ಜಾರಿ ನಿರ್ದೇಶನಾಲಯದ (ಇ.ಡಿ) ದಾಖಲೆಗಳನ್ನು ಆಧರಿಸಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಸದನದ ಕಡತದಿಂದ (ರೆಕಾರ್ಡ್ಸ್) ತೆಗೆದುಹಾಕಬೇಕೆಂದು ಆಗ್ರಹಿಸಿ ಡಿಎಂಕೆ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ತೀವ್ರ ಗದ್ದಲ ಸೃಷ್ಟಿಸಿದರು. ಪ್ರತಿಭಟನಾನಿರತ ಡಿಎಂಕೆ ಶಾಸಕರು ಘೋಷಣೆಗಳನ್ನು ಕೂಗಿದ ಬೆನ್ನಲ್ಲೇ, ವಿರೋಧ ಪಕ್ಷದ ಹಲವು ಶಾಸಕರನ್ನು ಸದನದಿಂದ ಹೊರಹಾಕಲಾಯಿತು.
ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ಡಿಎಂಕೆ ಮುಖ್ಯ ಸಚೇತಕ ಇ.ವಿ. ವೇಲು, ಮುಖ್ಯಮಂತ್ರಿ ವಿಜಯ್ ಅವರು ಸೋಮವಾರ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. “ಇ.ಡಿ. ದಾಖಲೆ ಉಲ್ಲೇಖಿಸಿ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳು ವಿಧಾನಸಭೆಯ ನಿಯಮಗಳು ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿವೆ. ಆದುದರಿಂದ ಆ ಮಾತುಗಳನ್ನು ಕಡತದಿಂದ ಅಳಿಸಿಹಾಕಬೇಕು” ಎಂದು ಅವರು ಒತ್ತಾಯಿಸಿದರು.
ಸರ್ಕಾರಿಯಾ ಆಯೋಗದ ಕುರಿತ ಮುಖ್ಯಮಂತ್ರಿಯವರ ಉಲ್ಲೇಖಕ್ಕೂ ಆಕ್ಷೇಪ ವ್ಯಕ್ತಪಡಿಸಿದ ವೇಲು, ‘ಈ ಆಯೋಗವು ಯಾವುದೇ ಅಪರಾಧವನ್ನು ಸಾಬೀತುಪಡಿಸಿಲ್ಲ’ ಎಂದು ಸಮರ್ಥಿಸಿಕೊಂಡರು. “ಮುಖ್ಯಮಂತ್ರಿಯವರು ತಮ್ಮ ಉತ್ತರದ ವೇಳೆ ಪ್ರಕರಣಗಳ ವಿವರಗಳನ್ನು ಓದಿ ಹೇಳುವುದು ಸದನದ ಸಂಪ್ರದಾಯದ ಉಲ್ಲಂಘನೆಯಾಗಿದೆ. ಅದರಲ್ಲೂ ತನಿಖೆಯ ಹಂತದಲ್ಲಿರುವ ವಿಜಿಲೆನ್ಸ್ (ವಿಚಕ್ಷಣಾ ದಳ) ಪ್ರಕರಣಗಳ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸುವಂತಿಲ್ಲ. ನಿನ್ನೆ ಮುಖ್ಯಮಂತ್ರಿಯವರು ‘ಮಿಸಾ’ (MISA) ಮತ್ತು ಸರ್ಕಾರಿಯಾ ಆಯೋಗದ ಬಗ್ಗೆ ಮಾತನಾಡಿದ್ದಾರೆ. ಇದು ತಪ್ಪು” ಎಂದು ವೇಲು ವಾದಿಸಿದರು.
ಡಿಎಂಕೆ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಆಧವ್ ಅರ್ಜುನ, ಡಿಎಂಕೆ ಸದಸ್ಯರು ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. “ಡಿಎಂಕೆಗೆ ನನ್ನನ್ನು ಕಂಡರೆ ಭಯ. ನಾನು ಸದನದಲ್ಲಿ ಮಾತನಾಡಲು ಎದ್ದು ನಿಂತಾಗಲೆಲ್ಲಾ ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಆಡಳಿತ ಪಕ್ಷವು ತಮ್ಮ ಮಾತನ್ನು ಮಾತ್ರ ಕೇಳಿಸಿಕೊಳ್ಳಬೇಕು ಎಂದು ನಿರೀಕ್ಷಿಸುವ ಡಿಎಂಕೆ, ಎದುರಾಳಿಗಳ ಮಾತನ್ನು ಕೇಳಿಸಿಕೊಳ್ಳಲು ಮಾತ್ರ ಸಿದ್ಧವಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು.
ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಸರ್ಕಾರಿಯಾ ಆಯೋಗದ ವರದಿ ಮತ್ತು ಅಧಿಕೃತ ಇ.ಡಿ ದಾಖಲೆಗಳನ್ನು ಆಧರಿಸಿಯೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದ ಅವರು, ಹಿಂದಿನ ಡಿಎಂಕೆ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಪುನರುಚ್ಚರಿಸಿದರು.
ಡಿಎಂಕೆ ಶಾಸಕರ ಬೇಡಿಕೆಯನ್ನು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ಸಾರಾಸಗಟಾಗಿ ತಿರಸ್ಕರಿಸಿದರು. “ನಿನ್ನೆ ಸಿಎಂ ವಿಜಯ್ ಅವರ ಭಾಷಣವನ್ನು ಒಂದು ನಿಮಿಷವೂ ಕೇಳಿಸಿಕೊಳ್ಳಲು ಡಿಎಂಕೆ ಸಿದ್ಧವಿರಲಿಲ್ಲ. ಈಗಾಗಲೇ ಸದನದಲ್ಲಿ ಪ್ರಸ್ತಾಪಿಸಲಾಗಿದ್ದ ಮಿಸಾ ಕಾಯ್ದೆಯ ವಿಚಾರವನ್ನೇ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ. ಹೀಗಾಗಿ ಸಿಎಂ ಮಾತುಗಳನ್ನು ಕಡತದಿಂದ ಅಳಿಸುವ ಅಗತ್ಯವಿಲ್ಲ” ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.
ಪಕ್ಷದ ನಿಧಿಯ ಹೆಸರಿನಲ್ಲಿ ಹಣ ವಸೂಲಿ ಮಾಡಿರುವ ಸಂಬಂಧ ಜಾರಿ ನಿರ್ದೇಶನಾಲಯವು ಡಿಎಂಕೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ ಎಂದು ಮುಖ್ಯಮಂತ್ರಿ ವಿಜಯ್ ಸೋಮವಾರ ಸದನದಲ್ಲಿ ಆರೋಪಿಸಿದ್ದರು. ಪಕ್ಷದ ನಿಧಿಗೆ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಾಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಸಚಿವ ಸೆಂಥಿಲ್ ಬಾಲಾಜಿ ಅವರ ಹೆಸರುಗಳನ್ನು ಇ.ಡಿ ಉಲ್ಲೇಖಿಸಿದೆ ಎಂದು ಅವರು ಪ್ರತಿಪಾದಿಸಿದ್ದರು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಸರ್ಕಾರಿಯಾ ಆಯೋಗದ ವರದಿ ದೂಷಿಸಿದೆ ಎಂಬುದಾಗಿಯೂ ವಿಜಯ್ ಆರೋಪಿಸಿದ್ದರು.





