ಮಂಗಳೂರು ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದು, ಕಾರ್ಯಕ್ರಮದ ಆಯೋಜಕರು ಮತ್ತು ಮಂಗಳೂರು ಜನರಿಗೆ ತೀವ್ರ ಬೇಸರ ತರಿಸಿದೆ.
ಸಿದ್ದರಾಮಯ್ಯ ಅವರ ಬರುವಿಕೆಗಾಗಿ ಮೂರು ಗಂಟೆಗೂ ಹೆಚ್ಚು ಸಮಯ ಕಾದುಕುಳಿತಿದ್ದ ನೂರಾರು ಜನರು ಮತ್ತು ಪತ್ರಕರ್ತರು ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹಿಡಿಶಾಪ ಹಾಕಿ ವಾಪಾಸ್ ತೆರಳಿದ್ದಾರೆ.
ಸಿದ್ದರಾಮಯ್ಯ ಶುಕ್ರವಾರ ಮಂಗಳೂರು ಪ್ರವಾಸದಲಿದ್ದರು. ಮಧ್ಯಾಹ್ನ 1 ಗಂಟೆಗೆ ಮೇರಿಹಿಲ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಸಿಎಂ ಬಳಿಕ ಪುರಭವನದಲ್ಲಿ ಆಯೋಜನೆಯಾಗಿದ್ದ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ, ಆ ಕಾರ್ಯಕ್ರಮಕ್ಕೆ ಸಿಎಂ ಗೈರು ಹಾಜರಾದರು. ಅಧಿಕೃತ ಸರ್ಕಾರಿ ಕಾರ್ಯಕ್ರಮಕ್ಕೆ ಗೈರುಹಾಜರಾದ ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಸ್ಪೀಕರ್ ಯು.ಟಿ ಖಾದರ್ ಅವರ ನಿವಾಸದಲ್ಲಿ ಕಾಲ ಕಳೆದರು.
ಪ್ರಾಮುಖ್ಯತೆಯ ಬಹುಸಂಸ್ಕೃತಿ ಉತ್ಸವಕ್ಕೆ ಗೈರಾಗಿದ್ದು ಕಾರ್ಯಕ್ರಮದ ಆಯೋಜಕರು ಮತ್ತು ನೆರದಿದ್ದ ನೂರಾರು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೋಮುಸೂಕ್ಷ್ಮ ಪ್ರದೇಶದಲ್ಲಿ ಸಮಾಜ ಮತ್ತು ಸಮುದಾಯಗಳ ನಡುವೆ ನಂಬಿಕೆ ವಿಶ್ವಾಸ ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮವು ಸಿಎಂ ಸಿದ್ದರಾಮಯ್ಯನವರಿಗೆ ಮುಖ್ಯವಾಗಬೇಕಿತ್ತು. ವಿಧಾನ ಪರಿಷತ್ ಸದಸ್ಯ ಮತ್ತು ಸ್ಪೀಕರ್ ಮನೆಯಲ್ಲಿ ಕಾಲಹರಣ ಮಾಡುವ ಬದಲು ಬಹುಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬಂದಿವೆ.