ಮಂಗಳೂರಿಗೆ ನೀರು ಒದಗಿಸುವ ಏಕೈಕ ಜಲಮೂಲ ತುಂಬೆ ಅಣೆಕಟ್ಟೆ ಬರಿದಾಗುತ್ತಿರುವ ಕಾರಣ, ಎರಡು ದಿನಗಳ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಯೋಜಿಸಿದೆ.
ಹವಾಮಾನ ಇಲಾಖೆಯು ಜೂನ್ 4ರಂದು ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಲಿವೆ ಎಂದು ಹೇಳಿದೆ. ಆದರೂ, ನೀರಿನ ಕೊರತೆಯನ್ನು ನಿಭಾಯಿಸಲು ಮತ್ತು ಕೆಲವೆಡೆ ಅಗತ್ಯ ಪೈಪ್‌ಲೈನ್ ಮರುಜೋಡಣೆ ಕಾಮಗಾರಿ ನಡೆಸಲು ಎರಡು ದಿನಗಳ ಕಾಲ ನೀರಿನ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.
ಈ ಬಗ್ಗೆ ಗುರುವಾರ ಸುತ್ತೋಲೆ ಹೊರಡಿಸಿರುವ ಎಂಸಿಸಿ, “ಜೂನ್ 4ರ ಬೆಳಿಗ್ಗೆ 6 ರಿಂದ ಜೂನ್ 6ರ ಬೆಳಿಗ್ಗೆ 6ರವರೆಗೆ ನಗರದಲ್ಲಿ ನೀರು ಸರಬರಾಜು ಸಂಪೂರ್ಣ ವ್ಯತ್ಯಯವಾಗಲಿದೆ” ಎಂದು ಹೇಳಿದೆ.
ಈ ಎರಡು ದಿನಗಳಲ್ಲಿ, ತುಂಬೆ ಅಣೆಕಟ್ಟೆಯ ಬೆಂದೂರ್‌ವೆಲ್ ಸ್ಟ್ರೆಚ್‌ನಲ್ಲಿ 1,000 ಎಂಎಂ ಪೈಪ್‌ಲೈನ್ ಮತ್ತು ಕೊಟ್ಟಾರ ಚೌಕಿಯಲ್ಲಿ 900 ಎಂಎಂ ಪೈಪ್‌ಲೈನ್ಅನ್ನು ಬದಲಾಯಿಸಿಲು ಎಂಸಿಸಿ ಯೋಜಿಸಿದೆ.
ತುಂಬೆ ಅಣೆಕಟ್ಟಿನ ನೀರಿನ ಮಟ್ಟವು ಗರಿಷ್ಠ ಸಂಗ್ರಹಕ್ಕಿಂತ 2.2 ಮೀಟರ್‌ಗೆ ಇಳಿದಿದೆ. ಅಣೆಕಟ್ಟೆಯ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಪೂರ್ವ ತುಂತುರು ಮಳೆಯಿಂದಾಗಿ ತುಂಬೆ ಬ್ಯಾರೇಜ್‌ನ ಮೇಲ್ಭಾಗದ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.