ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಆಟೋರಿಕ್ಷಾ ನಿಲುಗಡೆ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಹೊರಗಿನ ರಿಕ್ಷಾಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಿಐಟಿಯು ಸಂಯೋಜಿತ ಆಟೋ ರಿಕ್ಷಾ ಚಾಲಕರ ಫೆಡರೇಷನ್‌ನ ಉನ್ನತ ಮಟ್ಟದ ನಿಯೋಗವೊಂದು ಸಂಚಾರ ಪೊಲೀಸ್ ಅಧಿಕಾರಿ ಹಾಗೂ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿರುವ ಆಟೋರಿಕ್ಷಾ ಪಾರ್ಕಿಂಗ್ ಪ್ರದೇಶ ತೀರಾ ಅವ್ಯವಸ್ಥೆಗಳಿಂದ ಕೂಡಿದೆ. ಹೊರಗಿನ ರಿಕ್ಷಾಗಳ ಹಾವಳಿ ತೀರಾ ಮಿತಿ ಮೀರುತ್ತಿದ್ದು, ಪಾರ್ಕಿಂಗ್‌ನಲ್ಲಿ ರಿಕ್ಷಾಗಳು ಕ್ಯೂ ನಿಂತಿದ್ದರೂ ಕಣ್ಣೆದುರಲ್ಲೇ ಸರ್ವಿಸ್ ಮಾಡುತ್ತಿರುವುದರಿಂದ ಸ್ವತಃ ಪಾರ್ಕಿಂಗ್‌ನಲ್ಲಿರುವ ಸುಮಾರು 50ರಷ್ಟು ರಿಕ್ಷಾ ಚಾಲಕರಿಗೆ ದುಡಿಯಲು ಅಸಾಧ್ಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಂಗಳೂರಿನಿಂದ ಉಳ್ಳಾಲ ತಲಪಾಡಿ ಕಡೆಗೆ ಹೋಗುವ ಬಸ್‌ಗಳು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಳಿಕ ಮತ್ತೆ ರಿಕ್ಷಾ ಪಾರ್ಕಿಂಗ್ ಇರುವ ತೊಕ್ಕೊಟ್ಟು ಜಂಕ್ಷನ್ ಬಳಿಯಲ್ಲಿ ನಿಲ್ಲಿಸಿ ಅನಗತ್ಯವಾಗಿ ರಿಕ್ಷಾ ಚಾಲಕರಿಗೆ ತೊಂದರೆ ನೀಡಲಾಗುತ್ತಿದೆ. ರಿಕ್ಷಾ ಪಾರ್ಕಿಂಗ್ ಬಳಿಯಲ್ಲೇ ಡ್ರೈನೇಜ್ ತ್ಯಾಜ್ಯಗಳು ಹರಿದಾಡುತ್ತಿದ್ದು, ದುರ್ನಾತದಿಂದ ಕೂಡಿರುವ ಅಲ್ಲಿ ನಿಲ್ಲಲು ಅಸಾಧ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಸ್ಪಂದನ ಇಲ್ಲವಾಗಿದೆ. ಆದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಫೆಡರೇಷನ್ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಒತ್ತುವರಿ ತೆರವಿಗೆ ಆಗ್ರಹ
ನಿಯೋಗದಲ್ಲಿ ಆಟೋರಿಕ್ಷಾ ಚಾಲಕರ ಫೆಡರೇಷನ್‌ನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ತೊಕ್ಕೊಟ್ಟು ಜಂಕ್ಷನ್ ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರುಗಳಾದ ದಯಾನಂದ್, ನಝೀರ್, ಪುರಂದರ, ರಾಮಕೃಷ್ಣ, ಕೃಷ್ಣ ಶೆಟ್ಟಿ ಪಿಲಾರ್, ಮುತ್ತಲಿಬ್, ಅಶ್ರಫ್, ನಾರಾಯಣ, ರಮೇಶ್, ಬಶೀರ್, ಅಬ್ಬಾಸ್, ಆಫ್ರಿದ್, ಮೆಲ್ವಿನ್ ಸೇರಿದಂತೆ 50ಕ್ಕೂ ಅಧಿಕ ರಿಕ್ಷಾ ಚಾಲಕರು ಇದ್ದರು.