ಪುತ್ತೂರಿನ ವಿದ್ಯಾರ್ಥಿನಿಗೆ ಮದುವೆಯಾಗುವ ಭರವಸೆ ನೀಡಿ, ಗರ್ಭಿಣಿಯಾದ ತರುವಾಯ ಮದುವೆಗೆ ನಿರಾಕರಿಸಿ, ವಂಚಿಸಿದ ಪ್ರಕರಣದಲ್ಲಿ ಪುತ್ತೂರು ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮಂಗಳೂರಿನ ಮಹಿಳಾ ಸಂಘಟನೆಗಳ ಪ್ರಮುಖರ ಜಂಟಿ ನಿಯೋಗ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿತು.
ಮದುವೆಯ ಭರವಸೆ ನೀಡಿ, ಕೊನೆಗಳಿಗೆಯಲ್ಲಿ ವಂಚಿಸಿ ತಲೆ ಮರೆಸಿಕೊಳ್ಳಲು ಆರೋಪಿ ಕೃಷ್ಣ ಜೆ ರಾವ್ ನಿಗೆ ಹಲವರು ಪ್ರಚೋದನೆ ನೀಡಿರುವ, ಬೆಂಬಲ ಒದಗಿಸಿರುವ, ಪರಿಹಾರ ಧನ ಪಡೆದು ಗರ್ಭಪಾತ ಮಾಡುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಪ್ರಭಾವಿಗಳು ಒತ್ತಡ ಹೇರಿರುವ ಕುರಿತೂ ಆರೋಪಗಳಿವೆ. ಈ ಕುರಿತು ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಿ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಮಹಿಳಾ ಮುಖಂಡರು ಮನವಿಯಲ್ಲಿ ಎಸ್ ಪಿ ಯವರನ್ನು ಆಗ್ರಹಿಸಿದ್ದಾರೆ.
ನಿಯೋಗದಲ್ಲಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಬಿ ಶೆಟ್ಟಿ, ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ನಗರಾಧ್ಯಕ್ಷರಾದ ಅಸುಂತಾ ಡಿ ಸೋಜ, ಕಾರ್ಯದರ್ಶಿ ಮಾಧುರಿ ಬೋಳಾರ, ಮುಖಂಡರುಗಳಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಸಂತಿ ಕುಪ್ಪೆಪದವು, ಮೂಡಬಿದ್ರೆ ಪುರಸಭೆಯ ಮಾಜಿ ಉಪಾಧ್ಯಕ್ಷರು, ಕಾರ್ಮಿಕ ಮುಖಂಡರಾದ ರಮಣಿ ಮೂಡುಬಿದ್ರೆ, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳಾದ ಲೀಡಿಯಾ, ಜೆಸಿಂತಾ, ಅರ್ಚನಾ ಆಚಾರ್ಯ, ಮೀನಾ ಟೆಲ್ಲಿಸ್ ಮತ್ತಿತರರು ಹಾಜರಿದ್ದರು.
