ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ರವಿವಾರ ಏ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಕೆ ಆರ್ ಸಹಿತ ಮೂವರನ್ನು ಅಮಾನತುಗೊಳಿಸಲಾಗಿದೆ.
ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದ ಕೇರಳ ಮೂಲದ ಅಶ್ರಫ್ ಎಂಬ ಯುವಕನನ್ನು ಗುಂಪು ಥಳಿಸಿ ಹತ್ಯೆಗೈದಿತ್ತು. ಪ್ರಕರಣ ಬೆಳಕಿಗೆ ಬಂದರೂ ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು 20 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು
ಏ.27ರಂದು ಕುಡುಪುವಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿಗೆ, ಆಟಗಾರರು ಮತ್ತು ಅಲ್ಲಿ ನರೆದಿದ್ದ ಪ್ರೇಕ್ಷಕರು ಗುಂಪು ಹಲ್ಲೆ ನಡೆಸುತ್ತಿದ್ದ ಕುರಿತು ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್, ಸಿಬ್ಬಂದಿಗಳಿಗೆ ಮಾಹಿತಿ ಬಂದಿತ್ತು. ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಗುಂಪು ಹತ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿಲ್ಲ ಎನ್ನಲಾಗಿದೆ.
ಮೊದಲು ಈ ಪ್ರಕರಣವನ್ನು ಯುಡಿಆರ್ ಪ್ರಕರಣವಾಗಿ ದಾಖಲಿಸಿ, ಮುಚ್ಚುವುದಕ್ಕೆ ಪ್ರಯತ್ನಪಟ್ಟ ಆರೋಪ ಕೇಳಿಬಂದಿತ್ತು. ಸಾಮಾಜಿಕ ಹೋರಾಟಗಾರರ ಒತ್ತಡದ ಬಳಿಕ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬೆನ್ನಲ್ಲೇ, ಗುಂಪು ಹತ್ಯೆ ಪ್ರಕರಣವಾಗಿ ಪೊಲೀಸರು ದೂರು ದಾಖಲಿಸಿಕೊಂಡು, ಈವರೆಗೆ 20 ಮಂದಿಯನ್ನು ಬಂಧಿಸಿದ್ದಾರೆ.
ಗುಂಪು ಹತ್ಯೆಯ ಬಗ್ಗೆ ಮಾಹಿತಿ ತಿಳಿದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ನಿರ್ಲಕ್ಷತನ ತೋರಿದ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್‌ಸ್ಪೆಕ್ಟರ್ ಅಮಾನತುಗೊಳಿಸಲು ಗೃಹ ಸಚಿವರಿಗೆ ಸಚಿವ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪತ್ರ
ವಲಸೆ ಕಾರ್ಮಿಕನನ್ನು ಸುಮಾರು 30ಕ್ಕೂ ಅಧಿಕ ಮಂದಿಯ ಗುಂಪೊಂದು ಕೈಗೆ ಸಿಕ್ಕಿದ್ದನ್ನೆಲ್ಲ ಬಳಸಿಕೊಂಡು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ, ಉನ್ನತಮಟ್ಟದ ತನಿಖೆ ನಡೆಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೃಹ ಸಚಿವರಿಗೆ ಪತ್ರ ಬರೆದಿದ್ದರು.
ಹಾಗೆಯೇ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ್ ಚಿತ್ರಾಪುರ ಅವರು ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಮಾಹಿತಿ ಇದ್ದರೂ ಕೂಡ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಶಿವಪ್ರಸಾದ್ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಹಾಗಾಗಿ, ಅಮಾನತು ಮಾಡಿ, ಉನ್ನತ ಮಟ್ಟದ ತನಿಖೆ ನಡೆಸಲು ಕೋರಿದ್ದರು.

