ನೆರಿಯ ಗ್ರಾಮದಲ್ಲಿ ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ತಹಶೀಲ್ದಾರ್ ಜಾಗ ಗುರುತಿಸಿದ್ದು, ಗ್ರಾಮ ಪಂಚಾಯಿತಿ ಬಳಿಯೇ ಅಂತ್ಯಕ್ರಿಯೆ ನಡೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಜುಲೈ 14ರಂದು ನೆರಿಯ ಗ್ರಾಮದ ಜನತಾ ಕಾಲೋನಿ ನಿವಾಸಿಗಳು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದರು.
ಅಂತ್ಯ ಸಂಸ್ಕಾರ ನಡೆಸಲು 25 ವರ್ಷಗಳ ಹಿಂದೆ ಇಟ್ಟಾಡಿ ಎಂಬ ಕುಂಮ್ಕಿ ಸ್ಥಳದಲ್ಲಿ ಕಾಯ್ದಿರಿಸಿದ್ದ 1.12 ಎಕರೆ ಜಾಗ ಬೇರೊಬ್ಬರ ಸ್ವಾಧೀನದಲ್ಲಿದ್ದು, ಅಲ್ಲಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ಅವರ ಮನೆಮುಂದೆ ಮೃತದೇಹ ಕೊಂಡೊಯ್ಯಲು ಮನೆಮಂದಿ ಬಿಡುವುದಿಲ್ಲವೆಂದು ಗಲಭೆ ಎಬ್ಬಿಸಿದರ ಪರಿಣಾಮ ಗ್ರಾಮಸ್ಥರು ನೆರಿಯ ಗ್ರಾಮ ಪಂಚಾಯಿತಿ ಎದುರು ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು “ಇಂದೇ ಸ್ಶಾನ ಭೂಮಿಗೆ ಜಾಗ ಗುರುತಿಸಿ ಕೊಡಬೇಕು, ಅದೇ ಜಾಗದಲ್ಲಿ ಮೃತದೇಹದ ಅಂತ್ಯಸಂಸ್ಕಾರ ಮಾಡಲಾಗುವುದು” ಎರಂದು ಪಟ್ಟು ಹಿಡಿದಿದ್ದರು.
ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಂಚಾಯತ್ ಬಳಿ ಇರುವ ಜಾಗವನ್ನು ಪರಿಶೀಲಿಸಿ ಸ್ಮಶಾನಕ್ಕೆ ಬೇಕಾಗಿರುವ ಸುಮಾರು 20 ಸೆಂಟ್ಸ್ ಸ್ಥಳ ಗುರುತಿಸಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಬಳಿಕ ಅದೇ ಜಾಗದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡುವ ಮೂಲಕ ತಾರಕಕ್ಕೇರಿದ್ದ ನೆರಿಯ ಸ್ಮಶಾನ ಭೂಮಿಗಾಗಿ ನಡೆಸಿದ್ದ ಪ್ರತಿಭಟನೆ ಸುಖಾಂತ್ಯಗೊಂಡಿದೆ.
ಘಟನೆ ಹಿನ್ನೆಲೆ
ಅಂತ್ಯ ಸಂಸ್ಕಾರ ಮಾಡಲು ಸ್ಮಶಾನ ಇಲ್ಲದಿರುವುದರಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು, ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಎದುರು ಮೃತದೇಹವಿಟ್ಟು ಆಗ್ರಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿತ್ತು.
“ಕಳೆದ ಹಲವು ವರ್ಷಗಳಿಂದ ಸ್ಮಶಾನಕ್ಕಾಗಿ ಸ್ಥಳ ಮಂಜೂರುಗೊಳಿಸುವಂತೆ ಹಲವಾರು ಗ್ರಾಮ ಸಭೆಗಳಲ್ಲಿ ಬೇಡಿಕೆ ಇಟ್ಟರೂ ಯಾರು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ” ಎಂದು ನೆರಿಯದಲ್ಲಿ ಪ್ರತಿಭಟನೆ ನಡೆಸಿದ್ದರು.
“ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರೇ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.

ಜನತಾ ಕಾಲೋನಿ ನಿವಾಸಿಯೊಬ್ಬರು ಜುಲೈ 14 ರಂದು ಮೃತಪಟ್ಟಿದ್ದು, ಅವರ ಮೃತದೇಹವನ್ನು ಗ್ರಾಮ ಪಂಚಾಯಿತಿ ಎದುರು ಇಟ್ಟು ಪ್ರತಿಭಟನೆ ಮಾಡಲು ಗ್ರಾಮಸ್ಥರು ಮುಂದಾದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಮೃತರ ಮನೆಗೆ ಬಂದು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೂ ಇಷ್ಟು ವರ್ಷದ ಬೇಡಿಕೆ ಈಡೇರಿಲ್ಲ. ಸ್ಮಶಾನ ಆಗುವ ತನಕ ಪಂಚಾಯಿತಿಗೆ ಬೀಗ ಹಾಕಿ ಎಂದು ಅಧಿಕಾರಿಗಳನ್ನು ತರಾಟೆಗೆ ತಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಆರೋಪ; ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಅಮಾನತು
“ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ, ಜಾಗ ನಿಗದಿ ಪಡಿಸಬೇಕು. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಪಂಚಾಯಿತಿ ಎದುರು ಅಂತ್ಯ ಸಂಸ್ಕಾರ ನೆರವೇರಿಸುತ್ತೇವೆ” ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸುರೇಶ್ ಟಿ ಸ್ಥಳಕ್ಕೆ ಬಂದಿದ್ದು, ಸ್ಮಶಾನಕ್ಕೆ ಜಾಗ ಗುರುತಿಸಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.