ಶಾಲಾ ಬಸ್ ಮತ್ತು ಆಟೋರಿಕ್ಷಾ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸೇರಿದಂತೆ ಐದು ಮಂದಿ ಮೃತಪಟ್ಟ ಘಟನೆ ಕರ್ನಾಟಕ-ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ.
ಸೋಮವಾರ ಸಂಜೆ ಅಪಘಾತ ಸಂಭವಿಸಿದ್ದು, ತಾಯಲಂಗಡಿ ನಿವಾಸಿ ಪ್ರಸ್ತುತ ಮೊಗ್ರಾಲಿನಲ್ಲಿ ವಾಸಿಸುವ ರಿಕ್ಷಾ ಡ್ರೈವರ್ ಅಬ್ದುಲ್ ರೌಪ್ (58), ಮೊಗ್ರಾಲಿನ ಉಸ್ಮಾನ್ ಎಂಬವರ ಪತ್ನಿ ಭಿಪಾತಿಮ್ಮ (50), ಷೇಕ್ ಅಲಿ ಎಂಬವರ ಪತ್ನಿ ಭಿಪಾತಿಮ್ಮ (60), ಇಸ್ಮಾಯಿಲ್ ಅವರ ಪತ್ನಿ ಉಮ್ಮು ಅಲಿಮಾ, ಬೆಳ್ಳೂರು ಅಬ್ಬಾಸ್ ಎಂಬವರ ಪತ್ನಿ ನಫೀಸ ಎಂಬ ಮೃತರು ಮೊಗ್ರಾಲ್, ಪುತ್ತೂರು ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ ಮಕ್ಕಳನ್ನು ಬಿಟ್ಟು ಬರುತ್ತಿದ್ದ ಬಸ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯ ತೀವ್ರತೆಗೆ ಆಟೋ ನಜ್ಜುಗುಜ್ಜಾಗಿದೆ. ಆಟೋದಲ್ಲಿದ್ದ ಐವರು ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾಮಗಾರಿಗಳಲ್ಲಿ ಅಕ್ರಮ; ಮೂವರು ಎಂಜಿನಿಯರ್‌ಗಳ ಅಮಾನತು
ಆಟೋದಲ್ಲಿ ಚಾಲಕ ಸೇರಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಇದೇ ಸಮಯದಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ಮರಳುತ್ತಿದ್ದ ಶಾಲಾ ಬಸ್ ಮತ್ತು ಆಟೋರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಘಟನೆಯಲ್ಲಿ ಆಟೋ ಸಂಪೂರ್ಣ ಜಖಂಗೊಂಡಿತ್ತು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.