ದಕ್ಷಿಣ ಕನ್ನಡ | ಭೋವಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರೆ ಪ್ರತಿಭಟನೆ; ದಸಂಸ ಎಚ್ಚರಿಕೆ

Date:

Advertisements

ಭೋವಿ ಸಮುದಾಯದವರಿಗೆ ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಮಾಣ ಪತ್ರ ನೀಡಬೇಕು, ನೀಡಬಾರದು ಎಂಬ ಕೂಗು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೇಳಿಬಂದಿದ್ದು, ಕರ್ನಾಟಕ ಭೋವಿ ಸಮಾಜ ಸೇವಾ ಸಂಘ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ಸಾಂಕೇತಿಕ ಧರಣಿ ನಡೆಸಿದ್ದರು.

ಭೋವಿ ಜನಾಂಗ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿದ್ದರೆ, ದಲಿತ ಸಂಘರ್ಷ ಸಮಿತಿ ಯಾವುದೇ ಕಾರಣಕ್ಕೂ ಭೋವಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಮನವಿ ಮಾಡಿದ್ದಾರೆ.

“ಈ ಭೋವಿ ಜನಾಂಗವನ್ನು 1,950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿತ್ತು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗದ ಬಗ್ಗೆ ಮಾಹಿತಿ ಇದೆ. ಅದರಂತೆ 1977ರಿಂದ ನಾವು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಕ್ರಮೇಣ ಮುಂದುವರೆದುಕೊಂಡು ಬಂದಿದೆ. ಇತ್ತೀಚೆಗೆ ಕೆಲವು ವರ್ಷಗಳ ಹಿಂದಿನಿಂದ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಆದರೆ ಅಲ್ಲೊಂದು ಇಲ್ಲೊಂದು ಜಾತಿ ಪ್ರಮಾಣ ಪತ್ರ ವಿತರಿಸಿದ ಮಾಹಿತಿ ಇದೆ” ಎಂದು ಸಂಘಟಕರು ತಿಳಿಸಿದ್ದರು.

Advertisements
ಭೋವಿ ಸಮುದಾಯ 1

ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರತ್ನಾಕರ ಭೋವಿ ಕಟ್ಟೇರ್ ಮನೆ‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಸುಮಾರು 4,000 ಮಂದಿ ಮೂಲ ಭೋವಿ ಜನಾಂಗ ವಾಸ ಮಾಡುತ್ತಿದ್ದು, ಇವರೆಲ್ಲರೂ ಕರ್ನಾಟಕದ ನೈಜ ಭೋವಿ ಜನಾಂಗದವರಾಗಿದ್ದಾರೆ. ಸುಮಾರು 200 ವರ್ಷಗಳ ಹಿಂದಿನಿಂದಲೂ ಇಲ್ಲಿ ವಾಸ ಮಾಡಿಕೊಂಡಿದ್ದೇವೆ. ನಮ್ಮ ಪೂರ್ವಜರು ಮೈಸೂರು ಮಹಾರಾಜರ ಕಾಲದಲ್ಲಿ ಮೇಣೆಗಳನ್ನು ಹೊರುತ್ತಿದ್ದಿದ್ದರು ಮತ್ತು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದರು. ಆದರೆ ಪ್ರಸ್ತುತ ಸಣ್ಣಪುಟ್ಟ ಕೃಷಿ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ” ಎಂದರು.

“ಸರ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯದವರನ್ನು ಮೇಲೆತ್ತಲು ಮೀಸಲಾತಿ ಜಾರಿಗೆ ತಂದಿದ್ದು, ಅದರಂತೆ ನಮ್ಮ ಭೋವಿ ಜನಾಂಗಕ್ಕೂ ಕೂಡ ಮೀಸಲಾತಿ ನೀಡಿದ್ದಾರೆ. ನಾವು ಬೆಸ್ತರಲ್ಲದ ನೈಜ ಭೋವಿ ಜನಾಂಗದವರಾಗಿದ್ದೇವೆ. ಆದರೆ ಕೆಲವೊಂದು ಅಧಿಕಾರಿಗಳು ಬೆಸ್ತರು ಹಾಗೂ ಗಂಗಮತಸ್ಥರಿಗೆ ನೀಡುವ ಪ್ರವರ್ಗ 1ರ ಪ್ರಮಾಣ‌ ಪತ್ರವನ್ನು ನಮಗೆ ಒತ್ತಾಯಪೂರ್ವಕವಾಗಿ ನೀಡಲು ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದಿಂದ ಹಲವಾರು ಆದೇಶಗಳು, ಸುತ್ತೋಲೆಗಳು ನಮ್ಮ ಪರವಾಗಿ ಬಂದರೂ ಕೂಡಾ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಡ್ಡ ಜನಾಂಗದವರು ಭೋವಿಗಳಲ್ಲ, ಅವರು ಹೆಸರನ್ನಿಟ್ಟು ಈಗ ಭೋವಿ ಅಂತ ಮಾಡಿಕೊಂಡು ನಮಗೆ ಸಿಗುವ ಸವಲತ್ತುಗಳನ್ನು ಕಸಿಯುತ್ತಿದ್ದಾರೆ. ಅಲ್ಲದೆ ವಡ್ಡ ಜನಾಂಗಕ್ಕೆ ವಡ್ಡ ಅಂತ ಜಾತಿ ಪ್ರಮಾಣಪತ್ರ ತೆಗೆದುಕೊಳ್ಳಬೇಕೆಂದು ಆದೇಶವಾದರೂ ಕೂಡಾ ಭೋವಿಯೆಂದೇ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದ್ದಾರೆ, ಇದು ದುರಂತವೇ ಸರಿ” ಎಂದು ಹೇಳಿದರು.

ಭೋವಿ ಸಮುದಾಯ 1 1

“ಭೋವಿ ಜನಾಂಗದ ಜಾತಿ ಗೊಂದಲದ ಬಗ್ಗೆ ಸರ್ಕಾರ 2015ರಲ್ಲಿ ವಿಶೇಷ ಸದನ ಸಮಿತಿ ರಚಿಸಿ ವಿ ಎಸ್ ಉಗ್ರಪ್ಪರವರನ್ನು ಅಧ್ಯಕ್ಷರನ್ನಾಗಿ ಮಾಡಿ, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಯಿಂದ ಭೋವಿ ಜನಾಂಗದ ಬಗ್ಗೆ ವರದಿ ತರಿಸಿ, ಅಧ್ಯಯನ ಮಾಡಿ, ʼಇವರು ನಿಜವಾದ ಭೋವಿ ಜನಾಂಗ ಇವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬಹುದುʼ ಎಂದು ಶಿಫಾರಸು ಮಾಡಿತ್ತು. ಆದರೂ ಕೂಡಾ ನಮಗೆ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. 2015ರಲ್ಲಿ ಭೋವಿ ಮತ್ತು ಬೋವಿ ಗೊಂದಲದ ಬಗ್ಗೆ ಭಾರತ ಸರ್ಕಾರದ ಕಾನೂನು ಮಂತ್ರಾಲಯದಿಂದ ಅಧಿಸೂಚನೆ ಸಂಖ್ಯೆ 298 ಎಸ್‌ಎಡಿ 2015ರಲ್ಲಿ ಬೋವಿ(ಬೆಸ್ತರಲ್ಲದ)ಗಳಿಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಅವಕಾಶವಿದೆ ಎಂದು ತಿಳಿಸಿತ್ತು. ಅದರೂ ಕೂಡಾ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ” ಎಂದರು.

“ಹಿಂದೆ ನೀಡಿದ ಜಾತಿ ಪ್ರಮಾಣಪತ್ರವನ್ನು ರಿನಿವಲ್ ಮಾಡಿ ಕೊಡುತ್ತಿಲ್ಲ. ಹಿಂದೆ ತೆಗೆದುಕೊಂಡಂತಹ ಕುಟುಂಬಗಳಿಗೆ ಅಂದರೆ ತಂದೆ ತೆಗೆದುಕೊಂಡರೆ ಮಗನಿಗೆ ನೀಡುತ್ತಿಲ್ಲ, ಅಣ್ಣ ತೆಗೆದುಕೊಂಡರೆ ತಮ್ಮನಿಗೆ ನೀಡುತ್ತಿಲ್ಲ. ಈ ಸಮಸ್ಯೆಯಿಂದ ನೈಜ ಭೋವಿ ಜನಾಂಗವು ಹೈರಾಣಾಗಿ ಹೋಗಿದೆ. ತಹಶೀಲ್ದಾರರು ಸ್ಥಳ ಪರಿಶೀಲನೆ ಮಾಡಿದಾಗ ಬೆಸ್ತರಲ್ಲದ ಬೋವಿಗಳೆಂದು ವರದಿ ನೀಡಿದ್ದರು. ಆದರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಮನವಿಯ ಜೊತೆ ಸಂಬಂಧಪಟ್ಟ ಹಲವಾರು ಅಡಕಗಳನ್ನು ಹಾಗೂ ಹೈಕೋರ್ಟಿನ ತೀರ್ಪನ್ನೂ ಕೂಡಾ ಇರಿಸಲಾಗಿದೆ. ತಾವು ಪರಿಶೀಲಿಸಬಹುದು” ಎಂದು ತಿಳಿಸಿದ್ದಾರೆ.

ಭೋವಿ ಸಮುದಾಯ 2

“ಈ ಎಲ್ಲ ಅಂಶಗಳನ್ನು ಪರಿಗಣಿಸಿ ನೈಜ ಭೋವಿ ಜನಾಂಗದವರಾದ ನಮಗೆ ಜಾತಿ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ತಹಶೀಲ್ದಾರರಿಗೆ ಆದೇಶವಿತ್ತು ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು” ಎಂದು ಸಂಘಟಕರು ಆಗ್ರಹಿಸಿದ್ದರು.

ದಲಿತ ಸಂಘರ್ಷ ಸಮಿತಿಯ ಸದಸ್ಯರು ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಮನವಿ ಮಾಡಿಕೊಂಡಿದ್ದು, ಭೋವಿ ಜನಾಂಗದವರು ನಿಜವಾದ ಅಸ್ಪೃಶ್ಯರಲ್ಲ ಅವರ ಮೂಲ ಮದ್ರಾಸ್ ಆಗಿದೆ. ಕರಾವಳಿಯಲ್ಲಿ ಭೋವಿ ಸಮುದಾಯದವರು ಯಾರೂ ಇಲ್ಲವೆಂದು ಹೇಳಿದ್ದಾರೆ.

ದಲಿತ ಮುಖಂಡ ಅಡ್ವಕೇಟ್ ಮಂಜುನಾಥ್ ಗಿಳಿಯಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ಒಂದೂವರೆ ದಶಕದಿಂದ ನಾನು ಹಲವು ಸಮುದಾಯಗಳನ್ನು ನೋಡಿತ್ತಿದ್ದೇವೆ. ಭೋವಿ ಸಮುದಾಯ ಮಾತ್ರವಲ್ಲದೆ ಅಸ್ಪೃಶ್ಯತೆಯ ನೋವನ್ನು ಅನುಭವಿಸದೇ ಇರುವ ಯಾವೆಲ್ಲ ಸಮುದಾಯಗಳಿವೆಯೋ ಅಂಥವರೂ ಕೂಡ ʼನಮ್ಮನ್ನು ಪರಿಶಿಷ್ಟ ಜಾತಿಯಲ್ಲಿ ಗುರುತಿಸಬೇಕು, ನಮ್ಮನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ಕೊಡಬೇಕುʼ ಎನ್ನುವ ಆಗ್ರಹ ಮಾಡುತ್ತಿದ್ದಾರೆ. ಈ ವಿದ್ಯಮಾನವನ್ನು ನಾನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇನೆ” ಎಂದು ಹೇಳಿದರು.

ದಲಿತ ಮುಖಂಡರು ದ.ಕ

“ಉಡುಪಿಯಲ್ಲಿರುವ ಭೋವಿ ಸಮುದಾಯದವರು ಅಸ್ಪೃಶ್ಯರಲ್ಲ. ಅವರು ಪರಿಶಿಷ್ಟ ಜಾತಿ/ಪಂಗಡಕ್ಕೆ ಒಳಪಡುವುದಿಲ್ಲ, ಅವರು ಮದ್ರಾಸ್‌ನಿಂದ ವಲಸೆ ಬಂದವರು. ಅವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಮತ್ತು ಯಾರು ನಿಜವಾಗಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ ಅವರಿಗೆ ಅನ್ಯಾಯ ಮಾಡಬಾರದು” ಎಂದು ಹೇಳಿದರು.

“ಕಳೆದ ಹಲವಾರು ವರ್ಷಗಳಿಂದ ಜಾಗೃತಿ ಮೂಡಿಸಿ ಭೋವಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆದಿದ್ದೆವು. ನಾವು ಹೇಳಿದ್ದನ್ನು ಮನಗಂಡ ಸರ್ಕಾರ ಕೂಡ ಭೋವಿ ಸಮುದಾಯ ಪರಿಶಿಷ್ಟ ಜಾತಿಗೆ ಸೇರುವುದಿಲ್ಲವೆಂದು ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿದ್ದರು. ಈಗ ರಾಜಕಾರಣಿಗಳು ಭೋವಿ ಸಮುದಾಯದ ಓಟ್ ಬ್ಯಾಂಕ್‌ಗಾಗಿ ಮತ್ತು ಸಮುದಾಯದ ತೃಷ್ಠೀಕರಣಕ್ಕಾಗಿ ಪರಿಶಿಷ್ಟ ಜಾತಿಯ ದೃಢಪತ್ರ ತೆಗೆಸಿಕೊಡುತ್ತೇವೆಂದು ಆಶ್ವಾಸನೆ ನೀಡಿರುವ ವಿಷಯಗಳೂ ಕೂಡ ನಮ್ಮ ಗಮನಕ್ಕೆ ಬಂದಿವೆ. ಜಿಲ್ಲಾಡಳಿತದ ನಿಲುವು ಈಗ ಏನಿದೆ ಅದನ್ನೇ ಮುನ್ನಡೆಸಿಕೊಂಡು ಹೋಗಬೇಕು. ಒಂದು ವೇಳೆ ಅವರಿಗೆ ದೃಢೀಕರಣ ಪತ್ರ ನೀಡಿದ್ದೇ ಆದಲ್ಲಿ ದಸಂಸ ವತಿಯಿಂದ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬಯಲಾಟ ಪ್ರದರ್ಶನ ಮಾಡಿದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆಯಲಾಗಿದೆ: ರಂಗ ನಿರ್ದೇಶಕರಿಂದ ದೂರು

ದಲಿತ ಮುಖಂಡ ಸುಂದರ್ ಮಾಸ್ಟರ್ ಈ ದಿನ.ಕಾಮ್ ಜೊತೆ ಮಾತನಾಡಿ, “ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಸಮುದಾಯದವರು ಯಾರೂ ಇಲ್ಲ. ಮದ್ರಾಸ್‌ನಲ್ಲಿ ಇರಬಹುದು, ಅಲ್ಲಿನ ಸರ್ಕಾರ ಅವರಿಗೆ ಕೊಡಬಹುದು. ಅವರು ಹೇಳುವ ಪ್ರಕಾರ 101 ಜಾತಿಗಳ ಪಟ್ಟಿಯಲ್ಲಿ ಭೋವಿ ಸಮುದಾಯ 23ನೇ ಸ್ಥಾನದಲ್ಲಿದೆ ಎಂದು ಜಾತಿ ಪಟ್ಟಿಯಲ್ಲಿ ಇರಬಹುದು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭೋವಿ ಸಮುದಾಯದವರು ಇಲ್ಲವೆಂಬುದು ಸ್ಪಷ್ಟ. ಶಾಲೆ ದಾಖಲಾತಿ ಪತ್ರವನ್ನು ಇಟ್ಟುಕೊಂಡು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅದು ತಪ್ಪು, ವಾಸ್ತವವಾಗಿ ಅವರ ಕುಲಕಸುಬು, ಸಾಂಸ್ಕೃತಿಕ ಜೀವನ, ಅಸ್ಪೃಶ್ಯತೆ ಇವೆಲ್ಲವನ್ನೂ ಮಾನದಂಡವಾಗಿ ತನಿಖೆ ಮಾಡಿ ಕೊಡಬೇಕೇ ಹೊರತು, ಶಾಲೆ ದಾಖಲಾತಿ ಮೂಲಕ ಅವರಿಗೆ ಮಾತ್ರವಲ್ಲ, ಮೊಗವೀರ ಸಮುದಾಯದವರಿಗೂ ಎಸ್‌ಸಿ ಪ್ರಮಾಣ ಪತ್ರ ಕೊಡಬಾರದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋರಾಟ ಮಾಡಿ ತಡೆದಿದ್ದೆವು. ಅವರಿಗೆ ಕೊಡುವುದಾದರೆ ಪ್ರವರ್ಗ 1ರಲ್ಲೇ ಕೊಡಬೇಕು. ಯಾವುದೇ ಕಾರಣಕ್ಕಾಗಿ ಪರಿಶಿಷ್ಟ ಜಾತಿ/ಪಂಗಡದ ಜಾತಿ ಪ್ರಮಾಣ ಪತ್ರ ನೀಡಬಾರದು” ಎಂದರು.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X