ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರು ತನ್ನ ಲೇಖನ ಹಾಗೂ ವರದಿಗಳ ಮೂಲಕ ಒಂದು ತಲೆಮಾರಿನ ಮೇಲೆ ಗಾಢ ಪ್ರಭಾವ ಬೀರಿರುವ ಪತ್ರಕರ್ತ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ, ಚಿಂತಕ ಪ್ರೊ ಪುರುಷೋತ್ತಮ್ ಬಿಳಿಮಲೆ ಅಭಿಪ್ರಾಯಪಟ್ಟರು.
ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಸುಳ್ಯದ ಬಂಟಮಲೆ ಅಕಾಡೆಮಿ ಆಶ್ರಯದಲ್ಲಿ ಮಂಗಳೂರು ಬಲ್ಮಠದ ಸಹೋಯೋಗದಲ್ಲಿ ನಡೆದ ಪತ್ರಕರ್ತ ಪಾರ್ವತೀಶ್ ಬಿಳಿದಲೆ ಸಂಪಾದಿಸಿದ ʼಕಲ್ಲೆ ಶಿವೋತ್ತಮ ರಾವ್ ಜನಪ್ರಗತಿಯ ಪಂಜು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
“70ರ ದಶಕದ ಎಲ್ಲ ಚಳವಳಿಗಳನ್ನು ಬೆಂಬಲಿಸಿದ್ದ ಕಲ್ಲೆ ಶಿವೋತ್ತಮ ರಾವ್ ಅವರು ಆ ಕಾಲಘಟ್ಟದಲ್ಲಿ ಅನೇಕ ಪ್ರಗತಿಶೀಲ ಬದಲಾವಣೆಗೆ ಕಾರಣರಾದರು” ಎಂದು ಹೇಳಿದರು.
ಅಂದಿನ ಕಾಲದಲ್ಲಿ ಬ್ರಾಹ್ಮಣೇತರ ಬರಹಗಾರರನ್ನು ಹುಡುಕಿ, ಬೆನ್ನುತಟ್ಟಿ ತನ್ನ ಜನಪ್ರಗತಿ ಪತ್ರಿಕೆಯಲ್ಲಿ ಬರೆಸುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡಿದರು ಎಂದು ನೆನಪಿಸಿದರು.
“ಕಲ್ಲೆ ಶಿವೋತ್ತಮ ರಾವ್ ಅವರು ತನ್ನ ನೇರ, ನಿಷ್ಠುರ ಬರಹಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವುದರ ಜತೆಗೆ ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಿದರು. ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳ ಜಾರಿಗೂ ಕಾರಣಕರ್ತರಾದರು” ಎಂದು ಹೇಳಿದರು.
“ಇವತ್ತಿನ ಭಾರತದ ಮಾಧ್ಯಮ ಕ್ಷೇತ್ರದ ಸ್ಥಿತಿಯನ್ನು ಅಂದಿನ ಕಾಲದ ಪರಿಸ್ಥಿತಿ ಜತೆಗೆ ಹೋಲಿಸಲು ಸಾಧ್ಯವಿಲ್ಲ. ಅಂದು ಪ್ರಜಾಪ್ರಭುತ್ವ ನೈಜ ನಾಲ್ಕನೇ ಅಂಗವಾಗಿದ್ದ ಮಾಧ್ಯಮ ಇಂದು ಸರ್ಕಾರದ ತುತ್ತೂರಿಯಾಗಿದ್ದು ಮಾತ್ರವಲ್ಲದೆ, ರಾಜಕಾರಣಿಗಳ ಓಲೈಕೆಯ ಕೆಲಸವನ್ನಷ್ಟೇ ಮಾಡುತ್ತಿದೆ” ಎಂದು ಟೀಕಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಮಾತನಾಡಿ, “ತನ್ನ ರಾಜಕೀಯ ಬೆಳವಣಿಗೆಯಲ್ಲಿ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರ ಕೊಡುಗೆ ಇದೆ. ನನ್ನಲ್ಲಿ ಹಿಂದುಳಿದ ವರ್ಗದ ಬಗ್ಗೆ ರಾಜಕೀಯ ಪ್ರಜ್ಞೆ ಮೂಡಿಸಿದವರು ಶಿವೋತ್ತಮ ರಾವ್ ಅವರೇ ಆಗಿದ್ದರು. ಅವರೊಬ್ಬ ಆದರ್ಶ ಪತ್ರಕರ್ತರಾಗಿದ್ದರು” ಎಂದು ನೆನಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್
ಬಂಟಮಲೆ ಅಕಾಡೆಮಿಯು ಪ್ರಧಾನ ಮಾಡುವ ಕುವೆಂಪು ಬಂಟಮಲೆ ಪ್ರಶಸ್ತಿಯನ್ನು ಕಲ್ಲೆ ಶಿವೋತ್ತಮ ರಾವ್ ಅವರ ಪರವಾಗಿ ಅವರ ಪುತ್ರ ಅಜಿತ್ ಅಶುತೋಷ್ ಕಲ್ಲೆ ಹಾಗೂ ಪುತ್ರಿ ಅಲ್ಕಾ ಕುಮಾರ್ ಅವರು ಸ್ವೀಕರಿಸಿದರು. ಹಿರಿಯ ಶಿಕ್ಷಣ ತಜ್ಞ ಸುಕುಮಾರ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬಂಟಮಲೆ ಪ್ರತಿಷ್ಠಾನಾದ ಎ.ಕೆ.ಹಿಮಕರ ಕಾರ್ಯಕ್ರಮ ನಿರೂಪಿಸಿದರು. ಕೃತಿ ಸಂಪಾದಕ ಪಾರ್ವತೀಶ ಬಿಳಿದಾಳೆ ಕೃತಿ ಬಗ್ಗೆ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು .
