್ತೆ ಪರೀಕ್ಷೆ ಬರೆಯಬೇಕೆಂದು ಹೇಳಿದ್ದು, ಈ ಕುರಿತು ಶಿಕ್ಷಣ ಸಚಿವರ ಬಳಿ ಮಾತನಾಡುತ್ತೇವೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ತೀವ್ರ ಗಾಯವಾಗಿದ್ದು ಅವರಿಗೆ ವಾರದ ಬಳಿಕ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ವೈದ್ಯರು ಹೇಳಿದ್ದಾರೆ. ಪ್ಲಾಸ್ಟಿಕ್ ಸರ್ಜರಿಗೆ ತಗಲುವ ವೆಚ್ಚ ₹20 ಲಕ್ಷವನ್ನು ಪರಿಹಾರವಾಗಿ ನೀಡುತ್ತೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಡಬ | ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ; ಕಿಡಗೇಡಿ ಬಂಧನ
“ಆರೋಪಿ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಆ್ಯಸಿಡ್ ತಂದಿದ್ದನೆಂದು ಪೊಲೀಸರು ಹೇಳಿದ್ದಾರೆ. ಆ್ಯಸಿಡ್ ತೀವ್ರ ಪ್ರಮಾಣದ್ದಾಗಿದ್ದರೆ ದೊಡ್ಡ ಪ್ರಮಾಣದಲ್ಲಿ ಗಾಯವಾಗುತ್ತಿತ್ತು. ಎಲ್ಲ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
