ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಕೋಮು ಗಲಾಟೆಯ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಪೊಲೀಸ್ ಇಲಾಖೆ, ಸುಮಾರು 36 ಮಂದಿ ರೌಡಿಶೀಟರ್ ಹಾಗೂ ರೌಡಿಗಳನ್ನು ಗಡೀಪಾರು ಮಾಡಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಬಗ್ಗೆ ಸುಮಾರು 36 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, “ಒಟ್ಟು 36 ಆಸಾಮಿಗಳನ್ನು ಗಡೀಪಾರು ಮಾಡುವ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾಗಿದ್ದ ಯುವತಿ ಸೌಜನ್ಯ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ, ಸಂಘಪರಿವಾರದ ಅರುಣ್ ಕುಮಾರ್ ಪುತ್ತಿಲ, ಭರತ್ ಕುಮ್ದೇಲು ಸೇರಿದಂತೆ ಒಟ್ಟು 36 ಜನರ ಪಟ್ಟಿಯನ್ನು ಪೊಲೀಸ್ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡೀಪಾರು ಬಗ್ಗೆ ನೋಟಿಸ್ ನೀಡಲಾಗಿದ್ದು ಜೂನ್ 6ರಂದು ವಿಚಾರಣೆ ಹಾಜರಾಗಲು ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಬೆಳ್ಳಾರೆ, ವಿಟ್ಲ ಠಾಣಾ ವ್ಯಾಪ್ತಿಯ ರೌಡಿ ಲಿಸ್ಟ್ ಹೊಂದಿರುವ ಹಿಂದೂ ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ಸಂಘಪರಿವಾರದಲ್ಲಿ ಗುರುತಿಸಿಕೊಂಡವರ ಪಟ್ಟಿ ರೆಡಿ ಮಾಡಿದ್ದಾರೆ. ಇವರೆಲ್ಲರನ್ನೂ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದು, ಈ ಪಟ್ಟಿಯಲ್ಲಿರುವ ಒಟ್ಟು 36 ಮಂದಿಯಲ್ಲಿ 15 ಮಂದಿ ಮುಸ್ಲಿಮರಿದ್ದಾರೆ.

