ದೋಣಿಗಳ ಮೂಲಕ ಮೀನು ಹಿಡಿದು ಬದುಕು ಸಾಗಿಸುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಆ ಕುಟುಂಬಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ ಸಂತ್ರಸ್ತರು ಭೀತಿಗೊಳಗಾಗಿದ್ದರೂ ಕೂಡ ಈವರೆಗೆ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲದಿರುವುದು ಶೋಚನೀಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಪ್ರದೇಶದ ನೇತ್ರಾವತಿ ನದಿ ದಡದಲ್ಲಿ ಕಳೆದ 20 ವರ್ಷಗಳಿಂದ ಕೊರಾಕಲ್(ದೋಣಿ) ಮೀನುಗಾರಿಕೆಯಲ್ಲಿ ತೊಡಗಿದ್ದು, ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿರುವ ಶಿಳ್ಳೇಕ್ಯಾತ ಕುಟುಂಬಗಳನ್ನು ಈಗ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 30 ಕೋಟಿ ರೂ. ವೆಚ್ಚದಲ್ಲಿ ನದಿ ತೀರದಲ್ಲಿ ನಿರ್ಮಿಸಲು ಹೊರಟಿರುವ ವಾಕಿಂಗ್ ಟ್ರ್ಯಾಕ್, ಸೈಕಲ್ ಟ್ರ್ಯಾಕ್, ಪ್ಲೇ ಏರಿಯಾದಂತಹ ಕಾಮಗಾರಿಗಳು ಅಲೆಮಾರಿ ಶಿಳ್ಳೇಕ್ಯಾತ ಸಮುದಾಯದ ಗುಡಿಸಲುಗಳಿರುವ ಜಾಗದಲ್ಲೇ ನಿರ್ಮಾಣವಾಗಲಿವೆ. ಇದರಿಂದ ಈ ಸಮುದಾಯದ 8 ಕುಟುಂಬಗಳು ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿಳ್ಳೇಕ್ಯಾತ ಅಲೆಮಾರಿ ಕುಟುಂಬಗಳು ವಾಸಿಸುತ್ತಿರುವ ಪ್ರದೇಶದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ʼಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಾಯುವಿಹಾರ ಯೋಜನೆʼ ಅಡಿ ವಾಕಿಂಗ್ ಟ್ರ್ಯಾಕ್, ಸೈಕಲ್ ಟ್ರ್ಯಾಕ್, ಪ್ಲೇ ಏರಿಯಾದಂತಹ ಪ್ರದೇಶಗಳು ನಿರ್ಮಾಣವಾಗಲಿವೆ. ಈಗಲೇ ಕನಿಷ್ಟ ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿರುವ ಕುಟುಂಗಳಿಗೆ ಈ ಯೋಜನೆಯಿಂದ ತಮ್ಮ ಸಣ್ಣ ಗುಡಿಸಲುಗಳನ್ನೂ ಕಳದುಕೊಳ್ಳುವ ಸ್ಥಿತಿ ಎದುರಾಗಿದೆ” ಎಂದು ಮರುಗಿದರು.

“ಈ ಪ್ರದೇಶದಲ್ಲಿ ಎಂಟು ಕುಟುಂಬಗಳು ವಾಸವಾಗಿದ್ದು, ಸಣ್ಣ ಮೀನುಗಾರಿಕೆಯನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡು ಬದುಕುತ್ತಿರುವ ಎಲ್ಲ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಆಶ್ರಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಈ ಹಿಂದೆಯೂ ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಆದರೂ ಕೂಡ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಆಡಳಿತವಾಗಲಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.

“ವಾಕಿಂಗ್ ಟ್ರ್ಯಾಕ್ ಮತ್ತು ಸೈಕಲ್ ಟ್ರ್ಯಾಕ್‌ನಂತಹ ಅಭಿವೃದ್ಧಿ ಯೋಜನೆಗಳನ್ನು ಯೋಜಿಸಿ ಸ್ಮಾರ್ಟ್ ಸಿಟಿ ಮಾಡಲು ಹೊರಟಿರುವ ಆಡಳಿತಕ್ಕೆ ಆ ಸಮುದಾಯಗಳ ಬದುಕಿನ ಅಭಿವೃದ್ಧಿಯ ಅರಿವೇ ಇಲ್ಲ. ಸರ್ಕಾರ ಆ ಕುಟುಂಬಗಳಿಗೆ ಆಶ್ರಯ ಒದಗಿಸುವುದನ್ನು ಪರಿಗಣಿಸದಿದ್ದರೆ ಅವರು ನಿರಾಶ್ರಿತರಾಗುತ್ತಾರೆ” ಎಂದು ಹೇಳಿದರು.
“ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ ಈವರೆಗೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ. ಮನೆಗಳನ್ನು ನೀಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಹಲವು ಇಲಾಖೆಗಳ ಅಧಿಕಾರಿಗಳಿಗೆ ಜ್ಞಾಪಕ ಪತ್ರಗಳನ್ನೂ ಸಲ್ಲಿದ್ದೇವೆ. ಆದರೂ, ಅವರಿಗೆ ಸರ್ಕಾರಿ ಯೋಜನೆಯ ಯಾವುದೇ ಪ್ರಯೋಜನಗಳನ್ನು ಈವರೆಗೆ ಒದಗಿಸಿಲ್ಲ. ಸದ್ಯ ಅವರು ಟಾರ್ಪಲ್‌ಗಳಿಂದ ನಿರ್ಮಿಸಿದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ” ಎಂದು ಹೇಳಿದರು.
“ನಾವೆಲ್ಲ ಗಲಾಟೆ ಮಾಡಿದ ಕಾರಣಕ್ಕಾಗಿ ನಾಮಕಾವಸ್ಥೆಗೆ ತಾತ್ಕಾಲಿಕವಾಗಿ ಒಂದು ಸರ್ಕಾರಿ ಜಾಗ ತೋರಿಸಿದ್ದಾರೆ. ಇನ್ನೊಂದು ದಿನ ಇನ್ನೊಂದು ಯೋಜನೆ ಬಂದರೆ ಅಲ್ಲಿಯೂ ಮತ್ತೆ ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತದೆ. ಹಾಗಾಗಿ ಶಾಶ್ವತ ವಸತಿ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಒದಗಿಸುವಂತೆ ನಮ್ಮ ಆಗ್ರಹವಾಗಿದೆ” ಎಂದು ಸಂತೋಷ್ ಬಜಾಲ್ ತಿಳಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಂತ್ರಸ್ಥ ಸಮುದಾಯಗಳು ವಾಸಿಸುತ್ತಿರುವುದು ಸರ್ಕಾರಿ ಒಡೆತನದ ಸ್ಥಳವೇ ಅಥವಾ ಖಾಸಗಿ ಸ್ಥಳವೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಳಿಕ ಸ್ಥಳಾಂತರದ ಕುರಿತು ಯೋಚಿಸಬೇಕು” ಎಂದರು.
“ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಾರ್ವಜನಿಕ ವಿಚಾರಣೆ ಕುರಿತು ಚರ್ಚಿಸಲಾಗುತ್ತದೆ. ಆ ವೇಳೆ ಇಂತಹ ಸಮುದಾಯಗಳ ಅಭಿವೃದ್ಧಿ ಕುರಿತು ಪ್ರಸ್ತಾಪ ಮಾಡುತ್ತೇನೆ. ಈ ಸದ್ಯ ಸಂತ್ರಸ್ಥ ಕುಟುಂಬಗಳ ಕುರಿತು ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಅಲ್ಲಿಯ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಮಂಗಳೂರು ತಹಶೀಲ್ದಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಂತ್ರಸ್ತ ಕುಟುಂಬಗಳ ಕುರಿತು ಯಾವುದೇ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ. ಬೋಳಾರ್ ಪ್ರದೇಶ ಎಂಸಿಸಿ ಅಡಿ ಬರುತ್ತದೆ. ಈ ಕುರಿತು ಪಾಲಿಕೆ ಅಧಿಕಾರಿಗಳೊಟ್ಟಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸಲು ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿದ್ದೀರಾ? ಗದಗ | ಈ ದಿನ.ಕಾಮ್ ಫಲಶ್ರುತಿ: ಅಲೆಮಾರಿ ಸಮುದಾಯ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
ದೋಣಿಗಳ ಮೂಲಕ ಮೀನು ಹಿಡಿದು ಬದುಕು ಸಾಗಿಸುತ್ತಿರುವ ಕಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಆ ಕಟುಂಬಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ ಸಂತ್ರಸ್ತರು ಭೀತಿಗೊಳಗಾಗಿದ್ದರೂ ಈವರೆಗೆ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲದಿರುವುದು ಶೋಚನೀಯವಾಗಿದೆ.
ಈ ದಿನ.ಕಾಮ್ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದೆ. ಅವರು ಬಿಡುವಿಲ್ಲದಿರುವುದಾಗಿ ತಿಳಿದುಬಂದಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ.