ಕರಾವಳಿ ಭಾಗದಲ್ಲಿ ಸುಮಾರು 60 ಬಸ್‌ಗಳ ಮಾಲೀಕರಾಗಿದ್ದ ಉದ್ಯಮಿ ಪ್ರಕಾಶ್ ಶೇಖ(42) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಮಂಗಳೂರು ನಗರದ ಕದ್ರಿ ಕಂಬಳ ಸಮೀಪದ ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ‘ಮಹೇಶ್ ಮೋಟಾರ್ಸ್’ಗೆ ಸೇರಿದ ಅನೇಕ ಸಿಟಿ ಬಸ್ ಮತ್ತು ಜಿಲ್ಲಾ ಬಸ್‌ಗಳು ಪ್ರತಿದಿನವೂ ಸಂಚರಿಸುತ್ತಿದ್ದು, ಜನಪ್ರಿಯವಾಗಿದೆ.

ಮಧ್ಯಾಹ್ನ ಊಟ ಮಾಡಿ ಕೊಠಡಿಗೆ ತೆರಳಿದ್ದರು
ಇಂದು ಮಧ್ಯಾಹ್ನ ಮನೆಯಲ್ಲಿದ್ದ ಪ್ರಕಾಶ್ ಅವರು, ಊಟ ಮಾಡಿದ ಬಳಿಕ ಕೊಠಡಿಗೆ ತೆರಳಿದ್ದರು. ಮಲಗಿರಬಹುದೆಂದು ಸಂಜೆ ಮನೆ ಮಂದಿ ಎಬ್ಬಿಸಲು ಹೊರಟಾಗ ಕೊಠಡಿಯ ಬಾಗಿಲು ತೆಗೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಘಟನೆ ಸಂಬಂಧ ಕದ್ರಿ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಚ್ಚಿ ಬೀಳಿಸಿದ ಸುದ್ದಿ
60 ಬಸ್‌ಗಳ ಮಾಲೀಕರಾಗಿರುವ ಹಿನ್ನೆಲೆಯಲ್ಲಿ ಉದ್ಯಮದ ವಿಚಾರದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದಿದ್ದರೂ, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ನಿನ್ನೆ ಸಂಜೆ ತನ್ನ ಆಪ್ತ ಸ್ನೇಹಿತರೊಡನೆ ಹೊರಗಡೆ ಸುತ್ತಾಡಿದ್ದ ಪ್ರಕಾಶ್ ಅವರು, ಈ ರೀತಿ ಆತ್ಮಹತ್ಯೆಗೆ ಶರಣಾಗಿರುವುದು ಕರಾವಳಿಗರನ್ನು ಅದರಲ್ಲೂ ಖಾಸಗಿ ಬಸ್ ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸಿದೆ. ಮಾನಸಿಕ ಒತ್ತಡಕ್ಕೆ ಸಿಲುಕಿ ಈ ರೀತಿ ಮಾಡಿಕೊಂಡಿದ್ದಾರೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಮೃತರು ತಂದೆ ಜಯರಾಮ್ ಶೇಖ, ಪತ್ನಿ, ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.