ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ನ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನಕ್ಕೆ ಏರಿದ್ದಾರೆ.
ಗೌತಮ್ ಅದಾನಿ ಅವರ ಒಟ್ಟು ಆಸ್ತಿ ಮೌಲ್ಯ $92.6 ಬಿಲಿಯನ್ (ಸುಮಾರು 7.73 ಲಕ್ಷ ಕೋಟಿ ರೂಪಾಯಿ) ಆಗಿದೆ. ಅದಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಆಸ್ತಿ ಮೌಲ್ಯ $90.8 ಬಿಲಿಯನ್ (ಸುಮಾರು 7.58 ಲಕ್ಷ ಕೋಟಿ ರೂಪಾಯಿ) ಆಗಿದೆ. ಜಾಗತಿಕವಾಗಿ 20ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಕ್ಕಾಗಿ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ನಡುವೆ ಕಳೆದ ಕೆಲವು ವರ್ಷಗಳಿಂದ ತೀವ್ರ ಸ್ಪರ್ಧೆ ನಡೆಯುತ್ತಿದೆ. 2022ರಲ್ಲಿ ಅದಾನಿ ಮೊದಲ ಬಾರಿಗೆ ಅಂಬಾನಿಯವರನ್ನು ಹಿಂದಿಕ್ಕಿದ್ದರು. ಆದರೆ ಹಿಂಡೆನ್ಬರ್ಗ್ ವರದಿಯ ನಂತರ ಅದಾನಿ ಸಮೂಹದ ಷೇರುಗಳು ಕುಸಿದಾಗ ಅಂಬಾನಿ ಮತ್ತೆ ಅಗ್ರಸ್ಥಾನಕ್ಕೇರಿದ್ದರು.
ಆದರೆ 2024-2025ರ ಅವಧಿಯಲ್ಲಿ ಇಬ್ಬರೂ ಉದ್ಯಮಿಗಳ ನಡುವೆ ಈ ಸ್ಥಾನವು ಹಲವಾರು ಬಾರಿ ಅದಲುಬದಲಾಗಿದೆ. ಇವರಿಬ್ಬರ ಆಸ್ತಿಯ ವ್ಯತ್ಯಾಸವು ಕೇವಲ $1.8 ಬಿಲಿಯನ್ ಮಾತ್ರ ಇರುವುದರಿಂದ, ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಈ ಸ್ಥಾನಗಳು ಮತ್ತೆ ಬದಲಾಗುವ ಸಾಧ್ಯತೆಯೂ ಇರುತ್ತದೆ.




