ಈ ದಿನ ಡಾಟ್ಕಾಮ್ ಪ್ರಕಟಿಸಿದ ʼಜೈ ಹಿಂದ್-ಜಯ ಕರ್ನಾಟಕʼ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಚೇಳೈರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳೈರು, ‘ಜೈ ಹಿಂದ್–ಜಯ ಕರ್ನಾಟಕ’ ವಿಶೇಷಾಂಕವು ಕೇವಲ ಕನ್ನಡಕ್ಕೆ ಸೀಮಿತವಾಗದೆ ಇತರ ಭಾಷೆಗಳಿಗೂ ಅನುವಾದವಾಗಿ ಜನಸಾಮಾನ್ಯರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಚರಿತ್ರೆಯ ಸತ್ಯವನ್ನು ಎದುರಿಸುವ ಧೈರ್ಯ ಪ್ರತಿಯೊಬ್ಬರಲ್ಲೂ ಇರಬೇಕು. ನಾವು ಅನೇಕ ವರ್ಷಗಳಿಂದ ಕೇಳಿಕೊಂಡು ಬಂದಿರುವ ಸುಳ್ಳುಗಳನ್ನು ಮೀರಿ ಸತ್ಯದ ಮುಖಾಮುಖಿಯಾಗುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಚರಿತ್ರೆಯನ್ನು ನಾವು ಓದಿದ್ದರೂ, ಅದನ್ನು ಮತ್ತೊಮ್ಮೆ ವಿಶೇಷಾಂಕದ ರೂಪದಲ್ಲಿ ಪ್ರಕಟಿಸುವ ಅಗತ್ಯ ಏಕೆ ಎಂಬ ಪ್ರಶ್ನೆ ಸಹಜ. ಆದರೆ ಚರಿತ್ರೆಯನ್ನು ಓದುವಾಗ ಅದು ವಾಸ್ತವಿಕ ಚರಿತ್ರೆಯೋ ಅಥವಾ ಸೈದ್ಧಾಂತಿಕ ಚರಿತ್ರೆಯೋ ಎಂಬುದನ್ನು ವಿಮರ್ಶಾತ್ಮಕವಾಗಿ ಅರಿತುಕೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದರು.

ಈದಿನ.ಕಾಮ್ ಜನಸ್ಪಂದನೆಯ ಮಾಧ್ಯಮವಾಗಿ ಕನ್ನಡದ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿದ್ದು, ಕೇವಲ ಕನ್ನಡ ಭಾಷೆಯಲ್ಲದೆ ಕನ್ನಡದ ಸಾಂಸ್ಕೃತಿಕ ಅಂಗಳವನ್ನು ವಿಸ್ತರಿಸುವ ನಿಟ್ಟಿನಲ್ಲಿ 40ಕ್ಕೂ ಹೆಚ್ಚು ಉಪಭಾಷೆಗಳಲ್ಲಿ ಅಂಕಣಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
‘ಜೈ ಹಿಂದ್’ ಎಂಬ ಘೋಷಣೆಯನ್ನು ನಾವು ಪ್ರತಿದಿನ ಉಚ್ಚರಿಸುತ್ತೇವೆ. ಆದರೆ ಅದನ್ನು ಮೊದಲ ಬಾರಿಗೆ ಯಾರು, ಯಾವ ಸಂದರ್ಭದಲ್ಲಿ ಬಳಸಿದರು ಎಂಬ ಪ್ರಶ್ನೆಗೆ ಉತ್ತರವನ್ನು ಈ ವಿಶೇಷಾಂಕ ತೆರೆದಿಡುತ್ತದೆ. ಸಾಮಾನ್ಯ ಗ್ರಹಿಕೆಗಳು ಹಾಗೂ ಮತೀಯ ಪೂರ್ವಾಗ್ರಹಗಳ ನಡುವೆ ಇಂತಹ ಐತಿಹಾಸಿಕ ಸತ್ಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
‘ಲೆಜೆಂಡ್ ಆಫ್ ಹೈದರಾಬಾದ್’ ಪುಸ್ತಕದ ಉಲ್ಲೇಖ ನೀಡಿದ ಅವರು, ‘ಜೈ ಹಿಂದ್’ ಘೋಷಣೆಯನ್ನು ಹೈದರಾಬಾದ್ ಮೂಲದ ಯುವಕ ಝೈನ್-ಉಲ್-ಆಬಿದೀನ್ ಹಸನ್ ಸಫ್ರಾನಿ (ಅಬಿದ್ ಹಸನ್ ಸಫ್ರಾನಿ) ರೂಪಿಸಿದ್ದರು ಎಂದು ಆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ‘ಹಿಂದ್’ ಎಂಬ ಪದದ ಅರ್ಥವನ್ನೇ ಇಂದು ಹಲವಾರು ರೀತಿಯಲ್ಲಿ ತಿರುಚಿರುವ ಕಾರಣ ನೈಜ ಇತಿಹಾಸ ಮರೆಯಾಗುತ್ತಿದೆ. ಆದ್ದರಿಂದ ವಾಸ್ತವಿಕ ಚರಿತ್ರೆಯನ್ನು ಅರಿತುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಡಾ. ಜ್ಯೋತಿ ಚೇಳೈರು ಹೇಳಿದರು.






