ಮಂಗಳೂರು ಹೊರವಲಯದ ಮೂಳೂರು ಗ್ರಾಮದ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಮೂರ್ತಿ ನಿರ್ಮಿಸಿರುವುದಲ್ಲದೆ, ಗ್ರಾಮದ ಎರಡು ರಸ್ತೆಗಳನ್ನು ಬಂದ್ ಮಾಡಿದ ಕಾರಣ ನಾಗರಿಕರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಈ ದಿನ ಡಾಟ್ ಕಾಮ್ ಮೇ 12ರಂದು ವರದಿ ಮಾಡಿದ್ದು, ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
“ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಫಲ್ಗುಣಿ ನದಿ ತಟದಲ್ಲಿರುವ ಸರ್ವೇ ನಂಬರ್ 94/1ರಲ್ಲಿ ಇರುವ 80.76 ಸೆಂಟ್ಸ್ ಸರ್ಕಾರಿ ಜಾಗವನ್ನು ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರು ಒತ್ತುವರಿ ಮಾಡಿರುವುದಲ್ಲದೆ, ಆ ಜಾಗದಲ್ಲಿ ಮಹಾಕಾಲೇಶ್ವರನ ಮೂರ್ತಿ ನಿರ್ಮಿಸಿ ಮೇ 15ರಿಂದ 17ರವರೆಗೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ ಗ್ರಾಮದ ಬಂಡಸಾಲೆಯಿಂದ – ಕಾರಮೊಗರು ಮತ್ತು ವನಭೋಜನದಿಂದ – ಬರ್ಕೆಗೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳನ್ನು ಕೂಡಾ ಬಂದ್ ಮಾಡಿ ತೊಂದರೆ ನೀಡುತ್ತಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಗ್ರಾಮಸ್ಥರ ಈ ಆರೋಪದ ಬಗ್ಗೆ ಈ ದಿನ ಡಾಟ್ ಕಾಂ ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಜಾಗವನ್ನು ಅಕ್ರಮಿಸಿರುವ ಆರೋಪ ಇರುವುದರಿಂದ ಮೇಲಾಧಿಕಾರಿಗಳ ಸೂಚನೆ ಬರುವವರೆಗೆ ಮೂರ್ತಿಯ ಉದ್ಘಾಟನೆ, ಬ್ರಹ್ಮಕಲಶ ಸಹಿತ ಯಾವುದೇ ಕಾರ್ಯಕ್ರಮ ನಡೆಸದಂತೆ ದುರ್ಗಾ ಪ್ರಸಾದ್ ಶೆಟ್ಟಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

“ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಇರುವ ಸರ್ಕಾರಿ ಜಾಗ ಮತ್ತು ಬಂದ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿರುವ ರಸ್ತೆಗಳ ಸರ್ವೆ ನಡೆಸಲು ಸರ್ವೆ ಇಲಾಖೆಗೆ ಅರ್ಜಿ ಹಾಕಿದ್ದೇವೆ. ಸರ್ವೇ ನಡೆಸಿ ಗಡಿ ಗುರುತು ಮಾಡಿದಾಗ ಒತ್ತುವರಿ ಮಾಡಿರುವ ಜಾಗದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಬಗ್ಗೆ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ನೀಡಲಿದ್ದೇವೆ” ಎಂದು ಕಂದಾಯ ಅಧಿಕಾರಿ ಪೂರ್ಣಚಂದ್ರ ಅವರು ಈ ದಿನ ಡಾಟ್ ಕಾಂಗೆ ತಿಳಿಸಿದ್ದಾರೆ.
“ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಆರೋಪ ಇರುವುದರಿಂದ ಆ ಜಾಗದಲ್ಲಿ ಕಟ್ಟಿರುವ ಮೂರ್ತಿ ಮತ್ತು ಇತರ ಕಟ್ಟಡಗಳ ಉದ್ಘಾಟನೆ ಸಹಿತ ಯಾವುದೇ ಕಾರ್ಯಕ್ರಮ ನಡೆಸದಂತೆ ದುರ್ಗಾ ಪ್ರಸಾದ್ ಶೆಟ್ಟಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಅದರಂತೆ ಉದ್ಘಾಟನೆ, ಬ್ರಹ್ಮಕಲಶ ಕಾರ್ಯಕ್ರಮ ನಿಲ್ಲಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಮೂರ್ತಿ ನಿರ್ಮಿಸಿರುವ ಸರ್ಕಾರಿ ಜಾಗದ ಪಕ್ಕದಲ್ಲೇ ದುರ್ಗಾ ಪ್ರಸಾದ್ ಶೆಟ್ಟಿಗೆ ಸೇರಿದ ಖಾಸಗಿ ಜಾಗ ಇದ್ದು, ಅದರಲ್ಲಿ ಅತಿಥಿ ಗೃಹ, ಸ್ನಾನ ಗೃಹ, ಪಾರ್ಕ್ ಸಹಿತ ಪ್ರವಾಸೋದ್ಯಮಕ್ಕೆ ಬೇಕಾದ ಕಟ್ಟಡ ಮತ್ತು ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅದರಲ್ಲಿ 22 ಅಡಿ ಎತ್ತರದ ಪೀಠ ಮತ್ತು ಅದರ ಮೇಲೆ 23 ಅಡಿ ಎತ್ತರದ ಮಹಾಕಾಲೇಶ್ವರನ ಮೂರ್ತಿ ನಿರ್ಮಿಸಿದ್ದಾರೆ. ಈ ಮೂರ್ತಿ ದಕ್ಷಿಣ ಭಾರತದಲ್ಲೇ ಅತೀ ಎತ್ತರದ ಏಕ ಶಿಲಾಮೂರ್ತಿ ಎಂದು ಪ್ರಚಾರಪಡಿಸಲಾಗುತ್ತಿದೆ. ಅಲ್ಲದೆ ಫಲ್ಗುಣಿ ನದಿಗೆ ಅಕ್ರಮವಾಗಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ಹಿಂದೆ ಪ್ರವಾಸಿಗರನ್ನು ಸೆಳೆದು ಆದಾಯ ಗಳಿಸುವ ಉದ್ದೇಶ ಅಡಗಿದೆ ಹೊರತು ಯಾವುದೇ ಭಕ್ತಿ ಶ್ರದ್ಧೆ ಇಲ್ಲ” ಎಂದು ಗ್ರಾಮಸ್ಥರು ದೂರಿದ್ದರು.