ಮಂಗಳೂರು – ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ತುಂಬೆಯಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದ್ದ ಒಂದೂವರೆ ದಶಕದ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕುವಂತಾಗಿದ್ದು, ಮಳೆ ನೀರು ಹರಿದು ಹೋಗಲು ಮೋರಿ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ.
ಮಂಗಳೂರು – ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ತುಂಬೆ ಗ್ರಾಮದ ಬಿ.ಎ. ಕಾಲೇಜಿನ ಬಳಿಯ ತಿರುವಿನಲ್ಲಿ ಮಳೆ ನೀರು ನಿಂತು ರಸ್ತೆ ಕೊಳದಂತೆ ಆಗುತ್ತಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗುತ್ತಿತ್ತು. ಅಲ್ಲದೆ ಇಲ್ಲಿನ ರಸ್ತೆ ಅಪಾಯಕಾರಿ ತಿರುವು ಆಗಿರುವುದರಿಂದ ವೇಗವಾಗಿ ಬರುವ ವಾಹನಗಳ ಚಾಲಕರು ನೀರು ಕಂಡು ಏಕಾಏಕಿ ಬ್ರೇಕ್ ಹಾಕುವುದರಿಂದ ಸಣ್ಣ ಪುಟ್ಟ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದವು.
ಇತ್ತೀಚೆಗೆ ತುಂಬೆಯಲ್ಲಿ ನಡೆದ ‘ತುಂಬೆ ಫೆಸ್ಟ್’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲೂ ಈ ಸಮಸ್ಯೆಯ ಬಗ್ಗೆ ತುಂಬೆ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದ್ವಿಪಥ ರಸ್ತೆಯಾಗಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ಒಂದೂವರೆ ದಶಕಕ್ಕೂ ಹಿಂದೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಂಡ ಬಳಿಕ ಈ ಸಮಸ್ಯೆ ತಲೆದೋರಿತ್ತು. ಈ ಸಮಸ್ಯೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮನವಿಗಳ ಮೇಲೆ ಮನವಿಗಳನ್ನು ನೀಡಿದರೂ ಯಾವುದೇ ಸ್ಪಂದನೆ ದೊರೆಯುತ್ತಿರಲಿಲ್ಲ ಎಂದು ತುಂಬೆಯ ಜನರು ಆಕ್ರೋಶ ವ್ಯಕ್ತಡಿಸಿದ್ದರು.
ಮಳೆ ಪೂರ್ತಿ ಇಡೀ ರಸ್ತೆಯಲ್ಲಿ ಕೊಳದಂತೆ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿತ್ತು. ಮನವಿ ನೀಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸ್ಪಂದನೆ ದೊರೆಯದ ಕಾರಣ ಆಕ್ರೋಶಿತ ಗ್ರಾಮಸ್ಥರು ಇಲ್ಲಿ “ಜಿಲ್ಲೆಯ ನಂ.1 ಸಂಸದರ ಈಜು ಕೊಳ ಇದೆ, ನಿಧಾನವಾಗಿ ಚಲಿಸಿ” ಎಂದು ಫ್ಲೆಕ್ಸ್ ಅಳವಡಿಸಿದ್ದರು. ಆ ಬಳಿಕ ಇಲ್ಲಿ ನೀರು ತುಂಬಿದಾಗ ‘ಸಂಸದರ ಈಜು ಕೊಳ’ ಎಂದೇ ಜನರು ಕರೆಯುತ್ತಿದ್ದರು.
ಇದೀಗ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಅದರ ಸಲುವಾಗಿ ರಸ್ತೆಯನ್ನು ಅಗೆದು ಮೋರಿ ಅಳವಡಿಸುವ ಕಾಮಗಾರಿ ಸೋಮವಾರದಿಂದ ಆರಂಭಗೊಂಡಿದೆ. ಸುಮಾರು ಒಂದು ವಾರದ ಒಂದು ವಾರದ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
