ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಜೂನ್ 2 ಮತ್ತು 3ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಗ್ಲಾಸ್‌ಗಳಿಗೆ ಟಿಂಟ್ ಸ್ಟಿಕ್ಕರ್ ಅಳವಡಿಸಿದ್ದ 223 ಕಾರುಗಳ ಮೇಲೆ ಪ್ರಕರಣ ದಾಖಲಿಸಿ 1,11,500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.
ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ಸಂಚಾರಿ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕಾರಿನ ಗ್ಲಾಸ್ ಗಳಿಗೆ ಟಿಂಟ್ ಸ್ಟಿಕ್ಕರ್ ಅಳವಡಿಸಿದ ಮಾಲಕರು ಮತ್ತು ಚಾಲಕರಿಗೆ ದಂಡ ವಿಧಿಸಿದ್ದಾರೆ. ಒಟ್ಟು 223 ಕಾರುಗಳ ಚಾಲಕ ಮಾಲಕರಿಗೆ 1,11,500 ರೂಪಾಯಿ ದಂಡ ವಿಧಿಸಲಾಗಿದೆ. ಗ್ಲಾಸ್‌ಗೆ ಟಿಂಟ್ ಅಳವಡಿಸಿದ ಕಾರಿನ ಚಾಲಕರಿಂದಲೇ ಟಿಂಟ್ ತೆಗೆಸಿ ಇನ್ನು ಮುಂದೆ ಕಾರಿಗೆ ಟಿಂಟ್ ಅಳವಡಿಸದಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರು ಶೋ ರೂಂ, ಕಾರಿನ ಬಿಡಿಭಾಗಗಳ ಅಂಗಡಿಗಳು, ಗ್ಯಾರೇಜ್, ಸ್ಟಿಕರ್ ಅಂಗಡಿಗಳ ಮಾಲಕರ ಸಭೆಯನ್ನು ಜೂನ್ 3ರಂದು ಪೊಲೀಸ್ ಆಯುಕ್ತರ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಕರೆಯಲಾಗಿದೆ. ಅಪರಾಧ ಕೃತ್ಯ ನಡೆಸಲು ಆರೋಪಿಗಳು ಕಾರಿಗೆ ಟಿಂಟ್ ಅಳವಡಿಸುವ ಸಾಧ್ಯತೆ ಇರುವುದರಿಂದ ತಮ್ಮ ಬಳಿಗೆ ಬರುವ ಯಾವುದೇ ವಾಹನಗಳಿಗೆ ಟಿಂಟ್ ಅಳವಡಿಸದಂತೆ ಸಭೆಯಲ್ಲಿ ಅಂಗಡಿಗಳ ಮಾಲಕರಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.