ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್(20) ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಸುಜಾತ ಭಟ್(60) ಜುಲೈ 15 ರಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ವಕೀಲರ ಜೊತೆ ಬಂದು ದೂರು ನೀಡಿದ್ದಾರೆ.
ಅನನ್ಯ ಭಟ್ ತಾಯಿ ಸುಜಾತ ಭಟ್ ಅವರು ತಮ್ಮ ವಕೀಲರಾದ ಮಂಜುನಾಥ್.ಎನ್ ಜೊತೆಯಲ್ಲಿ ಜುಲೈ 15 ರಂದು ಬಂದು ಎಸ್ಪಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಅದರಂತೆ ದೂರು ನೀಡಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಸಮರ್ಥ್.ಆರ್.ಗಾಣಿಗೇರ ಮುಂದೆ ರಾತ್ರಿ 8 ಗಂಟೆಗೆ ಬಂದು ದೂರು ಅರ್ಜಿ ನೀಡಿದ್ದಾರೆ. ಅದರಂತೆ ಪೊಲೀಸರು ದೂರು ಸ್ವೀಕರಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ
ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್(20) ಅವರು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಇಬ್ಬರು ಸ್ನೇಹತರ ಜೊತೆ ಬಂದಿದ್ದು, ನಿಗೂಢವಾಗಿ ನಾಪತ್ತೆಯಾಗಿದ್ದರು.
ಇತ್ತೀಚೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತದೇಹ ಹೂತಿರುವುದಾಗಿ ದೂರು ನೀಡಿದ ವ್ಯಕ್ತಿ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಘಟನೆಯನ್ನು ಯೂಟ್ಯೂಬ್ ನಲ್ಲಿ ನೋಡಿ ವಕೀಲರನ್ನು ಸಂಪರ್ಕಿಸಿ ಎಸ್ಪಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ಮಗಳ ಅಸ್ಥಿಪಂಜರದ ಕಳೇಬರಹ ಹುಡುಕಿಕೊಡಬೇಕು. ಡಿಎನ್ಎ ಮಾಡಿ ಕಳೇಬರವನ್ನು ನನಗೆ ನೀಡಬೇಕು ಬಳಿಕ ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿ ಮುಕ್ತಿ ಸಿಗುಬೇಕು. ಬೇರೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಯಾರ ಮೇಲೂ ದೂರು ನೀಡಿಲ್ಲ, ನನಗೆ ಬೇರೆ ಏನೂ ಬೇಡ ಎಂದು ಮಾಧ್ಯಮಗಳಿಗೆ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಿಳಿಸಿದರು.
