ಮುಸ್ಲಿಂ ಸಮುದಾಯವರೆಂದು ಭಾವಿಸಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಪತ್ನಿಯ ಮೇಲೆ ಹಿಂದುತ್ವವಾದಿ ಕೋಮು ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಬಂಟ್ವಾಳದಲ್ಲಿ ನಡೆದಿದೆ.
ನಗರದ ಬಿ.ಸಿ.ರೋಡ್‌ನಲ್ಲಿ ಪೊಲೀಸ್ ದಂಪತಿಯನ್ನು ಅಡ್ಡಗಟ್ಟಿದ ಗೂಂಡಾಗರು ಹಲ್ಲೆ ನಡೆಸಿದ್ದಾರೆ. ಅನೈತಿಕ ಪೊಲೀಸ್ ಗಿರಿ ನಡೆಸಿದ ಸಂಘಪರಿವಾರದಲ್ಲಿ ತೊಡಗಿಸಿಕೊಂಡಿರುವ ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿ ಕುಮಾರ್ ಹನಮಂತಪ್ಪ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆದಿದೆ. ಕುಮಾರ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 035(ಡಿ), 354(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಜು.27ರ ರಾತ್ರಿ ಕುಮಾರ್ ಅವರು ತಮ್ಮ ಪತ್ನಿ ಹಾಗೂ ನಾದಿನಿ ಜೊತೆ ಬಿ.ಸಿ.ರೋಡಿನ ಹೊಟೇಲ್ ಒಂದರಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಬಾರ್ ಒಂದರ ಬಳಿ ನಿಂತಿದ್ದ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಆ ಬಳಿಕ ಕುಮಾರ್ ಪತ್ನಿ ಮತ್ತು ನಾದಿನಿಯನ್ನು ವಸತಿಗೃಹದ ಬಳಿ ಬಿಟ್ಟು ಕರ್ತವ್ಯಕ್ಕೆ ಹಿಂತಿರುಗುವಾಗ, ಬೈಕ್‌ನಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಆಗ ಕುಮಾರ್ ಅವರು ತಾನು ಪೊಲೀಸ್ ಎಂದು ಹೇಳಿದರೂ ಕೇಳದ ಆರೋಪಿಗಳು, ”ನೀನು ಪೊಲೀಸ್ ಅಲ್ಲ, ನೀನು ಬ್ಯಾರಿ. ಈಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯಾ?” ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಇಲ್ಲಿನ ವಿಚಾರ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪತ್ನಿ ಅಲ್ಲಿಗೆ ಓಡಿಬಂದಾಗ ಆಕೆಯ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಗಲಾಟೆಯು ಜೋರಾಗುತ್ತಿದ್ದಂತೆ ಪೊಲೀಸ್ ವಸತಿ ಗೃಹದಲ್ಲಿದ್ದ ಸಹೋದ್ಯೋಗಿಗಳು ಹೊರಬಂದು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಗಲಾಟೆಯ ವೇಳೆ ಕುಮಾರ್ ಅವರ ಪತ್ನಿಯ ವಿಡಿಯೋವನ್ನು ಆರೋಪಿಗಳು ಚಿತ್ರೀಕರಣ ಮಾಡಿದ್ದು, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.