ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ನ್ಯಾಯಾಲಯವು ಪ್ರಕರಣದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಿದರೂ, ಅದಕ್ಕೆ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ. ಅರ್ಜಿದಾರರಾದ ಕೃಷ್ಣ ಜೆ. ರಾವ್ ಅವರು ಸ್ವತಃ ಅಥವಾ ತಮ್ಮ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಪ್ರತೀ ತಿಂಗಳು 75 ಸಾವಿರ ರೂ.ಗಳನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ.
ಇದಲ್ಲದೆ, ಮೊದಲ ಹಂತವಾಗಿ ಮುಂದಿನ ಒಂದು ವಾರದೊಳಗೆ 75 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ಪಾವತಿಸಬೇಕೆಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಬಳಿಕ ಪ್ರತಿ ತಿಂಗಳು ನಿಯಮಿತವಾಗಿ ಈ ಮೊತ್ತವನ್ನು ನೀಡಬೇಕು ಎಂದು ಆದೇಶಿಸಲಾಗಿದೆ.
ಈ ಪ್ರಕರಣವು ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ ನಂತರ ಮದುವೆಯಿಂದ ಹಿಂದೆ ಸರಿದ ಆರೋಪಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದಳು.
ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಿಂದಾಗಿ ಪ್ರಕರಣದ ಮುಂದಿನ ವಿಚಾರಣೆ ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿದ್ದರೂ, ಸಂತ್ರಸ್ತೆಯ ಮತ್ತು ಮಗುವಿನ ಜೀವನೋಪಾಯಕ್ಕೆ ಆರ್ಥಿಕ ನೆರವು ಒದಗಿಸುವುದು ಕಡ್ಡಾಯವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಮುಂದಿನ ವಿಚಾರಣೆ ಮುಂದಿನ ದಿನಾಂಕದಲ್ಲಿ ನಡೆಯಲಿದ್ದು, ಅಂತಿಮ ತೀರ್ಪಿನವರೆಗೆ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.
ಪುತ್ತೂರಿನ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುತ್ತಾ, ಬಿಜೆಪಿ ಮುಖಂಡನ ಮಗನೇ ಮಗುವಿನ ತಂದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಬಳಿಕವೂ ನ್ಯಾಯಕ್ಕೆ ತಲೆಬಾಗದೆ ಇರುವ ನಿಲುವು ಖಂಡನೀಯವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಮಗು ನಮ್ಮ ವಂಶದ ಕುಡಿ ಅಲ್ಲ” ಎಂಬ ಹೇಳಿಕೆ ನೀಡಿರುವುದು, ಜನ್ಮಕೊಟ್ಟ ತಾಯಿಯ ಗೌರವಕ್ಕೂ ಹಾಗೂ ಮಾನವೀಯ ಮೌಲ್ಯಗಳಿಗೂ ವಿರುದ್ಧವಾಗಿದೆ. ತಾಯಿ ತನ್ನ ಮಗುವನ್ನು ತ್ಯಜಿಸದೇ ಇಂದಿಗೂ ಸಾಕಿ ಬೆಳೆಸುತ್ತಿರುವುದು ಆಕೆಯ ಧೈರ್ಯ ಮತ್ತು ಹೊಣೆಗಾರಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಅನ್ಯಾಯವನ್ನು ಬೆಳಕಿಗೆ ತರುತ್ತಿದ್ದು, ಬಿಜೆಪಿ ಕಾರ್ಯಕರ್ತೆಯರು ಹಾಗೂ ಮಹಿಳೆಯರು ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ. ಪುತ್ತೂರಿನಲ್ಲಿ ನಡೆದ ಘಟನೆಗಳು ಬೇರೆಡೆಗಳಲ್ಲೂ ಸಂಭವಿಸಿರುವ ಉದಾಹರಣೆಗಳಿದ್ದು, ಮಹಿಳೆಯರ ಭದ್ರತೆ ಪ್ರಮುಖವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಹೈಕೋರ್ಟ್ ಪ್ರತಿ ತಿಂಗಳು ₹75,000 ಪರಿಹಾರ ನೀಡುವಂತೆ ಆದೇಶಿಸಿರುವುದು ಸ್ವಾಗತಾರ್ಹವಾದರೂ, ಕೇವಲ ಹಣದಿಂದ ನ್ಯಾಯ ಸಂಪೂರ್ಣವಾಗುವುದಿಲ್ಲ. ಮಗುವಿಗೆ ತಂದೆಯ ಪ್ರೀತಿ, ಜವಾಬ್ದಾರಿ ಹಾಗೂ ಕುಟುಂಬದ ಬೆಂಬಲ ಅತ್ಯಂತ ಮುಖ್ಯವಾಗಿದ್ದು, ಅದನ್ನು ಹಣದಿಂದ ತುಂಬಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಮಾಜದಲ್ಲಿ ಹಣವಿದ್ದವರಿಗೆ ಒಂದು ರೀತಿಯ ನ್ಯಾಯ, ಬಡವರಿಗೆ ಮತ್ತೊಂದು ರೀತಿಯ ನ್ಯಾಯ ಎಂಬ ಭಾವನೆ ಮೂಡಬಾರದು. ಹಣ ನೀಡುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮನೋಭಾವನೆ ಬೆಳೆದುಕೊಳ್ಳಬಾರದು. ಸಂಬಂಧಪಟ್ಟ ವ್ಯಕ್ತಿ ಜೀವನಪರ್ಯಂತ ಮಗುವಿಗೆ ತಂದೆಯಾಗಿಯೂ, ಮಹಿಳೆಗೆ ಪತಿಯಾಗಿಯೂ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯ ಎಂದು ಕೋಟ ನಾಗೇಂದ್ರ ಪುತ್ರನ್ ಅಭಿಪ್ರಾಯಪಟ್ಟಿದ್ದಾರೆ.







