ಸಂವಿಧಾನದ 75ನೇ ವರ್ಷದ ಅಂಗವಾಗಿ ರಾಜ್ಯದಲ್ಲಿ ಜನವರಿ 26ರಿಂದ ಒಂದು ತಿಂಗಳ ಕಾಲ ಸಂವಿಧಾನ ಜಾಥಾ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಿ ಸಿ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಡಾ ಬಿ ಆರ್ ಅಂಬೇಡ್ಕರ್ ಸಭಾಭವನ ಉದ್ಘಾಟಿಸಿ ಮಾತನಾಡಿದರು.
“ಸಂವಿಧಾನ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ” ಎಂದು ಹೇಳಿದರು.
“ಶೋಷಿತರಿಗೆ, ಅವಕಾಶ ವಂಚಿತರಿಗೆ ಅಂಬೇಡ್ಕರ್ ಅವರು ಪ್ರೇರಣಾ ಶಕ್ತಿಯಾಗಿದ್ದಾರೆ. ವೈಚಾರಿಕ ಆಲೋಚನೆಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ಭಾರತವು ಬಹುತ್ವದ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆ ಇರುವ ನೆಲವಾಗಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನವು ರಕ್ಷಿಸಲಿದೆ. ಪ್ರಜಾಪ್ರಭುತ್ವದ ಕತ್ತು ಹಿಚುಕುವ ಪ್ರಯತ್ನಗಳ ವಿರುದ್ಧ ನಾವು ಜಾಗೃತರಾಗಬೇಕಿದೆ. ಆದರೆ, ಇಂದು ಸಂವಿಧಾನವು ಅಪಾಯದತ್ತ ಸಾಗುತ್ತಿದೆ” ಎಂದು ಸಚಿವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಶಾಸಕರ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಇದ್ದರು.