ಈ ದಿನ ಡಾಟ್ಕಾಮ್ ಪ್ರಕಟಿಸಿದ “ಜೈ ಹಿಂದ್-ಜಯ ಕರ್ನಾಟಕ” ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
‘ಈದಿನ’ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ, ಈ ವಿಶೇಷಾಂಕದಲ್ಲಿ ಇದುವರೆಗೆ ಹೆಚ್ಚು ಚರ್ಚೆಯಾಗದ ಹಾಗೂ ಸಾಮಾನ್ಯ ಜನರಿಗೆ ತಿಳಿದಿರದ ಅನೇಕ ಐತಿಹಾಸಿಕ ಸಂಗತಿಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ನಾವು ಸತ್ಯವೆಂದು ನಂಬಿಕೊಂಡಿರುವ ಹಲವು ಇತಿಹಾಸದ ನಿರೂಪಣೆಗಳನ್ನು ಮರುಪರಿಶೀಲಿಸುವಂತೆ ಮಾಡುವ ಲೇಖನಗಳು ವಿಶೇಷಾಂಕದಲ್ಲಿವೆ. ವಿಶೇಷವಾಗಿ 1948ರಲ್ಲಿ ನಡೆದ ಮಹಾತ್ಮ ಗಾಂಧಿಯವರ ಹತ್ಯೆಗೂ ಮುನ್ನವೇ, 1934ರಿಂದ 1948ರ ಅವಧಿಯಲ್ಲಿ ಹಲವು ಬಾರಿ ಗಾಂಧಿಯವರನ್ನು ಹತ್ಯೆ ಮಾಡಲು ಯತ್ನಿಸಲಾಗಿತ್ತು. 1948ರ ಹತ್ಯೆ ಐದನೇ ಪ್ರಯತ್ನವಾಗಿದ್ದು, ಈ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು ಎಂಬ ಮಾಹಿತಿಯನ್ನು ವಿಶೇಷಾಂಕದ ಲೇಖನಗಳು ಬೆಳಕಿಗೆ ತರುತ್ತವೆ ಎಂದು ತಿಳಿಸಿದರು.
ಗಾಂಧಿ ಹತ್ಯೆಗೆ ದೇಶ ವಿಭಜನೆಯನ್ನೇ ಕಾರಣವೆಂದು ಹತ್ಯೆಗಾರರು ಸಮರ್ಥಿಸಿಕೊಂಡಿದ್ದರೂ, ದೇಶ ವಿಭಜನೆಗೂ ಮುನ್ನವೇ ಅವರ ಹತ್ಯೆಗೆ ಹಲವು ಪ್ರಯತ್ನಗಳು ನಡೆದಿದ್ದವು ಎಂಬ ಅಂಶವನ್ನು ಲೇಖಕರು ದಾಖಲೆಗಳೊಂದಿಗೆ ವಿವರಿಸಿದ್ದಾರೆ ಎಂದು ಹೇಳಿದರು.
ವಿಶೇಷಾಂಕದಲ್ಲಿರುವ ಲೇಖನಗಳು ಸ್ವಾತಂತ್ರ್ಯ ಹೋರಾಟ ಹಾಗೂ ಅದಕ್ಕೂ ಮುನ್ನ ನಡೆದ ಪ್ರತಿರೋಧ ಚಳವಳಿಗಳ ಅನೇಕ ಅಪರೂಪದ ಸಂಗತಿಗಳನ್ನು ನೆನಪಿಸುತ್ತವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ವಿಚಾರ, ಜಾತಿ ವಿನಾಶದ ಪರಿಕಲ್ಪನೆಯನ್ನು ಮುಂದಿಟ್ಟ ದೃಷ್ಟಿಕೋನ, ಮಹಿಳೆಯರು ಸೈನಿಕ ಪಡೆಗಳನ್ನು ರಚಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ವಿಚಾರಗಳನ್ನೂ ಲೇಖನಗಳು ದಾಖಲಿಸಿವೆ ಎಂದು ಹೇಳಿದರು.
ದೇಶದ ಇತಿಹಾಸವನ್ನು ಅವಲೋಕಿಸಿದಾಗ ಅನೇಕ ಕಥನಗಳು ನಮ್ಮ ಮುಂದೆ ಬರುತ್ತವೆ. ಆದರೆ ಮತೀಯತೆಯ ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಹಲವು ನಿರೂಪಣೆಗಳು ಗೊಂದಲ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಚರಿತ್ರೆ ಗತಕಾಲದ್ದಾಗಿದ್ದರೂ, ಅದನ್ನು ವರ್ತಮಾನದಲ್ಲಿ ಹೇಗೆ ಮರುನಿರೂಪಿಸಲಾಗುತ್ತಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಗಮನಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಶೇಷಾಂಕದ ಬಹುತೇಕ ಲೇಖನಗಳು ಅಸಮಾನತೆಯನ್ನು ಬಿಂಬಿಸುತ್ತಾ ಸಮಾನತೆಯ ಮೌಲ್ಯವನ್ನು ಪ್ರತಿಪಾದಿಸುತ್ತವೆ. ಸ್ವಾತಂತ್ರ್ಯವನ್ನು ಕೇವಲ ರಾಜಕೀಯ ನೆಲೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದಲ್ಲಿಯೂ ಅರ್ಥೈಸುವ ಅಗತ್ಯವನ್ನು ಒತ್ತಿಹೇಳುತ್ತವೆ. ಈ ನಿಟ್ಟಿನಲ್ಲಿ ವಿಶೇಷಾಂಕವು ತಾರ್ಕಿಕ ಹಾಗೂ ಸಂಶೋಧನಾತ್ಮಕ ದೃಷ್ಟಿಯಿಂದ ಸಂಕಲಿತಗೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಚೇಳೈರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳೈರು, ‘ಜೈ ಹಿಂದ್–ಜಯ ಕರ್ನಾಟಕ’ ವಿಶೇಷಾಂಕವು ಕೇವಲ ಕನ್ನಡಕ್ಕೆ ಸೀಮಿತವಾಗದೆ ಇತರ ಭಾಷೆಗಳಿಗೂ ಅನುವಾದವಾಗಿ ಜನಸಾಮಾನ್ಯರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಚರಿತ್ರೆಯ ಸತ್ಯವನ್ನು ಎದುರಿಸುವ ಧೈರ್ಯ ಪ್ರತಿಯೊಬ್ಬರಲ್ಲೂ ಇರಬೇಕು. ನಾವು ಅನೇಕ ವರ್ಷಗಳಿಂದ ಕೇಳಿಕೊಂಡು ಬಂದಿರುವ ಸುಳ್ಳುಗಳನ್ನು ಮೀರಿ ಸತ್ಯದ ಮುಖಾಮುಖಿಯಾಗುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಚರಿತ್ರೆಯನ್ನು ನಾವು ಓದಿದ್ದರೂ, ಅದನ್ನು ಮತ್ತೊಮ್ಮೆ ವಿಶೇಷಾಂಕದ ರೂಪದಲ್ಲಿ ಪ್ರಕಟಿಸುವ ಅಗತ್ಯ ಏಕೆ ಎಂಬ ಪ್ರಶ್ನೆ ಸಹಜ. ಆದರೆ ಚರಿತ್ರೆಯನ್ನು ಓದುವಾಗ ಅದು ವಾಸ್ತವಿಕ ಚರಿತ್ರೆಯೋ ಅಥವಾ ಸೈದ್ಧಾಂತಿಕ ಚರಿತ್ರೆಯೋ ಎಂಬುದನ್ನು ವಿಮರ್ಶಾತ್ಮಕವಾಗಿ ಅರಿತುಕೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದರು.

ಈದಿನ.ಕಾಮ್ ಜನಸ್ಪಂದನೆಯ ಮಾಧ್ಯಮವಾಗಿ ಕನ್ನಡದ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿದ್ದು, ಕೇವಲ ಕನ್ನಡ ಭಾಷೆಯಲ್ಲದೆ ಕನ್ನಡದ ಸಾಂಸ್ಕೃತಿಕ ಅಂಗಳವನ್ನು ವಿಸ್ತರಿಸುವ ನಿಟ್ಟಿನಲ್ಲಿ 40ಕ್ಕೂ ಹೆಚ್ಚು ಉಪಭಾಷೆಗಳಲ್ಲಿ ಅಂಕಣಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
‘ಜೈ ಹಿಂದ್’ ಎಂಬ ಘೋಷಣೆಯನ್ನು ನಾವು ಪ್ರತಿದಿನ ಉಚ್ಚರಿಸುತ್ತೇವೆ. ಆದರೆ ಅದನ್ನು ಮೊದಲ ಬಾರಿಗೆ ಯಾರು, ಯಾವ ಸಂದರ್ಭದಲ್ಲಿ ಬಳಸಿದರು ಎಂಬ ಪ್ರಶ್ನೆಗೆ ಉತ್ತರವನ್ನು ಈ ವಿಶೇಷಾಂಕ ತೆರೆದಿಡುತ್ತದೆ. ಸಾಮಾನ್ಯ ಗ್ರಹಿಕೆಗಳು ಹಾಗೂ ಮತೀಯ ಪೂರ್ವಾಗ್ರಹಗಳ ನಡುವೆ ಇಂತಹ ಐತಿಹಾಸಿಕ ಸತ್ಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
‘ಲೆಜೆಂಡ್ ಆಫ್ ಹೈದರಾಬಾದ್’ ಪುಸ್ತಕದ ಉಲ್ಲೇಖ ನೀಡಿದ ಅವರು, ‘ಜೈ ಹಿಂದ್’ ಘೋಷಣೆಯನ್ನು ಹೈದರಾಬಾದ್ ಮೂಲದ ಯುವಕ ಝೈನ್-ಉಲ್-ಆಬಿದೀನ್ ಹಸನ್ ಸಫ್ರಾನಿ (ಅಬಿದ್ ಹಸನ್ ಸಫ್ರಾನಿ) ರೂಪಿಸಿದ್ದರು ಎಂದು ಆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ‘ಹಿಂದ್’ ಎಂಬ ಪದದ ಅರ್ಥವನ್ನೇ ಇಂದು ಹಲವಾರು ರೀತಿಯಲ್ಲಿ ತಿರುಚಿರುವ ಕಾರಣ ನೈಜ ಇತಿಹಾಸ ಮರೆಯಾಗುತ್ತಿದೆ. ಆದ್ದರಿಂದ ವಾಸ್ತವಿಕ ಚರಿತ್ರೆಯನ್ನು ಅರಿತುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆವೆ. ಪ್ರೊ. ಡಾ. ಎಚ್.ಎಂ. ವಾಟ್ಸನ್ ಮಾತನಾಡಿ, ಹೊಸ ಕನ್ನಡದ ಉದಯಕ್ಕೆ ಕಾರಣವಾದ ಕನ್ನಡ ಪತ್ರಿಕೋದ್ಯಮದ ನೆಲದಲ್ಲಿಯೇ ಈದಿನ.ಕಾಮ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸತ್ಯನಿಷ್ಠೆ ಅತ್ಯಂತ ಮುಖ್ಯ ಅಂಶವಾಗಿದೆ. ಇರುವ ವಿಷಯವನ್ನು ಇರುವಂತೆಯೇ ಹೇಳುವುದು ಪತ್ರಿಕೋದ್ಯಮದ ಧರ್ಮ. ಆದರೆ ಯಾವುದೇ ಬರಹ ಅಥವಾ ವರದಿ ಸಂಪೂರ್ಣ ತಟಸ್ಥ (ನ್ಯೂಟ್ರಲ್) ಆಗಿರುವುದಿಲ್ಲ. ಅದು ಒಂದು ನಿರ್ದಿಷ್ಟ ದೃಷ್ಟಿಕೋನದಿಂದಲೇ ರೂಪುಗೊಳ್ಳುತ್ತದೆ. ಆದ್ದರಿಂದ ನಾವು ಯಾವ ದೃಷ್ಟಿಕೋನದಿಂದ ಬರೆಯುತ್ತೇವೆ ಎಂಬುದು ಅತ್ಯಂತ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈದಿನ.ಕಾಮ್ ಸಮಾಜದ ಅಂಚಿನಲ್ಲಿರುವ ಜನರ ದೃಷ್ಟಿಕೋನದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಈದಿನ.ಕಾಮ್ ಪ್ರಕಟಿಸುವ ಪುಸ್ತಕಗಳು ಕೇವಲ ಪುಸ್ತಕಗಳಾಗಿ ಉಳಿಯದೆ, ಸಮಾಜದ ವಿವಿಧ ವರ್ಗಗಳ ಜನರನ್ನು ತಲುಪಿ ಚಿಂತನೆಗೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ನಾವು “ವಾಟ್ಸಪ್ ಯೂನಿವರ್ಸಿಟಿ” ಯುಗದಲ್ಲಿ ಬದುಕುತ್ತಿದ್ದೇವೆ. ಸತ್ಯ ಸುದ್ದಿಗಳಿಗಿಂತ ಸುಳ್ಳು ಸುದ್ದಿಗಳೇ ಹೆಚ್ಚು ವೇಗವಾಗಿ ಹರಡುತ್ತಿವೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವೆಂಬ ಭ್ರಮೆ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ಸತ್ಯವನ್ನು ದಾಖಲಿಸುವ ಬರಹಗಳು ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಈ ಎರಡು ಮೌಲ್ಯಗಳನ್ನು ಅಳವಡಿಸಿಕೊಂಡು ಈದಿನ.ಕಾಮ್ ತನ್ನ ಪತ್ರಿಕೋದ್ಯಮ ಮತ್ತು ಪ್ರಕಟಣಾ ಕಾರ್ಯವನ್ನು ಮತ್ತಷ್ಟು ಯಶಸ್ವಿಯಾಗಿ ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಗೂ ಈ ದಿನ ಡಾಟ್ಕಾಮ್ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಉಮರ್ ಯು.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ದಿನ.ಕಾಮ್ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಈ ದಿನ ಡಾಟ್ಕಾಮ್ನ ರಾಜ್ಯ ಸಂಯೋಜಕ ಸಂತೋಷ್ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಈದಿನ.ಕಾಮ್ ಕರಾವಳಿ ವರದಿಗಾರ ಶಾರೂಕ್ ತೀರ್ಥಹಳ್ಳಿ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ದೇವಿಕಾ ನಾಗೇಶ್ ಧನ್ಯವಾದ ವಿತ್ತರು.






