ಕರ್ನಾಟಕ ರಾಜ್ಯದ 69ನೇ ರಾಜ್ಯೋತ್ಸವದ ಸಂಭ್ರಮದ ನಡುವೆ ಕಾಸರಗೋಡು ಕನ್ನಡ ಮಕ್ಕಳ ಕೊರಗು ಕೊನೆಯಾಗದಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕಿ, ಕರಾವಳಿ ವಾಚಕಿಯರ ಮತ್ತು ಲೇಖಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ನವೆಂಬರ್ 1ರಂದು ಕಲ್ಕೂರ ಪ್ರತಿಷ್ಠಾನದಿಂದ ಶಾರದಾ ವಿದ್ಯಾಲಯದ ಸಭಾಭವನದಲ್ಲಿ ನಡೆದ “ರಾಜ್ಯೋತ್ಸವ ಸಂದೇಶ ಹಾಗೂ ಗೌರವ ಸನ್ಮಾನ”ದ ನಂತರ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಅಚ್ಚಕನ್ನಡದ ಪ್ರದೇಶ ಕಾಸರಗೋಡು ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಕನ್ನಡವನ್ನೇ ಉಸಿರಾಡುತ್ತಿದ್ದರೂ ಇನ್ನೂ ಕೂಡ ಕನ್ನಡಾಂಬೆಯ ಮಡಿಲಿನಲ್ಲಿ ಸೇರಲಾಗದೆ ಗೋಳಾಡುತ್ತಿದೆ. ಕನ್ನಡ ನಾಡಿನ ಸಮಸ್ತ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿರುವ ಕಾಸರಗೋಡಿನ ಕನ್ನಡಿಗರನ್ನು ಕಣ್ಣೆತ್ತಿ ನೋಡಬೇಕಾಗಿದೆ” ಎಂದರು.
“ಕಾಸರಗೋಡು ಕರ್ನಾಟಕದಲ್ಲಿ ವಿಲೀನವಾಗಲು ಕಳ್ಳಿಗೆ, ಕುಣಿಕುಳ್ಳಾಯ, ಕಯ್ಯಾರ ಮುಂತಾದ ಅನೇಕ ಮಹನೀಯರು ಕಾಸರಗೋಡಿನಲ್ಲಿ ಹೋರಾಡಿದ್ದರು. ನಮ್ಮ ಮನೆಯ ಸ್ವತಃ ಅಣ್ಣನೇ ಜೈಲಿಗೆ ಹೋದದ್ದು, ಈಗ ಇತಿಹಾಸವಾಗಿಯೇ ಉಳಿಯಿತೇ ವಿನಃ ಫಲ ದೊರೆಯಲಿಲ್ಲ. ಆದರೆ ಏಕೀಕರಣವಾಗಿ 69 ವರ್ಷ ಸಂದರೂ ಈವರೆಗೆ ಕಾಸರಗೋಡಿನ ಕನ್ನಡಿಗರು ವಿಲೀನಕ್ಕಾಗಿ ಕಾಯುತ್ತಲೇ ಇದ್ದಾರೆ. ಕಾಸರಗೋಡಿನ ಕನ್ನಡಿಗರು ಕನ್ನಡವನ್ನೇ ಉಸಿರಾಡಿ ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನು ನಿರಂತರ ಮಾಡುತ್ತ ಜಗದಗಲ ಮಿಂಚುತ್ತಿದ್ದಾರೆ” ಎಂದರು.
“ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ 69ನೇ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಅನೇಕ ಸ್ಪರ್ಧೆಗಳಲ್ಲಿ ಕಾಸರಗೋಡಿನ ಪ್ರತಿಭೆಗಳು ಹಾಗೂ ಮಹಾರಾಷ್ಟ್ರದ ಪ್ರತಿಭಾವಂತರು ಬಹುಮಾನಗಳನ್ನು ಪಡೆದಿರುವುದು ಇದಕ್ಕೆ ಸಾಕ್ಷಿಯೆಂದು ಮನತುಂಬಿ ಹೇಳಿದರು. ನಾಟ್ಯ ವಿಶಾರದೆ ಕಮಲಾ ಭಟ್ ನೃತ್ಯ ಸಾಧನೆಗೆ ರಾಜ್ಯೋತ್ಸವ ಗೌರವ ಪ್ರಶಸ್ತಿ ನೀಡುವುದರ ಮೂಲಕ ಪ್ರತಿಷ್ಠಾನ ಉತ್ತಮ ಕೆಲಸ ಮಾಡಿದೆ” ಎಂದು ಶುಭ ಹಾರೈಸಿದರು.
ಖ್ಯಾತ ವೈದ್ಯರು ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶಾಂತರಾಮ ಶೆಟ್ಟಿ ರಾಜ್ಯೋತ್ಸವ ಸಂದೇಶದಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಕುರಿತಾಗಿ ಮಾರ್ಮಿಕವಾದ ವಿಷಯಗಳನ್ನು ಪ್ರತಿಪಾದಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ಫ್ಲೈ ಓವರ್; ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲವೆಂದ ಸಚಿವ ಸತೀಶ ಜಾರಕಿಹೊಳಿ
ಶಾಸಕ ವೇದವ್ಯಾಸ ಕಾಮತ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ ಸಿ ಭಂಡಾರಿ ಮತ್ತಿತರರು ಸೇರಿ ಖ್ಯಾತ ಕಲಾವಿದ ಸ್ಯಾಕ್ಸೋಫೋನ್, ವಾದಕ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಹಾಗೂ ಹರಿದಾಸ ಜಯಾನಂದ ಹೊಸದುರ್ಗ ಕಾಸರಗೋಡು ಇವರನ್ನು ಹಾಗೂ ನಾಟ್ಯ ವಿದುಷಿ ಕಮಲಾ ಭಟ್ಟ ಅವರನ್ನು ಶಾಲು, ಸ್ಮರಣಿಕೆ ಹಾಗೂ ಫಲಕಾಣಿಕೆ ನೀಡಿ ಸನ್ಮಾನಿಸಿದರು. ಮೇಯರ್ ಮನೋಜ್ ಕುಮಾರ್ ಕನ್ನಡ ಧ್ವಜಾರೋಹಣ ಮಾಡಿ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಎಂ ಬಿ ಪುರಾಣಿಕ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ, ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ ಸದಾನಂದ ಪೆರ್ಲ ಉಪಸ್ಥಿತರಿದ್ದರು.
ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕು ಇದಕ್ಕಿರುವ ಒಂದೇ ಪರಿಹಾರ ಎಂದರೆ ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಅಂದರೆ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ತಿರಸ್ಕರಿಸಿ ಕರ್ನಾಟಕದಲ್ಲಿ ಒಂದು ಕನ್ನಡ ಪಕ್ಷವನ್ನು ಅಧಿಕಾರಕ್ಕೆ ತರುವುದು ಆದರೆ ಇದನ್ನು ಮಾಡುವವರು ಯಾರು?