ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ 1977ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಎಂ ಗೌರಿಶಂಕರ್ ಅವರು 1978ರಲ್ಲಿ ತಮ್ಮದೇ ವಿನ್ಯಾಸದ ಯಂತ್ರವನ್ನು ತಯಾರಿಸಿ ಅಡಿಕೆಹಾಳೆಯ ತಟ್ಟೆ ತಯಾರಿಸುವ ಉದ್ಯಮ ಶುರು ಮಾಡಿದ್ದರು. ಆ ಕಾಲದಲ್ಲಿಯೇ ಹಾಳೆ ತಟ್ಟೆಗೆ ಅಮೆರಿಕದಿಂದ ಬೇಡಿಕೆ ಬಂದಿತ್ತು!
‘ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟಗಳು ನಿರ್ದಿಷ್ಟ ಸಂದರ್ಭಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು (ಆಲ್ಕಲಾಯ್ಡ್‌ಗಳು) ಬಿಡುಗಡೆ ಮಾಡುತ್ತವೆ. ಅವು ಆಹಾರ, ಪಾನೀಯದೊಂದಿಗೆ ಬೆರೆತು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದು ಅಮೆರಿಕದ ವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ. ಭಾರತದಿಂದ ರಫ್ತಾಗುವ ಹಾಳೆ ತಟ್ಟೆಗಳಿಗೆ ನಿಷೇಧ ಹೇರಿದೆ. ಹೀಗಾಗಿ ಕರ್ನಾಟಕದ ಅಡಿಕೆಹಾಳೆ ತಟ್ಟೆ ಉತ್ಪಾದಕರಿಗೆ ಆತಂಕ ಶುರುವಾಗಿದೆ.
ಕ್ಯಾನ್ಸರ್ ಎಂಬ ಪದ ಕಿವಿಗೆ ಬೀಳುತ್ತಿದ್ದಂತೆ ಎಂತಹವರೂ ಭಯಪಡುವ ಸಂದರ್ಭ. ಹಾಗಾಗಿ ಅಮೆರಿಕದ ಈ ಸಂಶೋಧನೆ ಜಗತ್ತಿನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ. ಸ್ಥಳೀಯವಾಗಿಯೂ ಬೇಡಿಕೆ ಕಡಿಮೆಯಾಗುವ ಆತಂಕದಲ್ಲಿ ಅಡಿಕೆಹಾಳೆ ತಟ್ಟೆ ಉತ್ಪಾದಕರು ಇದ್ದಾರೆ. ಕರಾವಳಿ, ಮಲೆನಾಡಿನ ಅಡಿಕೆ ಹಾಳೆ ತಟ್ಟೆ ದೇಶದಾಚೆಗೆ ಮಾರುಕಟ್ಟೆ ವಿಸ್ತರಿಸಿಕೊಂಡು ದಶಕಗಳೇ ಸಂದಿವೆ. ಅಡಿಕೆ ಬೆಳಗಾರರು ತಮ್ಮ ತೋಟದಲ್ಲಿ ವ್ಯರ್ಥವಾಗುತ್ತಿದ್ದ ಹಾಳೆಯನ್ನು ಸಂಗ್ರಹಿಸಿ ಒಂದೇ ಒಂದು ಯಂತ್ರ ಇಟ್ಟುಕೊಂಡು ವಿರಾಮದ ಸಮಯದಲ್ಲಿ ಮನೆಯ ಪುರುಷರು, ಮಹಿಳೆಯರು ಉಪ ಕಸುಬಾಗಿ ತಟ್ಟೆ ತಯಾರಿಸುತ್ತಿದ್ದರು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಸೀಸನ್‌ನಲ್ಲಿ ಭಾರೀ ಬೇಡಿಕೆ ಇರುವ ಹಾಳೆ ತಟ್ಟೆಗಳು ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಕಡಲಾಚೆಗೆ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡ ಈ ಅಡಿಕೆ ಹಾಳೆ ತಟ್ಟೆಯ ಸಂಶೋಧಕ, ಮೊದಲ ತಯಾರಕ ಸುಳ್ಯದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಂ ಗೌರಿಶಂಕರ್ ಗೌಡ. ಇನ್ನು ಮೂರು ವರ್ಷದ ತುಂಬಿದರೆ ಈ ಸಂಶೋಧನೆಗೆ ಬರೋಬ್ಬರಿ 50 ವರ್ಷ ತುಂಬುತ್ತದೆ.

ಗೌರಿಶಂಕರ ಅವರು ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ 1972ರಿಂದ 77ರ ಅವಧಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ನಂತರ ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿ ನಂತರ ಸುಳ್ಯಕ್ಕೆ ಮರಳಿ ಸ್ವಂತ ಉದ್ಯಮ ಶುರು ಮಾಡುತ್ತಾರೆ. 1978ರಲ್ಲಿ ಅವರು ತಮ್ಮದೇ ವಿನ್ಯಾಸದ ಯಂತ್ರವನ್ನು ತಯಾರಿಸಿ ಹಾಳೆ ತಟ್ಟೆ ತಯಾರಿಸುವ ಉದ್ಯಮ ಶುರು ಮಾಡಿದ್ದರು. ಆಗ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಬಾಳೆ ಎಲೆ ಮತ್ತು ಮುತ್ತುಗದ ಎಲೆಯಿಂದ ದೊನ್ನೆ ತಯಾರಿಸಲಾಗುತ್ತಿತ್ತು. ಅಲ್ಲಿಂದ ಮಾದರಿ ಯಂತ್ರವನ್ನು ತಂದು ಅಡಿಕೆ ಹಾಳೆಯಿಂದ ತಟ್ಟೆ ತಯಾರಿಸುವ ಯಂತ್ರವನ್ನು ವಿನ್ಯಾಸಗೊಳಿಸುತ್ತಾರೆ. ಮಂಗಳೂರಿನ ವರ್ಕ್‌ಶಾಪ್‌ನಲ್ಲಿ ಯಂತ್ರವನ್ನು ಸಿದ್ಧಪಡಿಸಿಕೊಂಡು ತಮ್ಮ ಮನೆಯಲ್ಲಿಯೇ ಲೀಫ್ ಕಪ್ ಇಂಡಸ್ಟ್ರಿ ಶುರು ಮಾಡುತ್ತಾರೆ. ಮೊದಲಿಗೆ ಅವರು ಸುಳ್ಯದಲ್ಲಿಯೇ ಮಾರ್ಕೆಟ್ ಮಾಡುತ್ತಾರೆ. ಬೆಂಗಳೂರಿನ ಫ್ರೆಂಡ್ಲಿ ಐಸ್‌ಕ್ರೀಮ್ ಅಂಗಡಿಯಿಂದ ಆರ್ಡರ್ ಪಡೆದು ಐಸ್‌ಕ್ರೀಂ ಕಪ್‌ಗಳನ್ನು ತಯಾರಿಸಿಕೊಡುತ್ತಾರೆ. ನಂತರ ದೊಡ್ಡ, ಮಧ್ಯಮ, ಸಣ್ಣ ಹೀಗೆ ಮೂರು ಗಾತ್ರದ ತಟ್ಟೆ ತಯಾರಿಸಿ ಮಾರಾಟ ಮಾಡಲು ಶುರು ಮಾಡುತ್ತಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಘವೇಂದ್ರ ಟ್ರೇಡರ್ಸ್‌ನಲ್ಲಿ ಸುಳ್ಯದ ತಟ್ಟೆ ಮಾರಾಟ ಆರಂಭವಾಗುತ್ತದೆ. ನಂತರ ಮಡಿಕೇರಿ, ಮಂಗಳೂರು, ಬೆಂಗಳೂರುಗಳಲ್ಲಿ ಹಾಳೆ ತಟ್ಟೆಗೆ ಮಾರುಕಟ್ಟೆ ಸಿಗುತ್ತದೆ. ಬೆಂಗಳೂರಿನ ನೀಲಗಿರೀಸ್, ರಸ್ತೆಯಲ್ಲಿದ್ದ ಬನ್ನೇರುಘಟ್ಟ ಡ್ರೈವ್ ಇನ್ ಥಿಯೇಟರ್ ಮತ್ತು ಎಂಟಿಆರ್ ಹೋಟೆಲ್‌ಗಳು ಇವರ ಹಾಳೆ ತಟ್ಟೆಯ ಗ್ರಾಹಕರಾಗುತ್ತಾರೆ.
ಗೌರಿಶಂಕರ ಅವರಿಗೆ ಮುಂದೊಂದು ದಿನ ತಮ್ಮ ಕಲ್ಪನೆಯ ಅಡಿಕೆ ಹಾಳೆ ತಟ್ಟೆ ಅಮೆರಿಕದವರೆಗೆ ಮಾರುಕಟ್ಟೆ ವಿಸ್ತರಣೆಯಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಅವರು ಯಂತ್ರದ ಹಕ್ಕುಗಳನ್ನು ಕೂಡ ಇಟ್ಟುಕೊಳ್ಳಲಿಲ್ಲ. ನಂತರ ಅನೇಕರು ಇದೇ ಮಾದರಿಯ ಬಳಸಿ ತಟ್ಟೆ ಉದ್ಯಮವನ್ನು ಮುನ್ನಡೆಸಿದ್ದಾರೆ. ಹಲವು ಜಿಲ್ಲೆಗಳ ರೈತರು, ಎಂಜಿನಿಯರ್‌ಗಳು ಇವರ ಬಳಿ ಬಂದು ಮಾರ್ಗದರ್ಶನ ಪಡೆದಿದ್ದಾರೆ. ಅವರೆಲ್ಲ ಈಗ ವರ್ಷಕ್ಕೆ ಕೋಟಿಗಟ್ಟೆಲೆ ವ್ಯವಹಾರ ನಡೆಸುತ್ತಿದ್ದಾರೆ.

ರೋಟರಿ ಕ್ಲಬ್‌ನ ಅಧ್ಯಕ್ಷರಾಗಿದ್ದ ಗೌರಿಶಂಕರರ ಪ್ರತಿಭೆಯನ್ನು ಗುರುತಿಸಿದ ಕೆ ವಿ ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ ಕುರುಂಜಿ ವೆಂಕಟರಮಣ ಗೌಡರು ಹೊಸದಾಗಿ ಆರಂಭಿಸಿದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಿಕೊಳ್ಳುತ್ತಾರೆ. ನಂತರ ಇವರ ಸಹೋದರರು ತಟ್ಟೆ ತಯಾರಿಸುವ ಕೆಲಸ ಮುಂದುವರಿಸುತ್ತಾರೆ. ಗೌರಿಶಂಕರರು ಮುಂದೆ ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿ, ಪ್ರಸ್ತುತ ಸುಳ್ಯದಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಪ್ರಾಂಶುಪಾಲರಾಗಿ ಕೆಲಸಕ್ಕೆ ಸೇರದೇ ಇದ್ದಿದ್ದರೆ ಅದೇ ಉದ್ಯಮವನ್ನು ಮುಂದುವರಿಸುವ, ವಿಸ್ತರಿಸುವ ಉದ್ದೇಶ ಇತ್ತು ಎಂದು ಹೇಳುತ್ತಾರೆ ಅವರು.
ಕರ್ನಾಟಕದ ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರ ಉಪಕಸುಬಾಗಿರುವ ತಟ್ಟೆ ತಯಾರಿಗೆ ನಿಷೇಧದ ಆತಂಕ ಎದುರಾಗಿರುವ ಈ ಸಂದರ್ಭದಲ್ಲಿ ಅವರು ಈ ದಿನ.ಕಾಮ್ ಜೊತೆಗೆ ಮಾತನಾಡಿದರು.
“1978ರಲ್ಲಿ ನಾನು ಮೊದಲ ಬಾರಿಗೆ ಅಡಿಕೆಹಾಳೆ ತಟ್ಟೆ ತಯಾರಿಸಲು ಆರಂಭಿಸಿದಾಗಲೇ ಮದರಾಸಿನ ʼಜಯ್ ಶ್ರೀ ಮಣಿಯನ್ ಏಜೆನ್ಸಿʼ ಅವರು ಅಮೆರಿಕಕ್ಕೆ ಕಳಿಸಲು ಮೂರು ಲಕ್ಷ ತಟ್ಟೆಗಳ ಆರ್ಡರ್ ಕೊಟ್ಟಿದ್ದರು. ಆಗ ಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿದ್ದವರ ಸಂಬಂಧಿಯ ಏಜೆನ್ಸಿ ಅದು. ಆದರೆ ಅಷ್ಟೊಂದು ಪ್ರಮಾಣದ ತಟ್ಟೆಗಳನ್ನು ತಕ್ಷಣ ತಯಾರಿಸಿಕೊಡಲು ಸಾಧ್ಯವಾಗಿಲ್ಲ. ಇದ್ದ ಒಂದೇ ಮಷೀನ್‌ನಲ್ಲಿ ತಯಾರಿಸಬೇಕಿತ್ತು. ಹೆಚ್ಚು ದಿನ ಇಟ್ಟರೆ ಫಂಗಸ್ ಬರುತ್ತಿತ್ತು. ಹಾಗಾಗಿ ಮೂರು ಲಕ್ಷ ತಟ್ಟೆ ತಯಾರಿಗೆ ಕನಿಷ್ಠ ಮೂರು ತಿಂಗಳಾದರೂ ಬೇಕಿತ್ತು. ಅಷ್ಟೇ ಅಲ್ಲ ಹಾಳೆ ತಟ್ಟೆ ಈ ಮಟ್ಟಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತದೆ ಎಂಬ ಅಂದಾಜು ಇರಲಿಲ್ಲ. ಈ ನನ್ನ ಕೆಲಸಕ್ಕೆ ಗೆಳೆಯ ʼಭಾರತ್ ಆಗ್ರೋ ಸರ್ವಿಸ್ ಅಂಡ್ ಸೇಲ್ಸ್ʼ ನ ರಾಮಚಂದ್ರ ಜೊತೆಯಾಗಿದ್ದರು. ಆರ್ಥಿಕ ಸಹಾಯವನ್ನೂ ಮಾಡಿದ್ದರು. ನಾವಿಬ್ಬರೂ ಸೇರಿ ಅಡಿಕೆ ತೋಟಗಳಿಗೆ ಸ್ಪಿಂಕ್ಲರ್ ಅಳವಡಿಸುವ ವೃತ್ತಿಯನ್ನೂ ಜೊತೆಯಾಗಿ ಮಾಡುತ್ತಿದ್ದೆವು. 1984ರಲ್ಲಿ ನಂತರ ನಾನು ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲನಾಗಿ ಸೇರಿಕೊಂಡ ನಂತರ ಉದ್ಯಮ ವಿಸ್ತರಿಸಲಿಲ್ಲ. ಯಂತ್ರದ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳಲಿಲ್ಲ. ನನಗೆ ಯಂತ್ರ ತಯಾರಿಸಿಕೊಟ್ಟ ಇಂಡಸ್ತ್ರೀಯವರು ತಾವೇ ತಯಾರಿಸಿ ಮಾರಲು ಶುರು ಮಾಡಿದ್ದರು. ಹಾಗಾಗಿ ಹಾಳೆ ತಟ್ಟೆ ತಯಾರಿಕಾ ಉದ್ಯಮ ಬಹಳ ವೇಗವಾಗಿ ಬೆಳೆಯಿತು. ಈಗ ಸ್ವಯಂಚಾಲಿತ ಯಂತ್ರ, ಗ್ಯಾಸ್‌ನಲ್ಲಿ ರನ್ ಆಗುವ ಯಂತ್ರ, ಒಂದೇ ಪ್ರೆಸ್‌ಗೆ ಮೂರು ನಾಲ್ಕು ತಟ್ಟೆ ತಯಾರಾಗುವ ಮಷಿನ್‌ಗಳು ಬಂದಿವೆ. ಆದರೆ ಮೂಲ ಪರಿಕಲ್ಪನೆ ನನ್ನದೇ ” ಎಂದು ವಿವರಿಸಿದರು.


ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.