ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು ಹೇಗಾದರೂ ಪಾಸ್ ಮಾಡಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆದಿದೆ. ಅಗತ್ಯವಿರುವ ಸಂಖ್ಯಾಬಲ ಭದ್ರಪಡಿಸಿಕೊಳ್ಳಲು , ತಾನೇ ಹೋಳು ಮಾಡಿದ್ದ ಎನ್ಸಿಪಿಯ ಎರಡು ಬಣಗಳನ್ನು ಮತ್ತೆ ಒಂದಾಗಿಸಲು ಹೊರಟಿದೆ ಮೋದಿ ಹಾಗೂ ಅಮಿತ್ ಶಾ ಜೋಡಿ. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಿಜೆಪಿ ಹೂಡಿದ್ದ ‘ಡಿವೈಡ್ ಅಂಡ್ ರೂಲ್’ ತಂತ್ರವೇ ಈಗ ತನಗೆ ಮುಳುವಾಗಿದ್ದು, ಮಸೂದೆಯ ಅಂಗೀಕಾರಕ್ಕಾಗಿ ಮತ್ತೆ ಶರದ್ ಪವಾರ್ ಅವರ ಬೆನ್ನು ಬಿದ್ದಿದೆ.
ಸಂವಿಧಾನವನ್ನು ತಿದ್ದುವ ಮೂಲಕ ಲೋಕಸಭಾ ಸ್ಥಾನಗಳನ್ನು 850ಕ್ಕೆ ಏರಿಸಿ, ತನ್ನ ಇರಾದೆಯಂತೆ ಕ್ಷೇತ್ರ ಮರುವಿಂಗಡಣೆ ಮಾಡಿಕೊಳ್ಳುವ ಮೋಸದ ಮಸೂದೆ ಜಾರಿಗೊಳಿಸಲು ಸರ್ಕಾರಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ಬಲವನ್ನು ಗಳಿಸಿಕೊಳ್ಳಲು ಬಿಜೆಪಿಗೆ ಈಗ ಶರದ್ ಪವಾರ್ ಬಣದ ಎಂಟು ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯನ ಬೆಂಬಲ ಅನಿವಾರ್ಯವಾಗಿದೆ. ಆದರೆ, ಬಿಜೆಪಿಯು ಶರದ್ ಪವಾರ್ ಅವರ ಬಣವನ್ನು ನೇರವಾಗಿ ಎನ್ಡಿಎಗೆ ಸೇರಿಸಿಕೊಳ್ಳಲು ಹಿಂಜರಿಯುತ್ತಿದೆ. ಏಕೆಂದರೆ, ಈಗಾಗಲೇ ಅಜಿತ್ ಪವಾರ್ ಅವರ ನೇತೃತ್ವದ ಎನ್ಸಿಪಿ ಬಣ ಮೈತ್ರಿಕೂಟದ ಭಾಗವಾಗಿದೆ. ಹೀಗಾಗಿ, ಎರಡೂ ಬಣಗಳನ್ನು ಪ್ರತ್ಯೇಕವಾಗಿ ಇಟ್ಟುಕೊಂಡರೆ ಮೈತ್ರಿಕೂಟದೊಳಗೆ ಆಂತರಿಕ ಅಸ್ಥಿರತೆ ಮತ್ತು ಅಸಮಾಧಾನ ಉಂಟಾಗಬಹುದು ಎಂಬ ಭೀತಿ ಬಿಜೆಪಿಯಲ್ಲಿದೆ. ಆದ್ದರಿಂದಲೇ ವಿಲೀನದ ಮಾರ್ಗ ಆಯ್ದುಕೊಂಡಿದೆ.
ಅಸಲಿಗೆ, ಬಿಜೆಪಿ ಕಳೆದ ಕೆಲ ವರ್ಷಗಳ ಹಿಂದೆ ತಾನೇ ಅಜಿತ್ ಪವಾರ್ ಬಣವನ್ನು ಪ್ರೇರೇಪಿಸಿ, ಅಧಿಕಾರದ ಆಮಿಷವೊಡ್ಡಿ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ಭಯದ ಲಾಭ ಪಡೆದು ಎನ್ಸಿಪಿಯನ್ನು ಒಡೆದು ಹೋಳು ಮಾಡಿತ್ತು. ಅಜಿತ್ ಪವಾರ್ ಬಣಕ್ಕೆ ‘ಅಸಲಿ ಎನ್ಸಿಪಿ’ ಎಂಬ ಮಾನ್ಯತೆ ಸಿಗುವಂತೆ ಮಾಡಿದ್ದ ಬಿಜೆಪಿ, ಇಂದು ಅದೇ ವಿಘಟಿತ ಬಣಗಳನ್ನು ಮತ್ತೆ ಒಂದಾಗಿಸಲು ಹರಸಾಹಸ ಪಡುತ್ತಿದೆ. ಈ ವಿಲೀನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬಿಜೆಪಿ ಆಮಿಷಗಳ ಬಲೆ ಸಹ ಬೀಸಿದೆ. ಎನ್ಸಿಪಿ (ಎಸ್ಪಿ) ನಾಯಕರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಆಹ್ವಾರ್ ಅವರನ್ನು ಮಹಾರಾಷ್ಟ್ರ ರಾಜ್ಯ ಸಂಪುಟಕ್ಕೆ ಸೇರಿಸಿಕೊಳ್ಳುವ ಮಾತುಕತೆ ನಡೆದಿದ್ದರೆ, ಕೇಂದ್ರ ರಾಜಕಾರಣದಲ್ಲಿ ಪ್ರಭಾವಶಾಲಿಗಳಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರಿಗೆ ಕೇಂದ್ರ ಸಚಿವ ಸ್ಥಾನಗಳನ್ನು ನೀಡುವ ಆಶ್ವಾಸನೆ ನೀಡಲಾಗಿದೆ ಎನ್ನಲಾಗಿದೆ. ದೇವೇಂದ್ರ ಫಡ್ನವೀಸ್ ಮತ್ತು ವಿನೋದ್ ತಾವ್ಡೆ ಅವರು ತೆರೆಮರೆಯಲ್ಲಿ ಈ ಎರಡೂ ಗಾಳ ಹಾಕಿ, ಭಾರೀ ಚೌಕಾಸಿ ನಡೆಸುತ್ತಿದ್ದಾರೆ.
ಆದರೆ, ಈ ವಿಲೀನ ಪ್ರಕ್ರಿಯೆ ಅಜಿತ್ ಪವಾರ್ ಬಣದ ಪಾಲಿಗೆ ದೊಡ್ಡ ಆತಂಕ ಸೃಷ್ಟಿಸಿದೆ. ಅಜಿತ್ ಅವರ ಮರಣದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಶರದ್ ಪವಾರ್ ಬಣದೊಂದಿಗೆ ವಿಲೀನವಾದರೆ, ಸುನೇತ್ರಾ ಅವರ ಅಧಿಕಾರ ಮತ್ತು ಅವರ ಮಕ್ಕಳಾದ ಪಾರ್ಥ್ ಮತ್ತು ಜಯ ಪವಾರ್ ಅವರ ರಾಜಕೀಯ ಭವಿಷ್ಯ ಅನಿಶ್ಚಿತವಾಗಬಹುದು ಎಂದು ಅವರು ಭಾವಿಸಿದ್ದಾರೆ. ಬಿಜೆಪಿ ಹಿಂದೆ ನೀಡಿದ್ದ ಭರವಸೆಯಂತೆ ಪಕ್ಷವು ಅಜಿತ್ ಪವಾರ್ ಕುಟುಂಬದ ಕೈಯಲ್ಲೇ ಉಳಿಯಬೇಕು ಎಂದು ಅವರು ಬಯಸುತ್ತಿದ್ದಾರೆ. ಈ ಕಾರಣದಿಂದಾಗಿ, ಬಿಜೆಪಿ ಇದೀಗ ‘ಕ್ಯಾಚ್-22’ ಪರಿಸ್ಥಿತಿಯಲ್ಲಿದೆ. ಒಂದು ಕಡೆ ಕ್ಷೇತ್ರ ಮರುವಿಂಗಡಣೆಗೆ ಅಗತ್ಯವಾದ ಬಲ ಪಡೆಯಲು ವಿಲೀನ ಅನಿವಾರ್ಯ, ಇನ್ನೊಂದೆಡೆ ತನ್ನ ಹಳೆಯ ಮಿತ್ರ ಬಣದ ಅಸಮಾಧಾನವನ್ನು ಎದುರಿಸುವ ಸವಾಲು ಬಿಜೆಪಿಗೆ ಎದುರಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 50 ಪಟ್ಟು ದಂಡ ಹೆಚ್ಚಳ: ನಿಯಮ ಉಲ್ಲಂಘಿಸಿದರೆ ಗರಿಷ್ಠ ₹25,000 ವರೆಗೆ ದಂಡ
ಶರದ್ ಪವಾರ್ ಅವರಂತಹ ಚಾಣಾಕ್ಷ ನಾಯಕರು ಈ ರಾಜಕೀಯ ಪಗಡೆಯಾಟದಲ್ಲಿ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಮತ್ತು ಸುನೇತ್ರಾ ಪವಾರ್ ಅವರ ವಿರೋಧದ ನಡುವೆ ಬಿಜೆಪಿ ಹೇಗೆ ಈ ಸಮಸ್ಯೆಯನ್ನು ನಿಭಾಯಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.





