ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣದ ಹಾದಿಗೆ ಒಯ್ಯುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನ್ವಾದಿ) ಲಿಬರೇಶನ್ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ನಿರ್ಧಾರವು ಜನರ ಹಕ್ಕುಗಳ ಮೇಲಿನ ನೇರ ದಾಳಿ ಎಂದು ಆರೋಪಿಸಿದರು. ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದ್ದು, ಹಂತ ಹಂತವಾಗಿ ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿದೆ ಎಂದು ಅವರು ಟೀಕಿಸಿದರು.

ಇದು ಬಡಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವ ದಾಳಿ ಆಗಿದ್ದು, ಈ ಒಪ್ಪಂದವನ್ನು ಹಿಂತೆಗೆದುಕೊಳ್ಳುವವರೆಗೆ ನಿರಂತರ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಚಿಕಿತ್ಸೆ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುವ ವ್ಯವಸ್ಥೆಗೆ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದ್ದರೂ, ಅದನ್ನು ಕಡೆಗಣಿಸಿ ಖಾಸಗೀಕರಣದ ದಾರಿಗೆ ಸಾಗುವುದು ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವ ಅನ್ಯಾಯಕರ ಕ್ರಮವಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಜನತೆಗೆ ದ್ರೋಹವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೊಡಗು ಮಾತನಾಡಿ, ಸರಕಾರಿ ಆಸ್ಪತ್ರೆಗಳು ಜನರ ಸಂವಿಧಾನಿಕ ಹಕ್ಕುಗಳ ಭಾಗವಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ದೂರಿದರು.

ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (AILAJ) ಮುಖಂಡ ಅಡ್ವಕೇಟ್ ಮಹಮ್ಮದ್ ಲುಕ್ಮಾನ್ ಮಾತನಾಡಿ, “ಸೌಲಭ್ಯಗಳ ಕೊರತೆ” ಎಂಬ ನೆಪದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸರ್ಕಾರ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದರು. ಇದು ಜನಪರ ನೀತಿಯಲ್ಲ, ಬದಲಾಗಿ ಬಂಡವಾಳಶಾಹಿ ಪರ ನೀತಿ ಎಂದು ಟೀಕಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಅಡ್ವಕೇಟ್ ತುಳಸೀದಾಸ್ ಆರ್ ಮಾತನಾಡಿ, ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಬದಲು ಖಾಸಗಿ ಲಾಬಿಗೆ ಮಣಿಯುತ್ತಿರುವುದು ವಿಷಾದನೀಯ. ವಿರೋಧ ಪಕ್ಷಗಳೂ ಈ ವಿಷಯದಲ್ಲಿ ಮೌನ ವಹಿಸಿರುವುದು ಖಂಡನೀಯ ಎಂದು ಹೇಳಿದರು.

ಕಾರ್ಮಿಕ ಮುಖಂಡ ಮಹಮ್ಮದ್ ಅನ್ಸಾರ್ ಬಜಾಲ್ ಮಾತನಾಡಿ, ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ವಿಟ್ಲ ಭಾಗಗಳಲ್ಲಿನ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿರುವುದರಿಂದ ಲಾಭ ಜನರಿಗೆ ಅಲ್ಲ, ಖಾಸಗಿ ಸಂಸ್ಥೆಗಳಿಗೆ ಮಾತ್ರ ಆಗುತ್ತಿದೆ ಎಂದು ಹೇಳಿದರು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಇದು ನಿದರ್ಶನವಾಗಿದೆ ಎಂದು ಆರೋಪಿಸಿದರು.

ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡೆ ಸುಧಾ ರಾವ್ ಬೆಳ್ತಂಗಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ ಪ್ರಾಸ್ತಾವಿಕವಾಗಿ ಮಾತನಾಡಿ, ಹೋರಾಟವನ್ನು ಜಿಲ್ಲಾದ್ಯಂತ ವಿಸ್ತರಿಸುವಂತೆ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸಂಜೀವ ಬೆಳ್ತಂಗಡಿ, ಪ್ರಜ್ವಲ್, ರವಿ ಕೊಡಗು, ವಿಲ್ಲಿ ವಿಲ್ಸನ್, ಸರಸ್ವತಿ ಕಡೇಶಿವಾಲಯ, ಜಿಲಾನಿ ಮಂಗಳೂರು, ದೀಕ್ಷಾ ಬಜಾಲ್, ಸುಹೈಲ್, ಶೇಖರ ಪುತ್ತೂರು, ಸುಧಾ ಜಿ.ರಾವ್, ಕುಸುಮಾವತಿ, ಅಚ್ಯುತ ಕಟ್ಟೆ, ಬದ್ರುದ್ದೀನ್, ಅಝೀಂ, ಇಬ್ರಾಹಿಂ, ಹರೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.





