ನಮ್ಮ ಪಿಕ್‌ಅಪ್ ಊರ ಜನತೆಗೆ ತುರ್ತು ವಾಹನ ಆಗಿತ್ತು: ರಹ್ಮಾನ್ ಅಣ್ಣ ಹನೀಫ್

Date:

Advertisements

ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಮಂಗಳೂರಿನ ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ, ಪಿಕ್ಅಪ್ ಚಾಲಕ ರಹ್ಮಾನ್ ಅವರ ಅಣ್ಣ ಹನೀಫ್ ಅವರ ಮಾತುಗಳಿವು. ಹನೀಫ್ ಕೂಡಾ ವೃತ್ತಿಯಲ್ಲಿ ಪಿಕ್ಅಪ್ ಚಾಲಕ. ಅಣ್ಣ ತಮ್ಮ ಒಟ್ಟು ಸೇರಿ ತಮ್ಮ ವೃತ್ತಿ ಜೀವನದಲ್ಲಿ ಜಾತಿ ಧರ್ಮ ಭೇದ ಮರೆತು ಮಾಡಿರುವ ಪರೋಪಕಾರ, ತುರ್ತು ಸಂದರ್ಭದಲ್ಲಿ ಅರ್ಧ ರಾತ್ರಿಯಲ್ಲೂ ಮಾಡಿರುವ ಸೇವೆಗಳನ್ನು ಅವರು ವಿವರಿಸುತ್ತಾರೆ.

“ನಮ್ಮ ಪಿಕ್‌ಅಪ್ ಕೇವಲ ಮರಳು, ಜಲ್ಲಿ, ಕಲ್ಲು, ಕಬ್ಬಿಣ ಸಾಗಾಟಕ್ಕೆ ಸೀಮಿತ ಅಲ್ಲ. ಅದು ಈ ಊರಿನವರ ಪಾಲಿನ ತುರ್ತು ವಾಹನವೂ ಹೌದು. ಸರ್ವ ಧರ್ಮಗಳ ಸಭೆ ಸಮಾರಂಭಗಳ ಅಗತ್ಯಗಳನ್ನು ಪೂರೈಸಲು ತಲುಪುವ ಜೀಪ್ ಕೂಡಾ ಹೌದು. ಪ್ರವಾದಿ ಜನ್ಮ ದಿನದಂದು ಹಸಿರು ಬಾವುಟ ಇಟ್ಟು ಮಸೀದಿಯಿಂದ ನಡೆಯುವ ಮೆರವಣಿಗೆಯ ಮುಂಭಾಗದಲ್ಲಿ ಇರುವ ಈ ಪಿಕ್ಅಪ್‌ನಲ್ಲೇ ಶಾರದೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಕೇಸರಿ ಬಾವುಟ ಇಟ್ಟು ಇಪ್ಪತ್ತು ವರ್ಷ ಶಾರದಾ ಮೂರ್ತಿಯನ್ನು ಹೊತ್ತು ಮೆರವಣಿಗೆ ಹೊರಟಿದೆ. ಅನಾರೋಗ್ಯ, ಹೆರಿಗೆ ನೋವು ಹೀಗೆ ಈ ಊರಿನ ನೂರಾರು ಮಂದಿಯನ್ನು ಯಾವ ರಾತ್ರಿಯನ್ನೂ ಲೆಕ್ಕಿಸದೆ ಆಸ್ಪತ್ರೆಗಳಿಗೆ ತಲುಪಿಸಿದೆ. ಹಿಂದು ಮುಸ್ಲಿಮ್ ಸೇರಿ ನನ್ನ ಪಿಕ್ಅಪ್‌ನಲ್ಲೇ ಎಂಟು ಹೆರಿಗೆ ಆಗಿದೆ. ಹೆರಿಗೆ ನೋವಿನ ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ತಲುಪಿದ ಹಿನ್ನೆಲೆಯಲ್ಲಿ ಅದೆಷ್ಟೋ ಜೀವಗಳು ಉಳಿದಿವೆ….

ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಮಂಗಳೂರಿನ ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ, ಪಿಕ್ಅಪ್ ಚಾಲಕ ರಹ್ಮಾನ್ ಅವರ ಅಣ್ಣ ಹನೀಫ್ ಅವರ ಮಾತುಗಳಿವು. ಹನೀಫ್ ಕೂಡಾ ವೃತ್ತಿಯಲ್ಲಿ ಪಿಕ್ಅಪ್ ಚಾಲಕ. ಅಣ್ಣ ತಮ್ಮ ಒಟ್ಟು ಸೇರಿ ತಮ್ಮ ವೃತ್ತಿ ಜೀವನದಲ್ಲಿ ಜಾತಿ ಧರ್ಮ ಭೇದ ಮರೆತು ಮಾಡಿರುವ ಪರೋಪಕಾರ, ತುರ್ತು ಸಂದರ್ಭದಲ್ಲಿ ಮಳೆ ಚಳಿ ಲೆಕ್ಕಿಸದೆ ಅರ್ಧ ರಾತ್ರಿಯಲ್ಲೂ ಮಾಡಿರುವ ಸೇವೆಗಳನ್ನು ಒಲ್ಲದ ಮನಸ್ಸಿನಲ್ಲಿ ವಿವರಿಸುತ್ತಾರೆ.

Advertisements

ಈ ದಿನ.ಕಾಮ್‌ ಜೊತೆ ಮಾತನಾಡಿದ ಹನೀಫ್, “ಇವೆಲ್ಲವೂ ಹೇಳುವ ವಿಚಾರವಲ್ಲ. ಇವು ಯಾವುದನ್ನೂ ಪ್ರಚಾರಕ್ಕೆ ಮಾಡಿದ್ದಲ್ಲ. ಪ್ರಚಾರಕ್ಕೆ ಮಾಡಿದು ಅಲ್ಲ ಎಂದಾದ ಮೇಲೆ ಅವೆಲ್ಲವನ್ನು ಹೇಳುವ ವಿಚಾರವೇ ಬರುವುದಿಲ್ಲ. ಇದು ಯಾವುದೂ ಈವರೆಗೆ ಹೊರಗಿನ ಪ್ರಪಂಚಕ್ಕೆ ಗೊತ್ತಿಲ್ಲ. ನಮಗೂ, ನಮ್ಮ ವಾಹನದಲ್ಲಿ ಬಂದವರಿಗೆ ಮಾತ್ರವೇ ಗೊತ್ತು. ಎಲ್ಲವೂ ಶುದ್ಧ ನಿಸ್ವಾರ್ಥ ಸೇವೆ. ಆದರೆ ಈಗ ಒಂದೊಂದನ್ನು ಹೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೂ ಹೇಳುವುದಕ್ಕೂ ಆಗಲ್ಲ. ಹೇಳದೇ ಇರಲೂ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಬಂದೊದಗಿದೆ. ಏನು ಮಾಡುವುದು ನೀವೇ ಹೇಳಿ. ಅಷ್ಟೊಂದು ಸೌಹಾರ್ದ ಇದ್ದ ಊರು ಇದು. ಧಾರ್ಮಿಕ ಆಚರಣೆಗಳು ಬೇರೆ ಬೇರೆ ಇದ್ದರೂ ಮನುಷ್ಯ ಮನುಷ್ಯರ ನಡುವೆ ನಂಬಿಕೆ ಒಂದೇ ಇತ್ತು. ಎಲ್ಲವೂ ಕಳೆದು ಹೋಯಿತು. ಅದು ಕೂಡಾ ಬೆಳಿಗ್ಗೆ ಎದ್ದು ಮುಖ ನೋಡುವವರಿಂದಲೇ ಎಂಬುದು ಇನ್ನಷ್ಟು ದುಃಖದ ಸಂಗತಿ” ಎಂದು ವಿಷಾದದಿಂದ ಅವರು ಹೇಳುತ್ತಾರೆ.

“ನಮ್ಮದು ಕುಗ್ರಾಮ. ತುರ್ತು ಸಮಯದಲ್ಲಿ ಇಲ್ಲಿಗೆ ಈ ಕಾಲದಲ್ಲೇ ಹಗಲು ಸಮಯದಲ್ಲಿ ಆಂಬುಲೆನ್ಸ್ ತಲುಪುದು ಕಷ್ಟ. ಇನ್ನು ರಾತ್ರಿ ಸಮಯದಲ್ಲಿ ತಲುಪುವ ಮಾತು ಬಿಡಿ. ಈಗ ಈ ಊರಲ್ಲಿ ಕೆಲವು ಆಟೋರಿಕ್ಷಾಗಳು ಇವೆ. ಹತ್ತು ವರ್ಷಕ್ಕೆ ಮೊದಲು ಇಲ್ಲಿ ಆಟೋರಿಕ್ಷಾಗಳು ಕೂಡಾ ಇರಲಿಲ್ಲ. ಹಾಗಾಗಿ ರಾತ್ರಿ ಸಮಯದಲ್ಲಿ ಏನಾದರೂ ತುರ್ತು ಸಂದರ್ಭದಲ್ಲಿ ಹೆಚ್ಚಾಗಿ ನನಗೆ ಕರೆ ಬರುತ್ತಿತ್ತು. ಅನಾರೋಗ್ಯ, ಹೆರಿಗೆಯ ನೋವು ಕಾಣಿಸಿಕೊಂಡಾಗ ಹೆಚ್ಚಾಗಿ ಕರೆ ಬರುತ್ತಿತ್ತು. ಅದು ಎಷ್ಟು ತಡ ರಾತ್ರಿಯಾದರೂ ಚಳಿ, ಮಳೆ ಇದ್ದರೂ ನಾನು ಕರೆಗೆ ಸ್ಪಂದಿಸುತ್ತಿದೆ. ಎದ್ದು ಹೊರಡುತ್ತಿದ್ದೆ. ಲೆಕ್ಕ ಇಲ್ಲದಷ್ಟು ಅನಾರೋಗ್ಯ ಪೀಡಿತರನ್ನು, ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಿದ್ದೇನೆ.

Abdul Rahman Killed 320

ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ನನ್ನ ಪಿಕ್ಅಪ್‌ನಲ್ಲಿ ಎಂಟು ಮಂದಿ ಹೆರಿಗೆ ಮಾಡಿದ್ದಾರೆ. ಅವರಲ್ಲಿ ಐದು ಹಿಂದು ಮಹಿಳೆಯರು. ಮೂರು ಮುಸ್ಲಿಮ್ ಮಹಿಳೆಯರು. ಕೆಲವು ವರ್ಷಗಳ ಹಿಂದೆ ರಾತ್ರಿ ಸಮಯದಲ್ಲಿ ಕಾವೇಶ್ವರದ ಕೊಪ್ಪಲ ನಿವಾಸಿ ಗೋಪಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನನಗೆ ಕರೆ ಬಂತು. ನಾನು ಕೂಡಲೇ ಎದ್ದು ಪಿಕ್ಅಪ್‌ನಲ್ಲಿ ಹೊರಟೆ. ಅವರು ಮನೆ ತಲುಪಿದಾಗ ನಾಲ್ಕೈದು ಹೆಂಗಸರು, ಒಬ್ಬ ಗಂಡಸು ನಿಂತಿದ್ದರು. ಹೆರಿಗೆ ನೋವು ಕಾಣಿಸಿದ ಮಹಿಳೆಯನ್ನು ಪಿಕ್ಅಪ್‌ಗೆ ಹಾಕಿ ಬಿ.ಸಿ.ರೋಡ್ ಪರ್ಲಿಯಾ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದೆವು. ಅಲ್ಲಿ ಮಹಿಳೆಯನ್ನು ಪರೀಕ್ಷೆ ನಡೆಸಿದ ವೈದ್ಯರು, ಕೂಡಲೇ ಮಂಗಳೂರಿನ ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಇಲ್ಲದಿದ್ದರೆ ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಅಪಾಯ ಇದೆ ಎಂದು ಹೇಳಿದ್ದರು. ನಾನು ಇಪ್ಪತ್ತು ನಿಮಿಷದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದೆ. ಅಲ್ಲಿಗೆ ತಲುಪಿದ ಕೂಡಲೇ ಮಹಿಳೆಗೆ ಹೆರಿಗೆ ಆಗಿದೆ. ಮಹಿಳೆಗೆ ತರ್ತಾಗಿ ರಕ್ತದ ಅಗತ್ಯ ಇತ್ತು. ಆ ಮಹಿಳೆಯ ಸಂಬಂಧಿಕ ಮತ್ತು ನಾನು ನನ್ನ ಪಿಕ್ಅಪ್‌ನಲ್ಲಿ ಹೋಗಿ ರಕ್ತ ತಂದೆವು. ರಕ್ತನಿಧಿಯಲ್ಲಿ ರಕ್ತ ತೆಗೆದಾಗ ಅಲ್ಲಿ ಕೊಡಲು ಮಹಿಳೆಯ ಸಂಬಂಧಿಕರಲ್ಲಿ ಹಣ ಇರಲಿಲ್ಲ. ಹಣ ನೀಡದೆ ರಕ್ತ ಕೊಡಲು ಅವರು ನಿರಾಕರಿಸಿದರು. ಆಗ ನಾನು ನನ್ನ ಪಿಕ್ಅಪ್‌ ದಾಖಲೆ ಪತ್ರಗಳನ್ನು ಅಲ್ಲಿ ಅಡವಿಟ್ಟು ರಕ್ತ ತಂದು ಕೊಟ್ಟೆವು. ಆ ಬಳಿಕ ಆತ ಹಣ ಅಲ್ಲಿಗೆ ನೀಡಿ ದಾಖಲೆ ಪತ್ರ ಬಿಡಿಸಿ ತಂದು ನನಗೆ ಕೊಟ್ಟರು. ನಾನು ಬೇಡ ಎಂದರೂ ಪಿಕ್ಅಪ್ ಬಾಡಿಗೆ ಕೂಡಾ ನೀಡಿದ್ದಾನೆ. ಅಂದು ರಕ್ತ ನೀಡದಿದ್ದರೆ ಮಹಿಳೆಯ ಜೀವಕ್ಕೆ ಅಪಾಯ ಇತ್ತು. ಬದುಕು ಉಳಿಯುವುದೇ ಕಷ್ಟವಾಗಿತ್ತು” ಎಂದು ಹನೀಫ್ ಹೇಳುತ್ತಾರೆ.

“ತುರ್ತು ಸಂದರ್ಭದಲ್ಲಿ ಎದ್ದು ಹೋದಾಗ ಬಾಡಿಗೆ ಕೊಟ್ಟವರೂ ಇದ್ದಾರೆ, ಕೊಡದವರೂ ಇದ್ದಾರೆ. ರೋಗಿಯ ಕಡೆಯವರ ಆರ್ಥಿಕ ಸ್ಥಿತಿ ನೋಡಿ ಬಾಡಿಗೆ ಬೇಡ ಎಂದರೂ ಜೇಬಿಗೆ ಹಣ ಹಾಕಿದವರೂ ಇದ್ದಾರೆ. ಅದನ್ನೂ ವಾಪಸ್ ಕೊಟ್ಟಾಗ ವಾಹನದ ಸೀಟ್ ಮೇಲೆ ಇಟ್ಟು ಹೋದವರೂ ಇದ್ದಾರೆ. ನಮ್ಮೂರಿನಲ್ಲಿ ಪ್ರತೀ ವರ್ಷ ಶಾರದೋತ್ಸವ ನಡೆಯುತ್ತದೆ. ಅದು ನಮ್ಮೂರಿನ ಹಬ್ಬ. ಇಪ್ಪತ್ತು ವರ್ಷಗಳಷ್ಟು ಕಾಲ ನಾನೇ ಶಾರದ ವಿಸರ್ಜನೆಗೆ ಮೆರವಣಿಗೆಯಲ್ಲಿ ಶಾರದ ಮೂರ್ತಿಯನ್ನು ಸಾಗಿಸಿದ್ದು. ಮೆರವಣಿಗೆಯಲ್ಲಿ ನಿಲ್ಲಿಸುತ್ತಾ ನಿಧಾನವಾಗಿ ಸಾಗುವುದರಿಂದ ವಾಹನದ ಕ್ಲಚ್ ಹಾಳಾಗುತ್ತದೆ ಎಂದು ಯಾರೂ ಶಾರದ ಮೂರ್ತಿಯನ್ನು ಸಾಗಿಸಲು ಒಪ್ಪುತ್ತಿರಲಿಲ್ಲ. ಕ್ಲಚ್ ಹೋದರೆ ಹೋಗಲಿ. ಮತ್ತೆ ಸರಿ ಮಾಡಬಹುದು. ಕಾರ್ಯಕ್ರಮ ಚೆನ್ನಾಗಿ ನಡೆಯಬೇಕು ಎಂದು ನಾನು ಒಪ್ಪಿ ಹೋಗುತ್ತಿದ್ದೆ. ಶಾರದ ಮೂರ್ತಿ ಸಾಗಿಸಿದಕ್ಕೆ ಬಾಡಿಗೆ ತೆಗೆಯುತ್ತಿರಲಿಲ್ಲ. ಆದರೆ ಶಾರದೋತ್ಸವ ಸಮಿತಿಯವರು ನನಗೆ ಡೀಸಿಲ್ ಕೊಡುತ್ತಿದ್ದರು. ಬೇಡ ಎಂದರೂ ಡೀಸಿಲ್ ಕೊಡುತ್ತಿದ್ದರು” ಎಂದು ಊರಿನ ಸೌಹಾರ್ದದ ಪರಂಪರೆಯನ್ನು ಹನೀಫ್ ಹೇಳುತ್ತಾರೆ.

“ಯಾರು ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಕರೆದರೂ ನಾವು ಬಾಡಿಗೆಗೆ ಹೋಗುತ್ತಿದ್ದೆವು. ನನ್ನ ಮತ್ತು ನನ್ನ ತಮ್ಮನಿಂದ ಊರಿನವರಿಗೂ, ಪರ ಊರಿನವರಿಗೂ ಉಪಕಾರ ಆಗಿದೆಯೇ ಹೊರತು ಅಣುವಿನಷ್ಟು ಯಾರಿಗೂ ತೊಂದರೆ ಆಗಿರುವ ಉದಾಹರಣೆ ಇಲ್ಲ. ನಾಲ್ಕು ತಿಂಗಳ ಹಿಂದೆ ನಮ್ಮ ಊರಿನ ಪಕ್ಕದ ಊರಿನಲ್ಲಿ ಗೋ ಸಾಗಾಟದ ವಿಚಾರದಲ್ಲಿ ಗಲಾಟೆಯೊಂದು ನಡೆದಿತ್ತು. ಆ ಗಲಾಟೆಯಲ್ಲಿ ನನ್ನ ತಮ್ಮ ರಹ್ಮಾನ್ ಭಾಗವಹಿಸಿದ್ದ ಎಂದು ಆರೋಪಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಗಲಾಟೆಯ ವೀಡಿಯೋದಲ್ಲಿ ಯಾರನ್ನೋ ತೋರಿಸಿ ರಹ್ಮಾನ್ ಎಂದು ಹೇಳಲಾಗುತ್ತಿದೆ. ಅದು ಶುದ್ಧ ಸುಳ್ಳು. ರಹ್ಮಾನ್ ಕಣ್ಣಿನ ಭಾಗದಲ್ಲಿ ದೊಡ್ಡ ಕಪ್ಪು ಗುರುತು ಇದೆ. ಅದರಲ್ಲಿ ರಹ್ಮಾನ್ ನನ್ನು ಸುಲಭವಾಗಿ ಗುರುತಿಸಬಹುದು. ಆ ಗಲಾಟೆ ನಡೆದ ದಿನ ನಾನು, ರಹ್ಮಾನ್ ಮತ್ತು ನಮ್ಮ ಗೆಳೆಯರೊಬ್ಬರು ವಾಮಂಜೂರಿಗೆ ಮದುವೆಗೆ ಹೋಗಿದ್ದೆವು. ಆ ದಿನ ನಾವು ಊರಲ್ಲೇ ಇರಲಿಲ್ಲ. ಸಂಜೆ ಐದು ಗಂಟೆ ಬಳಿಕ ನಾವು ಊರಿಗೆ ಬಂದಾಗ ಗಲಾಟೆ ನಡೆದ ಮಾಹಿತಿ ನಮಗೆ ಸಿಕ್ಕಿದೆ. ಯಾವ ಸಂಘಟನೆಯಲ್ಲೂ ರಹ್ಮಾನ್ ಇರಲಿಲ್ಲ. ಮಸೀದಿಯ ಆಡಳಿತ ಕಮಿಟಿಯಲ್ಲಿ ಇದ್ದ. ಯಾವುದೇ ಸಂಘಟನೆಗೆ ಹೋಗಬೇಡ ಎಂದು ನಾನೇ ಅವನಿಗೆ ಹೇಳಿದ್ದೆ. ದುಡಿದು ತಿನ್ನುವ ನಮಗೆ ಸಂಘಟನೆ ಯಾಕೆ ಬೇಕು. ನಮಗೆ ಎಲ್ಲರೂ ಬೇಕು. ನಮ್ಮ ತಂದೆಯೇ ಯಾವುದಕ್ಕೂ ಹೋಗಿಲ್ಲ. ಮತ್ತೆ ನಾವು ಯಾಕೆ ಹೋಗಬೇಕು” ಎಂದು ಹನೀಫ್ ಪ್ರಶ್ನಿಸಿದ್ದಾರೆ.

“ತುರ್ತಾಗಿ ಮರಳು ಬೇಕು ಎಂದು ಹೇಳಿ ಕರೆದಿದ್ದಾರೆ. ಬೆಳಗ್ಗೆ ಎದ್ದು ಮುಖ ನೋಡುವವರಿಂದಲೇ ಈ ರೀತಿಯ ಕೆಲಸ ಆಗಿದೆ. ಬಾಡಿಗೆಗೆ ಕರೆದು ಈ ರೀತಿ ಮಾಡುತ್ತಾರೆ ಎಂದು ಯಾರೂ ನಂಬುವಂತದ್ದು ಅಲ್ಲ. ಹಿಂದೂ ಮುಸ್ಲಿಮ್ ಒಟ್ಟಿಗೆ ಇದ್ದೇವೆ. ಹಾಗಾಗಿ ಯಾವ ರಾತ್ರಿ ಕೂಡಾ ಬಾಡಿಗೆಗೆ ಹೋಗಲು ನಮಗೆ ಭಯ ಇರಲಿಲ್ಲ. ನಮ್ಮ ಊರಿನ ಧನಪೂಜೆ ಮಂದಿರದಲ್ಲಿ ನನಗೆ ಸನ್ಮಾನ ಕಾರ್ಯಕ್ರಮ ಇತ್ತು. ಆದರೆ ಆ ಕಾರ್ಯಕ್ರಮಕ್ಕೆ ನನಗೆ ಭಾಗವಹಿಸಲು ಆಗಿಲ್ಲ. ಆ ದಿನ ತುರ್ತು ಬಾಡಿಗೆ ಹಿನ್ನೆಲೆಯಲ್ಲಿ ಮೈಸೂರಿಗೆ ಹೋಗಿದ್ದೆ. ಹಾಗಾಗಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆ ಬೇಸರ ನನಗೆ ಇಂದಿಗೂ ಇದೆ”. ಇದು ರಹ್ಮಾನ್‌ ಸಹೋದರ ಹನೀಫ್‌ ಅವರ ಮಾತುಗಳು.

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X