ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಹೆಸರು ವ್ಯತ್ಯಾಸವಾಗಿದೆ ಎಂಬ ಕಾರಣಕ್ಕೆ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ನೋಟಿಸ್ ಜಾರಿಯಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಮತ್ತು ಕಂದಾಯ ಅಧಿಕಾರಿಗಳು ನೇರವಾಗಿ ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ, ಕ್ಷಮೆ ಕೋರಿದ್ದಾರೆ.
ಗ್ರಾಮ ಪಂಚಾಯಿತಿಗೆ ಅಲೆದಾಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು, ಸ್ಥಳದಲ್ಲೇ ಅಗತ್ಯ ದಾಖಲೆಗಳನ್ನು ಪಡೆದು ಮತದಾರರ ಪಟ್ಟಿಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಕಿತ್ತಳೆ ಮಾರಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ, ತಮ್ಮ ಊರಿನ ಮಕ್ಕಳಿಗೆ ಶಾಲೆ ಕಟ್ಟಿಸಿ ‘ಅಕ್ಷರ ಸಂತ’ ಎಂದೇ ಖ್ಯಾತರಾಗಿದ್ದಾರೆ. 2020ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿದ್ದಾರೆ.
2002ರ ಹಳೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ನಂತರ ಪ್ರಶಸ್ತಿಗಳು ಸಿಕ್ಕಿದ ಬಳಿಕ ಹಾಗೂ ಅಧಿಕೃತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನೋಂದಾಯಿಸಲಾಗಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪದ್ಮಶ್ರೀ ಪುರಸ್ಕಾರ ಪತ್ರ, ರಾಜ್ಯೋತ್ಸವ ಪ್ರಶಸ್ತಿ ಪತ್ರಗಳು ಸೇರಿದಂತೆ ಎಲ್ಲಾ ದಾಖಲೆಗಳಲ್ಲೂ ‘ಹರೇಕಳ ಹಾಜಬ್ಬ’ ಎಂದೇ ಇದೆ. ಈ ವ್ಯತ್ಯಾಸವನ್ನು ಗುರುತಿಸಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸೆಲ್ಫ್ ನೇಮ್ ಮಿಸ್‌ಮ್ಯಾಚ್’ ವರ್ಗದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಬಂದು ನೋಟಿಸ್ ತಲುಪಿಸಿದ್ದು, ಸೆಪ್ಟೆಂಬರ್ 11ರ ಶುಕ್ರವಾರದಂದು ಎಲ್ಲಾ ಅಸಲಿ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಬರುವಂತೆ ಸೂಚಿಸಲಾಗಿತ್ತು.
ವಿಚಾರ ಸಾರ್ವಜನಿಕ ಚರ್ಚೆಗೆ ಬಂದ ಕೂಡಲೇ ತಹಶೀಲ್ದಾರ್ ಮತ್ತು ಗ್ರಾಮ ಸಹಾಯಕರು ಸೇರಿದಂತೆ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿನ ಹರೇಕಳ ಗ್ರಾಮದಲ್ಲಿರುವ ಹಾಜಬ್ಬ ಅವರ ಮನೆಗೆ ಧಾವಿಸಿದರು. ಸ್ಥಳದಲ್ಲೇ ಪದ್ಮಶ್ರೀ ಪುರಸ್ಕಾರ ಪತ್ರ, ರಾಜ್ಯೋತ್ಸವ ಪ್ರಶಸ್ತಿ ಪತ್ರ, ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ, ನೋಟಿಸ್ ಹಿಂಪಡೆದುಕೊಂಡು ಪಟ್ಟಿಯಲ್ಲಿ ಹೆಸರು ಉಳಿಸುವುದಾಗಿ ಭರವಸೆ ನೀಡಿದ್ದಾರೆ.
SIR ಪ್ರಕ್ರಿಯೆಯಲ್ಲಿ ಮತದಾರರಿಗೆ ಸಂಬಂಧಿಸಿದ ವಿವರಗಳಲ್ಲಿ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳು ಎದುರಾಗುವ ಕಾರಣಕ್ಕಾಗಿ ಲಕ್ಷಾಂತರ ಮತದಾರರಿಗೆ ಚುನಾವಣಾ ಆಯೋಗವು ನೋಟಿಸ್ ಕೊಟ್ಟು ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿರುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಮತದಾರರ ದಾಖಲೆಗಳಲ್ಲಿ ಅಕ್ಷರದೋಷ, ವಿಳಾಸ ವ್ಯತ್ಯಾಸ ಅಥವಾ ಡೇಟಾ ಹೊಂದಾಣಿಕೆ ಸಮಸ್ಯೆಗಳಂತಹ ಸಣ್ಣ ತಾಂತ್ರಿಕ ಕಾರಣಗಳಿಂದಲೇ ಲಕ್ಷಾಂತರ ಜನರಿಗೆ ಆಯೋಗ ನೋಟಿಸ್ ನೀಡಿದೆ. ದಾಖಲೆಯಲ್ಲಿನ ದೋಷಗಳಿಗೆ ವ್ಯವಸ್ಥೆಯದ್ದೇ ತಪ್ಪಿದ್ದರೂ, ಅದರ ಹೊರೆಯನ್ನು ನಾಗರಿಕರ ಮೇಲೆ ಹೇರಲಾಗುತ್ತಿದೆ. ಸಾಮಾನ್ಯ ನಾಗರಿಕರು ದಾಖಲೆಗಳನ್ನು ಹೊತ್ತು ಕಚೇರಿಗಳಿಗೆ ಅಲೆಯುವಂತೆ ಮಾಡಲಾಗುತ್ತಿದೆ. ವಯೋವೃದ್ಧರು, ಕೂಲಿ ಕಾರ್ಮಿಕರು, ಗ್ರಾಮೀಣರು ಹಾಗೂ ಅಗತ್ಯವಾದ ಎಲ್ಲ ರೀತಿಯ ದಾಖಲೆಗಳನ್ನು ಹೊಂದಿಲ್ಲದೇ ಇರುವವರು ಎಸ್‌ಐಆರ್ ಪ್ರಕ್ರಿಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತೀ ಸಣ್ಣ ವ್ಯತ್ಯಾಸಗಳ ಕಾರಣಕ್ಕಾಗಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.






