ಮಂಗಳೂರು – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿ ತಟದಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮೂರ್ತಿ ನಿರ್ಮಿಸಿರುವುದಲ್ಲದೆ, ಇಲ್ಲಿನ ಬಂಡಸಾಲೆಯಿಂದ – ಕಾರಮೊಗರು ಮತ್ತು ವನಭೋಜನದಿಂದ – ಬರ್ಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
“ಮೂಳೂರು ಗ್ರಾಮದ ಫಲ್ಗುಣಿ ನದಿ ತಟದಲ್ಲಿರುವ ಸರ್ವೇ ನಂಬರ್ 94/1ರಲ್ಲಿ ಇರುವ 80.76 ಸೆಂಟ್ಸ್ ಸರಕಾರಿ ಜಾಗವನ್ನು ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರು ಒತ್ತುವರಿ ಮಾಡಿ ಮಹಾಕಾಳೇಶ್ವರನ ಮೂರ್ತಿ ನಿರ್ಮಿಸಿದ್ದಾರೆ. ಅಲ್ಲದೆ ಫಲ್ಗುಣಿ ನದಿ ತಟದಲ್ಲಿ ಅಕ್ರಮವಾಗಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ಹಿಂದೆ ಪ್ರವಾಸಿಗರನ್ನು ಸೆಳೆದು ಆದಾಯ ಗಳಿಸುವ ಉದ್ದೇಶ ಅಡಗಿದೆ ಹೊರತು ಯಾವುದೇ ಭಕ್ತಿ ಶ್ರದ್ಧೆ ಇಲ್ಲ” ಎಂದು ಗ್ರಾಮಸ್ಥರು ದೂರಿದ್ದಾರೆ.
“ಮೂರ್ತಿ ನಿರ್ಮಿಸಿರುವ ಸರಕಾರಿ ಜಾಗದ ಪಕ್ಕದಲ್ಲೇ ದುರ್ಗಾ ಪ್ರಸಾದ್ ಶೆಟ್ಟಿಗೆ ಸೇರಿದ ಖಾಸಗಿ ಜಾಗ ಇದ್ದು, ಅದರಲ್ಲಿ ಅಥಿತಿ ಗೃಹ, ಸ್ನಾನ ಗೃಹ, ಪಾಕ್ ಸಹಿತ ಪ್ರವಾಸೋದ್ಯಮಕ್ಕೆ ಬೇಕಾದ ಕಟ್ಟಡ ಮತ್ತು ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅದರಲ್ಲಿ 22 ಅಡಿ ಎತ್ತರದ ಪೀಠ ಮತ್ತು ಅದರ ಮೇಲೆ 23 ಅಡಿ ಎತ್ತರದ ಮಹಾಕಾಲೇಶ್ವರನ ಮೂರ್ತಿ ನಿರ್ಮಿಸಿದ್ದಾರೆ. ಈ ಮೂರ್ತಿ ದಕ್ಷಿಣ ಭಾರತದಲ್ಲೇ ಅತೀ ಎತ್ತರದ ಏಕಶಿಲಾ ಮೂರ್ತಿ ಎಂದು ಪ್ರಚಾರ ಪಡಿಸಲಾಗುತ್ತಿದೆ. ಅಲ್ಲದೆ ಮೇ 15ರಿಂದ 17ರವರೆಗೆ ಅದರ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗಿದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

“ಮೂರ್ತಿ ನಿರ್ಮಿಸಿರುವ ಜಾಗ ಸರಕಾರಿ ಪೊರಂಬೋಕು ಜಾಗವಾಗಿದ್ದು ಅದರಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಮಂಗಳೂರು ಸಹಾಯಕ ಆಯುಕ್ತರ ಆದೇಶದ ಪ್ರತಿ ನಮ್ಮಲ್ಲಿ ಇದೆ. ಆದರೂ ಆ ಜಾಗದಲ್ಲಿ ಮೂರ್ತಿ ನಿರ್ಮಾಣ ಮಾಡಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ. ದುರ್ಗಾ ಪ್ರಸಾದ್ ಶೆಟ್ಟಿ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳು ಯಾವುದೇ ಕ್ರಮ ಜರಗಿಸದಂತೆ ತಡೆಯುತ್ತಿದ್ದಾರೆ” ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
“ತನ್ನ ಪ್ರವಾಸೋದ್ಯಮದ ದೃಷ್ಟಿಯಿಂದ ಗುರುಪುರ ಗ್ರಾಮದ ಬಂಡಸಾಲೆಯಿಂದ ಗುರುಪುರ ನದಿ ತಟದ ಕಾರಮೊಗರಿಗೆ ಸಂಪರ್ಕ ಕಲ್ಪಿಸುವ ಮತ್ತು ಗ್ರಾಮದ ವನಭೋಜನದಿಂದ ಬರ್ಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಾ ದುರ್ಗಾ ಪ್ರಸಾದ್ ಶೆಟ್ಟಿ ಅಕ್ರಮವಾಗಿ ಬಂದ್ ಮಾಡಿದ್ದಾರೆ. ಈ ಎರಡೂ ರಸ್ತೆ ಕೂಡಾ ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯಾಗಿದೆ. ರಸ್ತೆಗೆ ಕಾಂಕ್ರೆಟ್ ತಡೆಗೋಡೆ ನಿರ್ಮಿಸಿ ಮುಚ್ಚಲಾಗಿದೆ. ಇದರಿಂದ ಈ ಭಾಗದ 30ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ” ಎಂದು ಜನರು ತಮ್ಮ ಅಳಲನ್ನು ತಿಳಿಸಿದ್ದಾರೆ.
“ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮೂರ್ತಿ ನಿರ್ಮಿಸಿರುವುದಲ್ಲದೆ, ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವುದರಿಂದ ಆ ಪ್ರದೇಶದ ಜನರು ಗ್ರಾಮದ ಮುಖ್ಯ ರಸ್ತೆಗೆ ದೂರದ ಕಾಲು ದಾರಿಯಲ್ಲಿ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ದಾರಿಯಿಂದ ಸಾಗುವುದು ಕಷ್ಟಕರವಾಗಿದೆ. ಈ ಅನ್ಯಾಯದ ವಿರುದ್ಧ ಮಾತನಾಡುವವರನ್ನು ಬೆದರಿಸಲಾಗುತ್ತಿದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
“ಸರಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಮೂರ್ತಿ ನಿರ್ಮಾಣ ಮಾಡಿರುವ ಬಗ್ಗೆ ಮತ್ತು ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ಗ್ರಾಮಸ್ಥರು ಮನವಿ ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದೇವೆ. ಆದರೆ ಯಾವುದೇ ಅಧಿಕಾರಿ ನಮ್ಮ ಮನವಿಗೆ ಸ್ಪಂದಿಸಿಲ್ಲ. ರಾಜಕೀಯ ಪ್ರಭಾವ ಇರುವುದರಿಂದ ಅಧಿಕಾರಿಗಳು ಮೌನವಾಗಿದ್ದಾರೆ. ಹೀಗಾದರೆ ನಮಗೆ ನ್ಯಾಯ ನೀಡುವವರು ಯಾರು?” ಎಂದು ಗ್ರಾಮಸ್ಥರು ಖೇದ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಜನರಿಗೆ ಬದುಕುವ ಹಕ್ಕು ಇಲ್ಲವೇ?
ನಾವು ಮತ್ತು ನಮ್ಮ ಹಿರಿಯರು ದೈನಂದಿನ ಜೀವನಕ್ಕೆ ಉಪಯೋಗಿಸುತ್ತಿದ್ದ ಸರಕಾರಿ ರಸ್ತೆಯನ್ನು ಊರಿನ ದುರ್ಗಾ ಪ್ರಶಾದ್ ಶೆಟ್ಟಿ ಎಂಬವರು ಕಾಂಕ್ರೆಟ್ ತಡೆಗೋಡೆ ನಿರ್ಮಿಸಿ ಬಂದ್ ಮಾಡಿದ್ದಾರೆ. ನಮಗೆ ಸಂಚರಿಸಲು 9 ತಿಂಗಳಿಂದ ಸರಿಯಾದ ರಸ್ತೆ ಇಲ್ಲದಾಗಿದೆ. ನದಿ ಬದಿ, ತೋಟಗಳ ಮೂಲಕ ಕಾಲು ದಾರಿಯಿಂದ ಸಂಚರಿಸಿ ಮುಖ್ಯ ರಸ್ತೆಯನ್ನು ಸೇರುವ ಪರಿಸ್ಥಿತಿ ಇದೆ. ರಸ್ತೆ ಬಂದ್ ಮಾಡಿರುವುದರಿಂದ ಇಲ್ಲಿನ ಹಲವು ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದು, ನ್ಯಾಯ ಒದಗಿಸುವಂತೆ ಆಗ್ರಹಿಸಿ ಗ್ರಾಮ, ತಾಲೂಕು, ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಯಾವ ಅಧಿಕಾರಿಯಿಂದಲೂ ನ್ಯಾಯ ಸಿಗುತ್ತಿಲ್ಲ. ಸರಕಾರದ ಅನುದಾನದಲ್ಲಿ ಅಭಿವೃದ್ಧಿಗೊಂಡ ಕಾಂಕ್ರಿಟ್ ರಸ್ತೆಯನ್ನೇ ಬಂದ್ ಮಾಡಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದರೆ ಏನು ಅರ್ಥ? ಇದರ ವಿರುದ್ಧ ಮಾತನಾಡುವವರನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ. ಹೀಗಾದರೆ ಸಾಮಾನ್ಯ ಜನರಿಗೆ ಬದುಕುವ ಹಕ್ಕು ಇಲ್ಲವೇ? ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಕೂಡಲೇ ತೆರವು ಮಾಡಿ ನಮಗೆ ನ್ಯಾಯ ಒದಗಿಸಬೇಕು.
-ಹೇಮಾ, ಗ್ರಾಮದ ಸಂತ್ರಸ್ತ ಮಹಿಳೆ
ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ
ಸರಕಾರದ ಅನುದಾನದಲ್ಲಿ ಅಭಿವೃದ್ಧಿಗೊಂಡ ಎರಡು ರಸ್ತೆಯನ್ನು ಹಣ ಮತ್ತು ರಾಜಕೀಯ ಬಲವನ್ನು ಬಳಸಿ ದುರ್ಗಾ ಪ್ರಸಾದ್ ಶೆಟ್ಟಿ ಬಂದ್ ಮಾಡಿದ್ದಾರೆ. ಇದರಿಂದ ಇಲ್ಲಿನ ಹಲವು ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಸರಕಾರಿ ಜಾಗದಲ್ಲಿ ಬಡವನೊಬ್ಬ ಗುಡಿಸಲು ನಿರ್ಮಿಸಿದರೆ ತೆರವು ಮಾಡುವ ಅಧಿಕಾರಿಗಳು, ಒಂದು ಎಕರೆಯಷ್ಟು ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಬಂದ್ ಮಾಡಿರುವುದನ್ನು ತೆರವು ಮಾಡಬೇಕು, ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ.
-ಪ್ರೀತಂ, ಸ್ಥಳೀಯ ನಿವಾಸಿ
*ಗುರುಪುರ ಮಹಾಕಾಲ ಪ್ರತಿಷ್ಠೆ: ವಿಘ್ನಗಳು, ಆಗಮಿಕ ಗೊಂದಲಗಳು ಮತ್ತು ಪ್ರಶ್ನಾರ್ಥಕ ಚಿಂತನೆಗಳು*
ಗುರುಪುರದಲ್ಲಿ ಮೇ 15 ರಿಂದ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವ ಮತ್ತು ಮಹಾಕಾಲ ಪ್ರತಿಷ್ಠಾಪನೆಯ ಸುತ್ತ ಆವರಿಸಿರುವ ಗೊಂದಲಗಳು, ಧಾರ್ಮಿಕ ಆಚರಣೆಗಳು, ಆಗಮಿಕ ನಿಯಮಗಳು ಮತ್ತು ಸರ್ಕಾರದ ಮಧ್ಯಪ್ರವೇಶದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕಾರ್ಯಕ್ರಮವು ನಿಗದಿತ ಮುಹೂರ್ತದಲ್ಲಿ ನಿರ್ವಿಘ್ನವಾಗಿ ನೆರವೇರಿತೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾದರೂ, “ಸರ್ಕಾರ ತಡೆಯಾಜ್ಞೆ ತಂದಿದೆ” ಎಂಬ ಸುದ್ದಿ ಹರಿದಾಡುತ್ತಿದೆ.
ಈ ಸಂಕೀರ್ಣ ಸನ್ನಿವೇಶವನ್ನು ಜ್ಯೋತಿಷ್ಯ, ತಂತ್ರ ಮತ್ತು ಆಗಮ ಶಾಸ್ತ್ರಗಳ ದೃಷ್ಟಿಕೋನದಿಂದ ವಿಶ್ಲೇಷಿಸೋಣ.
*1. ಪ್ರತಿಷ್ಠಾಪನೆಯ ಉದ್ದೇಶ ಮತ್ತು ಆಗಮಿಕ ಆಧಾರದ ಪ್ರಶ್ನೆಗಳು:*
* *ಮಹಾಕಾಲ ಪ್ರತಿಷ್ಠೆಯ ಅಗತ್ಯವೇನು?* ಗುರುಪುರದಲ್ಲಿ ಅಷ್ಟು ಬೃಹತ್ತಾದ ಮಹಾಕಾಲ ವಿಗ್ರಹವನ್ನು ಪ್ರತಿಷ್ಠಾಪಿಸುವ ನಿರ್ಧಾರದ ಹಿಂದಿನ ಐತಿಹಾಸಿಕ, ಧಾರ್ಮಿಕ ಅಥವಾ ಆಧ್ಯಾತ್ಮಿಕ ಹಿನ್ನೆಲೆ ಏನು? ಈ ನಿರ್ಧಾರವನ್ನು ಯಾರು ಮತ್ತು ಯಾವ ಶಾಸ್ತ್ರೀಯ ಆಧಾರದಲ್ಲಿ ಕೈಗೊಂಡರು?
* *ಆಗಮಿಕ ಮೂಲ: ವೈದಿಕ vs. ಶೈವಾಗಮ?* ಮಹಾಕಾಲ ಪ್ರತಿಷ್ಠಾಪನೆಯು ಮುಖ್ಯವಾಗಿ ಶೈವಾಗಮದ ಒಂದು ಭಾಗವಾಗಿದೆ. ಗುರುಪುರದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಾಪನೆ ಯಾವ ನಿರ್ದಿಷ್ಟ ಶೈವಾಗಮವನ್ನು (ಉದಾಹರಣೆಗೆ ಕಾಳಿಕಾಗಮ, ಭೈರವಾಗಮ) ಆಧರಿಸಿದೆ? ಮಹಾಕಾಲನ ಪ್ರತಿಷ್ಠಾಪನೆಗೆ ‘ವೈದಿಕ ಪ್ರತಿಷ್ಠೆ’ ವಿಧಾನವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮಹಾಕಾಲನ ಮೂಲ ಶೈವಾಗಮ ಆಧಾರಿತ ಪ್ರತಿಷ್ಠಾ ಪದ್ಧತಿಗಳಿಗೆ ವ್ಯತಿರಿಕ್ತವಲ್ಲವೇ? ಎರಡೂ ಪದ್ಧತಿಗಳ ಮೂಲಭೂತ ತತ್ವಗಳನ್ನು ಇಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ? ಈ ಸಂಪ್ರದಾಯಗಳ ಮಿಶ್ರಣವು ಮಹಾಕಾಲನ ದೈವಿಕ ಶಕ್ತಿ ಮತ್ತು ಸಾನ್ನಿಧ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
*2. ಮುಹೂರ್ತ ನಿಗದಿ ಮತ್ತು ವಿಘ್ನಗಳ ಕುರಿತು ಜ್ಯೋತಿಷ್ಯದ ಪ್ರಶ್ನೆಗಳು:*
* *ಭವಿಷ್ಯದ ವಿಘ್ನಗಳ ಗ್ರಹಿಕೆ:* ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸುವ ಮೊದಲು, ಸ್ಥಳದ ಭೂಮಿಶುದ್ಧಿ, ಗ್ರಹಸ್ಥಿತಿ, ಮತ್ತು ಭವಿಷ್ಯದಲ್ಲಿ ಬರಬಹುದಾದ ರಾಜಕೀಯ, ಭೂ ವಿವಾದ, ಕಾನೂನು ಅಡೆತಡೆಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಗ್ರ ಅಧ್ಯಯನ ನಡೆಸಲಾಗಿತ್ತೇ? ಇಲ್ಲದಿದ್ದರೆ, ಜ್ಯೋತಿಷ್ಯದ ಲೆಕ್ಕಾಚಾರದಲ್ಲಿ ಏನಾದರೂ ದೋಷವಿತ್ತೇ? ಇಂತಹ ವಿಘ್ನಗಳನ್ನು ಜ್ಯೋತಿಷ್ಯದ ಮೂಲಕ ಊಹಿಸಲು ಸಾಧ್ಯವಿತ್ತೇ?
* *ಮುಹೂರ್ತದ ಬಲ:* ಒಂದು ನಿರ್ದಿಷ್ಟ ಮುಹೂರ್ತದಲ್ಲಿ ಕಾರ್ಯ ನಡೆಯದೆ ಹೋದಲ್ಲಿ, ಆ ಮುಹೂರ್ತದ ಬಲವು ಕುಂದುತ್ತದೆಯೇ? ಅಥವಾ ಇನ್ನೊಂದು ಶುಭ ಮುಹೂರ್ತವನ್ನು ಆಯ್ಕೆ ಮಾಡಲು ಆಗಮಿಕರಿಗೆ ಸ್ವಾತಂತ್ರ್ಯವಿದೆಯೇ?
*3. ಮುಹೂರ್ತ ಮುಂದೂಡಿಕೆ ಮತ್ತು ಆಗಮಿಕ ನಿಯಮಗಳ ಪ್ರಶ್ನೆಗಳು:*
* *ದೇವತೆಗಳ ಆಗಮನ ಮತ್ತು ತೃಪ್ತಿ:* ಮುಹೂರ್ತ ಇಟ್ಟ ನಂತರ ಆ ಕಾರ್ಯವನ್ನು ಮುಂದೂಡಿದರೆ, ಆ ಮುಹೂರ್ತಕ್ಕೆ ಆಗಮಿಸುವ ದೇವತೆಗಳಿಗೆ ಹಲವು ವಿಧದಿಂದ ತೃಪ್ತಿಪಡಿಸಬೇಕು, ಇಲ್ಲವಾದರೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂಬುದು ಇದೇ ವ್ಯಕ್ತಿಗಳ ಹಿಂದಿನ ಹೇಳಿಕೆಯಾಗಿತ್ತು. ಈಗ ಮಹಾಕಾಲ ಪ್ರತಿಷ್ಠಾಪನೆಯಂತಹ ಬೃಹತ್ ಕಾರ್ಯಕ್ಕೆ ಮುಹೂರ್ತ ಮುಂದೂಡಲ್ಪಟ್ಟಿದ್ದರಿಂದ, ಮಹಾಕಾಲ ಮತ್ತು ಇತರ ಸಂಬಂಧಿತ ದೇವತೆಗಳಿಗೆ ಯಾವ ರೀತಿಯ ಪ್ರಾಯಶ್ಚಿತ್ತ ಅಥವಾ ಹವನಾದಿಗಳು ಅಗತ್ಯವಾಗುತ್ತವೆ? ಯಾವುದೇ ಪರಿಹಾರ ಕಾರ್ಯಗಳನ್ನು ಈಗಾಗಲೇ ನಡೆಸಲಾಗಿದೆಯೇ? ನಿರ್ದಿಷ್ಟ ಮುಹೂರ್ತದಲ್ಲಿ ಮಹಾಕಾಲನ ಆಗಮನದ ಬೃಹತ್ ಶಕ್ತಿಪಾತವನ್ನು ನಿರ್ವಹಿಸಲು ದೈಹಿಕ, ದೈವಿಕ, ತಾಂತ್ರಿಕ ಶಕ್ತಿ ಆಗಮಿಕರಲ್ಲಿ ಇದೆಯೇ?
* *ಆಗಮದಲ್ಲಿ ಮುಂದೂಡಿಕೆಗೆ ಅವಕಾಶವಿದೆಯೇ?* ಪ್ರತಿಷ್ಠಾಪನಾ ಕಾರ್ಯಗಳಿಗೆ ಮುಹೂರ್ತವನ್ನು ಒಮ್ಮೆ ನಿಗದಿಪಡಿಸಿದ ನಂತರ, ಅದನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂಬುದು ಆಗಮ ಶಾಸ್ತ್ರದಲ್ಲಿದೆಯೇ? ಅಥವಾ ವಿಶೇಷ ಸನ್ನಿವೇಶಗಳಲ್ಲಿ (ಉದಾಹರಣೆಗೆ ನ್ಯಾಯಾಲಯದ ಆದೇಶ) ಮುಂದೂಡಲು ಅವಕಾಶವಿದೆಯೇ? ಒಂದು ವೇಳೆ ಕಾರ್ಯ ಮುಂದೂಡಲ್ಪಟ್ಟರೆ, ದೇವಾಲಯದ ಶಕ್ತಿ, ದೈವ ಸಾನ್ನಿಧ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೇ?
* *”ಮುಹೂರ್ತ ಇಟ್ಟ ಮೇಲೆ ಮುಗೀತು” ಸತ್ಯವೇ?* “ಮುಹೂರ್ತ ಇಟ್ಟ ಮೇಲೆ ಮುಗೀತು” ಎಂದು ಇದೇ ಆಗಮಿಕರು ಹೇಳುವುದಕ್ಕೆ ಆಗಮದಲ್ಲಿ ಆಧಾರವಿದೆಯೇ? ಮುಹೂರ್ತದ ಮಹತ್ವ ಮತ್ತು ಅದರ ಅನುಷ್ಠಾನದ ಕುರಿತು ಆಗಮ ಶಾಸ್ತ್ರದ ನಿಯಮಗಳೇನು? ಈ ರೀತಿಯ ಮುಂದೂಡಿಕೆಗಳಿಂದ ಉಂಟಾಗುವ ಕೆಟ್ಟ ಶಕುನಗಳನ್ನು ತಪ್ಪಿಸಲು ಆಗಮದಲ್ಲಿ ಹೇಳಿರುವ ನಿರ್ದಿಷ್ಟ ಪರಿಹಾರ ವಿಧಿಗಳು ಯಾವುವು? ಅವುಗಳನ್ನು ಪಾಲಿಸಲಾಗಿದೆಯೇ?
*4. ದೈವಿಕ ಇಚ್ಛೆ ಮತ್ತು ಮಾನವ ಹಸ್ತಕ್ಷೇಪದ ಪ್ರಶ್ನೆಗಳು:*
* *ದೈವಿಕ ಅಸಮ್ಮತಿಯೇ?* ನ್ಯಾಯಾಲಯದ ಆದೇಶ ಅಥವಾ ಸರ್ಕಾರಿ “ತಡೆಯಾಜ್ಞೆ” ಕಾರಣದಿಂದ ಮುಹೂರ್ತ ಮುಂದೂಡಿಕೆಯಾಗಿದೆ ಎಂದರೆ, ಇದು ಕೇವಲ ಮಾನವ ನಿರ್ಮಿತ ಅಡೆತಡೆಯೇ ಅಥವಾ ದೈವಿಕ ಇಚ್ಛೆಯ ಸೂಚನೆಯೇ? ಮಹಾಕಾಲನಂತಹ ಉಗ್ರ ದೇವತೆಯನ್ನು ಪ್ರತಿಷ್ಠಾಪಿಸುವಾಗ ಇಂತಹ ವಿಘ್ನಗಳು ಸಂಪ್ರದಾಯದ ಪ್ರಕಾರ ಅಶುಭ ಸಂಕೇತಗಳೇ?
* *ಕಾನೂನು ಮತ್ತು ಧರ್ಮದ ಸಂಘರ್ಷ:* ಸರ್ಕಾರಿ ನಿರ್ಧಾರಗಳು ಅಥವಾ ನ್ಯಾಯಾಲಯದ ಹಸ್ತಕ್ಷೇಪವು ಆಡಳಿತಾತ್ಮಕ ವಿಷಯಗಳಾಗಿದ್ದರೂ, ಅವು ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಯಾದಾಗ, ಆಗಮಿಕರು ಅಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಲು ಆಗಮದಲ್ಲಿ ಅವಕಾಶವಿದೆಯೇ? ದೈವಸಾನಿಧ್ಯವು ಸರ್ಕಾರಿ ನಿರ್ಧಾರಗಳು ಅಥವಾ ಭೂ ವಿವಾದಗಳಿಂದ ಪ್ರಭಾವಿತವಾಗುತ್ತದೆಯೇ?
*5. ಕಾರ್ಯನಿರ್ವಾಹಕರ ಜ್ಞಾನ ಮತ್ತು ಸಾರ್ವಜನಿಕ ಸ್ಪಷ್ಟೀಕರಣದ ಅಗತ್ಯತೆ:*
* *ಆಗಮಿಕರ ಸಾಮರ್ಥ್ಯ:* ಮುಹೂರ್ತವನ್ನು ನಿಗದಿಪಡಿಸಿದ ಜ್ಯೋತಿಷಿಗಳು/ಆಗಮಿಕರು, ಇಂತಹ ಅನಿರೀಕ್ಷಿತ ವಿಘ್ನಗಳನ್ನು ಮೊದಲೇ ಅರಿಯುವಷ್ಟು ಸಾಮರ್ಥ್ಯವನ್ನು ಹೊಂದಿರಲಿಲ್ಲವೇ? ಅಥವಾ ಅವರಿಗೆ ಅಷ್ಟು ಮಟ್ಟದ ‘ಮುಹೂರ್ತ ಸಾಧನೆ’ ಸಾಧ್ಯವಾಗಲಿಲ್ಲವೇ?
* *ಪಾರದರ್ಶಕತೆ:* ಈ ಮಹಾಕಾಲ ಪ್ರತಿಷ್ಠಾಪನೆಯ ಉದ್ದೇಶ, ಆಧಾರ ಆಗಮ, ಮತ್ತು ವೈದಿಕ ಸಂಪ್ರದಾಯದ ಆಯ್ಕೆ, ಹಾಗೂ ಮುಹೂರ್ತ ಮುಂದೂಡಿಕೆಯ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಅಥವಾ ಆಗಮಿಕರು ಸಾರ್ವಜನಿಕರಿಗೆ ಯಾವುದೇ ಅಧಿಕೃತ ಮತ್ತು ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆಯೇ? ಭಕ್ತರ ಆತಂಕಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ?
* *ಸಾರ್ವಜನಿಕ ನಂಬಿಕೆ:* ಇಂತಹ ವಿವಾದಗಳು ಮತ್ತು ವಿಘ್ನಗಳು ಎದುರಾದಾಗ, ಸಾರ್ವಜನಿಕ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಏನು ಪರಿಣಾಮ ಬೀರುತ್ತದೆ?
ಗುರುಪುರ ಮಹಾಕಾಲ ಪ್ರತಿಷ್ಠಾಪನೆಯು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿ ಉಳಿದಿಲ್ಲ; ಇದು ಧಾರ್ಮಿಕ ನಂಬಿಕೆಗಳು, ಆಗಮಿಕ ಸಂಪ್ರದಾಯಗಳು, ಜ್ಯೋತಿಷ್ಯದ ಲೆಕ್ಕಾಚಾರಗಳು ಮತ್ತು ಸರ್ಕಾರದ ಹಸ್ತಕ್ಷೇಪದ ನಡುವಿನ ಸಂಕೀರ್ಣ ಸಂಬಂಧವನ್ನು ಎತ್ತಿ ತೋರಿಸುವ ಒಂದು ನಿದರ್ಶನವಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಮತ್ತು ಸಮಗ್ರ ವಿಶ್ಲೇಷಣೆ, ಭವಿಷ್ಯದಲ್ಲಿ ಇಂತಹ ಧಾರ್ಮಿಕ ಕಾರ್ಯಗಳನ್ನು ಯೋಜಿಸುವವರಿಗೆ ಪಾಠವಾಗಬಹುದು.