ಕಾಕ್ರಾಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಅವರ ಮೇಲೆ ಇಂಕ್ (ಶಾಹಿ) ಎರಚಿರುವ ಘಟನೆ ದೆಹಲಿಯ ಜಂತರ್ಮಂತರ್ನಲ್ಲಿ ನಡೆದಿದೆ. ಇಂಕ್ ದಾಳಿ ನಡೆಸಿದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದಾಗ್ಯೂ, ಆಕೆಯ ಗುರುತು ಮತ್ತು ಕೃತ್ಯದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಲಡಾಖ್ನ ಪರಿಸರ ಕಾರ್ಯಕರ್ತ, ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬೆನ್ನಲ್ಲೇ, ಅಭಿಜೀತ್ ದೀಪ್ಕೆ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ಘೋಷಿಸಿದ್ದು, ಪ್ರತಿಭಟನೆ ತೀವ್ರಗೊಂಡಿದೆ. ಇದೇ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಪೊಲೀಸ್ ಕ್ರಮದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ದೀಪ್ಕೆ, ದೆಹಲಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಮಗೆ ಜಂತರ್ ಮಂತರ್ ಪ್ರತಿಭಟನಾ ಸ್ಥಳ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ. ಪೊಲೀಸರ ಧೋರಣೆಯನ್ನು ಖಂಡಿಸಿ ದೇಶಾದ್ಯಂತ ಶಾಂತಿಯುತ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಪ್ರಸ್ತುತ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಆದಷ್ಟು ಬೇಗ ಜಂತರ್ ಮಂತರ್ ಸ್ಥಳವನ್ನು ಖಾಲಿ ಮಾಡಬೇಕೆಂದು ದೆಹಲಿ ಪೊಲೀಸರು ಸೂಚನೆ ನೀಡಿದ್ದಾರೆ. ಆದಾಗ್ಯೂ ಪ್ರತಿಭಟನೆಯನ್ನು ಕೈಬಿಡುವ ಮಾತೇ ಇಲ್ಲ. ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಸಿಜೆಪಿ ಘೋಷಿಸಿದೆ.




