ಚುನಾವಣೆಗಳಲ್ಲಿ ಶಿಕ್ಷಿತರು ಮತ್ತು ಶ್ರೀಮಂತರ ಪ್ರದೇಶಗಳಲ್ಲಿಯೇ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆಯುತ್ತಿದ್ದು, ಅವರಲ್ಲಿ ಪ್ರಜ್ಞೆ ಮತ್ತು ಬುದ್ಧಿವಂತಿಕೆ ಕೊರತೆಯ ದ್ಯೋತಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅವರು ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
“ಮತದಾನ ಮಾಡಲು ಚುನಾವಣಾ ಆಯೋಗವು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರೂ ಮತದಾನ ಮಾಡಲು ಮುಂದೆ ಬಾರದಿರುವುದು ಸಂವಿಧಾನಕ್ಕೆ ಮಾಡುವ ಅಗೌರವವಾಗಿದೆ. ಬಡವರು ಮತ್ತು ಅಶಿಕ್ಷಿತರ ಪ್ರದೇಶಗಳಲ್ಲಿ ಮತದಾನ ಹೆಚ್ಚಿನ ಪ್ರಮಾಣ ನಡೆಯುತ್ತದೆ. ಆದರೆ, ಶಿಕ್ಷಿತರು ಮತ್ತು ಸಿರಿವಂತರ ಪ್ರದೇಶಗಳಲ್ಲಿ ಅಂತಹ ಉತ್ಸಾಹ ಇರುವುದಿಲ್ಲ. ಕೇವಲ ಶಿಕ್ಷಣ ಮಾತ್ರವಿದ್ದರೆ ಸಾಲದು. ಪ್ರಜ್ಞೆ ಮತ್ತು ಬುದ್ಧಿವಂತಿಕೆ ಇರಬೇಕು” ಎಂದು ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸರ್ವರಿಗೂ ಸಮಾನ ಮತದಾನದ ಹಕ್ಕನ್ನು ನೀಡಿದ ಜಗತ್ತಿನ ಮೊದಲ ದೇಶ ಭಾರತ. ಪ್ರಜಾಪ್ರಭುತ್ವದ ಹಳೆಯ ದೇಶಗಳಲ್ಲಿ ಉಳ್ಳವರಿಗೆ ಮಾತ್ರ ಸೀಮಿತವಾಗಿದ್ದ ಮತದಾನದ ಹಕ್ಕು, ಜನಸಾಮಾನ್ಯರಿಗೆ ಸಿಗಲು ಅಲ್ಲಿ ಸಾಕಷ್ಟು ಹೋರಾಟಗಳು ನಡೆಯಬೇಕಾಯಿತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಆರಂಭದಲ್ಲಿಯೇ ಎಲ್ಲರಿಗೂ ಮತದಾನದ ಹಕ್ಕು ದೊರೆಯಿತು” ಎಂದರು.
“ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಮತದಾರರ ನೋಂದಣಿಗೆ ನಾಲ್ಕು ಅರ್ಹತಾ ದಿನಾಂಕ ನಿಗದಿಪಡಿಸಲಾಗಿದೆ. ಇದನ್ನು ಉಪಯೋಗಿಸಿ ಪ್ರತಿಯೊಬ್ಬರೂ ನೋಂದಣಿ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಲಿಂಗ ತಾರತಮ್ಯ ನಿರ್ಮೂಲನೆ ಜತೆಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಡಾ ಪೂರ್ಣಿಮಾ ಕಟ್ಟಿಮನಿ
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್ ಅವರು ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ ಎ ಖಾದರ್ ಶಾ, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಚುನಾವಣಾ ತಹಶೀಲ್ದಾರ್ ದಯಾನಂದ ಇದ್ದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಿದವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.