ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಬಾಹುಬಲಿ ಪ್ರತಿಮೆಗೆ ಫೆ.22 ರಿಂದ ಮಾರ್ಚ್ 1ರ ವರಗೆ ಮಹಾಮಸ್ತಾಕಾಭಿಷೇಕ ನಡೆಯಲಿದೆ.
ಈ ಬಗ್ಗೆ ಮಸ್ತಕಾಭಿಷೇಕ ಸಮಿತಿ ಕಾರ್ಯಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಜೈನ ಧರ್ಮದ ಸಂಪ್ರದಾಯದಂತೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಮಸ್ತಕಾಭಿಷೇಕಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪದ್ಮಪ್ರಸಾದ್ ಅಜಿಲರು ತಿಳಿಸಿದ್ದಾರೆ.
ಮಸ್ತಕಾಭಿಷೇಕಕ್ಕೆ ಪ್ರತಿ ದಿನ 30 ಜನ ಭಾಗವಹಿಸುವ ನಿರೀಕ್ಷೆ ಇದೆ, ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಲಾಗಿದೆ, ಇದಕ್ಕಾಗಿ 200 ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ, ಕುಡಿಯುವ ನೀರು, ವಾಹನ ಪಾರ್ಕಿಂಗ್, ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತೀ ದಿನವೂ ಬೆಳಿಗ್ಗೆ ಪೂಜೆ, ಜಿನಭಜನೆ, ಅಪರಾಹ್ನ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಂಜೆ 5.30ರಿಂದ ರಾತ್ರಿ 10.00ಗಂಟೆ ತನಕ ಮಸ್ತಕಾಭಿಷೇಕ ನಡೆಯಲಿದೆ ಎಂದು ಪದ್ಮಪ್ರಸಾದ್ ಅಜಿಲರು ವಿವರ ನೀಡಿದರು.
ಸರ್ಕಾರದ ನೆರವು
ಮಹಾಮಸ್ತಕಾಭಿಷೇಕದ ಪ್ರಯುಕ್ತ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯಿಂದ 1 ಕೋಟಿ ನೆರವು ಈಗಾಗಲೇ ಮೂಲ ಸೌಕರ್ಯ ಅಭಿವೃದ್ಧಿಗೆ ಮಂಜೂರಾಗಿದೆ. ಇದರಲ್ಲಿನ ಬಾಕಿ ಉಳಿಕೆ ಮೊತ್ತದಲ್ಲಿ ಸ್ಥಳೀಯ ಎರಡು ಬಸದಿಗಳನ್ನು ಕೂಡ ಅಭಿವೃದ್ಧಿ ಪಡಿಸಲಾಗುವುದು ಎಂದು ಪದ್ಮಪ್ರಸಾದ್ ಅಜಿಲರು ತಿಳಿಸಿದರು.
ಮುಖ್ಯಮಂತ್ರಿ ನೆರವು
ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ವಿಶೇಷ ನೆರವು ನೀಡಬೇಕೆಂದು ಮುಖ್ಯಮಂತ್ರಿ ಅವರನ್ನು ಮನವಿ ಮಾಡಿದ್ದೇವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂಪಾಯಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಈ ಅನುದಾನದಿಂದ ನೂತನ ಪ್ರವಚನ ಮಂದಿರ ನಿರ್ಮಿಸಲಾಗುವುದು ಎಂದು ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಧ್ಯಕ್ಷ ಡಾ.ಪದ್ಮಪ್ರಸಾದ್ ಅಜಿಲರು ವಿವರ ನೀಡಿದರು.