ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 26ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)’ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಕೆ.ಎಂ. ಅಶ್ರಫ್ ಹೇಳಿದರು.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಕುರಿತು ಮಾತನಾಡಿದ ಅವರು, ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಸಂದೇಶವನ್ನು ಸಾರಿದ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಮತ್ತು ಸಂದೇಶವನ್ನು ಜನರಿಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರವಾದಿ ಮುಹಮ್ಮದ್(ಸ) ಅವರ ಸಂದೇಶವು ಮಾನವೀಯತೆಯ ಆಧಾರದಲ್ಲಿ ಸಮಾಜದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆಗೆ ಪ್ರೇರಣೆ ನೀಡಿದೆ. ಸುಭಿಕ್ಷೆ ಹಾಗೂ ನಿರ್ಭಯತೆಯ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ರಚಿಸಿರುವ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ರಚಿಸಿರುವ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿದೆ.
ಇದರ ಜೊತೆಗೆ ರಾಜ್ಯದ ವಿವಿಧೆಡೆ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಸ್ಥಳೀಯ ಮಟ್ಟದಲ್ಲಿ ನಗರದ ವಿವಿಧ ಮೊಹಲ್ಲಾಗಳಲ್ಲಿ ಸೀರತ್ ಸಭೆಗಳನ್ನು ಆಯೋಜಿಸಲಾಗಿದ್ದು, ಮಹಿಳಾ ವಿಭಾಗದ ವತಿಯಿಂದ ಮಹಿಳೆಯರ ಸ್ನೇಹ ಸಮ್ಮಿಲನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.15ರಂದು ಉಚಿತ ವೈದ್ಯಕೀಯ ಶಿಬಿರ
ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 15ರಂದು ಉಚಿತ ಯುನಾನಿ ವೈದ್ಯಕೀಯ ಹಾಗೂ ಹಿಜಾಮಾ ಚಿಕಿತ್ಸಾ ಶಿಬಿರವನ್ನು ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ಆಯುಷ್ ಇಲಾಖೆ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಹಾಗೂ ಸಮಾಜ ಸೇವಾ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗುವುದು. ಸೆಪ್ಟೆಂಬರ್ 20ರಂದು ಬೆಂಗ್ರೆ ಕಸಬಾದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಸೆ.11ರಂದು ಸಾರ್ವಜನಿಕ ವಿಚಾರಗೋಷ್ಠಿ
ಅಭಿಯಾನದ ಪ್ರಮುಖ ಕಾರ್ಯಕ್ರಮವಾಗಿ ಸೆಪ್ಟೆಂಬರ್ 11ರಂದು ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರು ಪುರಭವನದಲ್ಲಿ ‘ಪ್ರವಾದಿ ಮುಹಮ್ಮದ್(ಸ): ವರ್ತಮಾನದ ಭಾರತದ ಪೂರ್ವಗ್ರಹ ಮತ್ತು ವಾಸ್ತವ’ ಎಂಬ ಕೇಂದ್ರ ವಿಷಯದ ಕುರಿತು ಸಾರ್ವಜನಿಕ ವಿಚಾರಗೋಷ್ಠಿ ನಡೆಯಲಿದೆ.
ಈದಿನ.ಕಾಮ್ ಮುಖ್ಯಸ್ಥ ಡಾ. ವಾಸು ಎಚ್.ವಿ., ರೋಝರಿಯೋ ಚರ್ಚ್ ಪ್ರಧಾನ ಗುರುಗಳಾದ ಫಾ. ವಲೇರಿಯನ್ ಡಿಸೋಜ, ಸನ್ಮಾರ್ಗ ಸಮೂಹ ಮಾಧ್ಯಮದ ಸಂಪಾದಕ ಎ.ಕೆ. ಕುಕ್ಕಿಲ್ ಹಾಗೂ ಅನುಪಮ ಮಹಿಳಾ ಮಾಸಿಕ ಸಂಪಾದಕಿ ಸಬೀಹ ಫಾತಿಮಾ ಭಾಗವಹಿಸಲಿದ್ದಾರೆ. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಉತ್ತರ ಅಧ್ಯಕ್ಷ ಸಿ.ಎ. ಮುಹಮ್ಮದ್ ಇಸ್ಹಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನ ಸಂಚಾಲಕ ಗಫೂರ್ ಕುಳಾಯಿ, ಅಭಿಯಾನ ಉಪಸಂಚಾಲಕ ಮಕೂಬುಲ್ ಕದ್ರೋಳಿ, ಮಹಿಳಾ ಸಂಚಾಲಕಿ ಸುಮಯ್ಯ ಹಮೀದುಲ್ಲಾ, ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ವಲಯದ ಮಹಿಳಾ ಸಂಚಾಲಕಿ ರಿಝ್ವನತ್ ಇಸ್ಮಾಯಿಲ್, ಉತ್ತರ ವಲಯದ ಮಹಿಳಾ ಸಂಚಾಲಕಿ ಹಾಗೂ ಅಭಿಯಾನ ಮಹಿಳಾ ಸಂಚಾಲಕಿ ಶಹೀದಾ ಉಮರ್ ಉಪಸ್ಥಿತರಿದ್ದರು.






