ನಮಗೆ ಬೇಕಿರುವುದು ʼಕುರಿʼ ಅಲ್ಲ, ಕ್ರಿಮಿನಲ್‌ಗಳಿಗೆ ಸರಿಯಾದ ಶಿಕ್ಷೆ; ವಾಟ್ಸ್ಯಾಪ್‌ ಗ್ರೂಪಿನಲ್ಲಿ ಬ್ಯಾರಿಗಳ ಭಾರೀ ಚರ್ಚೆ

Date:

Advertisements

ಉಳ್ಳಾಲ ದರ್ಗಾದಲ್ಲಿ ಉರೂಸ್ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, “ನಾನು ದರ್ಗಾಕ್ಕೆ 50 ಕುರಿಗಳನ್ನು ಹರಕೆ ನೀಡುತ್ತೇನೆ” ಎಂದು ಭಾಷಣದಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬ್ಯಾರಿ ಸಮುದಾಯದ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚರ್ಚೆ ತಾರಕ್ಕೇರುತ್ತಿದ್ದಂತೆ ಪರ ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.

“ನಮಗೆ ಬೇಕಿರುವುದು ಕುರಿ ಅಲ್ಲ. ಕುರಿ ನೀಡುವ ನಾಯಕರೂ ಅಲ್ಲ. ನಾವು ನಿಮ್ಮನ್ನು ಕುರಿಗಾಗಿ ಆಯ್ಕೆ ಮಾಡಿದ್ದೂ ಅಲ್ಲ. ನಮಗೆ ಬೇಕಿರುವುದು ಕ್ರಿಮಿನಲ್ ಗಳಿಗೆ ಸರಿಯಾದ ಶಿಕ್ಷೆ. ಗಲಭೆ, ಕ್ಷೋಭೆ, ಕೊಲೆ, ಪ್ರತೀಕಾರ ಇಲ್ಲದ ನೆಮ್ಮದಿಯ ಸಮಾಜ. ಶಾಂತಿ ಸಮಾಧಾನದ ಜೀವನ. ಹಿಂದೂ ಕ್ರೈಸ್ತ ಮುಸಲ್ಮಾನ ಸೌಹಾರ್ದದಿಂದ ಬದುಕುವ ಸರ್ವ ಜನಾಂಗದ ಶಾಂತಿಯ ದಕ್ಷಿಣ ಕನ್ನಡ. ಈ ಬಗ್ಗೆ ಕ್ರಮಕೈಗೊಳ್ಳಿ. ಆ ಬಗ್ಗೆ ಮಾತನಾಡಿ. ಮಾತನಾಡಿದಂತೆ ನಡೆದುಕೊಳ್ಳಿ….”

ಇದು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ (ಮುಸ್ಲಿಮರು) ಜನಾಂಗದವರ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ನಡೆದ ಭಾರೀ ಚರ್ಚೆಯ ಕೆಲವು ತುಣುಕುಗಳು. ಬ್ಯಾರಿ ಸಮುದಾಯದ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕರು, ಮುಂದಾಳುಗಳು, ಸಾಮಾಜಿಕ ಜಾಲ ತಾಣಗಳ ಸಕ್ರಿಯ ಬಳಕೆದಾರರು ಇರುವ ಹತ್ತು ಹಲವು ವಾಟ್ಸ್ಯಾಪ್ ಗ್ರೂಪ್ ಗಳಲ್ಲಿ ಈ ಚರ್ಚೆ ತಾರಕ್ಕೇರಿತ್ತು. ಮೇ 10ರ ಶನಿವಾರ ರಾತ್ರಿ ಆರಂಭವಾದ ಚರ್ಚೆ ಮೇ 11ರ ಭಾನುವಾರ ರಾತ್ರಿವರೆಗೂ ಮುಂದುವರಿದಿತ್ತು. ಕೆಲವರಂತೂ ಒಂದೇ ಒಂದು ನಿಮಿಷವೂ ಬಿಡದೆ ಒಂದಿಡೀ ದಿನ ಚರ್ಚೆಯಲ್ಲಿ ಪಾಲ್ಗೊಂಡದ್ದು ಕಂಡು ಬಂದಿದೆ.

Advertisements

ಅಷ್ಟಕ್ಕೂ ಈ ಚರ್ಚೆ ಯಾಕೆ ನಡೆಯಿತು ಅಂದರೆ, ಮುಸ್ಲಿಮರ ಪ್ರಸಿದ್ಧ ಶ್ರದ್ಧಾ ಕೇಂದ್ರವಾದ ಉಳ್ಳಾಲ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, “ನಾನು ದರ್ಗಾಕ್ಕೆ 50 ಕುರಿಗಳನ್ನು ಹರಕೆ ನೀಡುತ್ತೇನೆ” ಎಂದು ತನ್ನ ಭಾಷಣದಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬ್ಯಾರಿ ಸಮುದಾಯದ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚರ್ಚೆ ತಾರಕ್ಕೇರುತ್ತಿದ್ದಂತೆ ಪರ ವಿರೋಧ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿದೆ.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಯತ್ನ, ಪ್ರತಿಕಾರದ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಬೆದರಿಕೆ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಒಂದು ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ದ್ವೇಷ ಭಾಷಣ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ದ್ವೇಷದ ವಾತಾವರಣ ಹೆಚ್ಚುತ್ತಿದೆ. ಹಿಂದು ಮುಸ್ಲಿಮರ ನಡುವಿನ ಸೌಹಾರ್ದ ಕೆಡುತ್ತಿದೆ. ಈ ಬಗ್ಗೆ ಏನಾದರೂ ಕ್ರಮಕೈಗೊಳ್ಳುವ ಮತ್ತು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ, ಅವರು ಕೇವಲ ಕುರಿ ಹರಕೆ ನೀಡುವ ಘೋಷಣೆ ಮಾಡಿ ಹೋಗಿದ್ದಾರೆ ಎಂಬುದು ಬ್ಯಾರಿ ಸಮುದಾಯದ ಅಸಮಾಧಾನ.

ಮಂಗಳೂರು ಹೊರ ವಲಯದ ಕುಡುಪುವಿನ ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಲ್ಲಿ ಗ್ರಾಮದ ನಿವಾಸಿ ಅಶ್ರಫ್ ಎಂಬ ಯುವಕನನ್ನು ಗುಂಪೊಂದು ಹತ್ಯೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ 21 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ರವೀಂದ್ರ ಎಂಬಾತನ ಇನ್ನೂ ಬಂಧನ ಆಗಿಲ್ಲ. ಗುಂಪು ಹತ್ಯೆ ಗಂಭೀರವಾದ ಪ್ರಕರಣ ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಹಾಗಾಗಿ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ, ಎಲ್ಲಾ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆ ಹಾಕಬೇಕೆಂದು ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮ ಮನವಿಗೆ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಬ್ಯಾರಿ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

fir against sharan pumpwell

ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ನಡೆದ ಮರುದಿನ ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರು. ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಜರಂಗದಳ ಕಾರ್ಯಕರ್ತರು ಬಲವಂತದ ಬಂದ್ ನಡೆಸಿದ್ದರಿಂದ ಹಲವು ಅಹಿತಕರ ಘಟನೆಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೂ ಆತನ ಬಂಧನ ನಡೆಯುತ್ತಿಲ್ಲ. ಶರಣ್ ಪಂಪ್ವೆಲ್ ಮತ್ತು ಗುಂಪು ಹತ್ಯೆಯ ಪ್ರಮುಖ ಆರೋಪಿ ರವೀಂದ್ರನ ಬಂಧನಕ್ಕೆ ಇರುವ ತಡೆಯಾದರೂ ಏನು? ತಡೆ ಮಾಡುತ್ತಿರುವವರು ಯಾರು? ಎಂದು ಬ್ಯಾರಿ ಸಮುದಾಯ ಸಾಮಾಜಿಕ ಜಾಲ ತಾಣದಲ್ಲಿ ನಡೆದ ಚರ್ಚೆಯುದ್ದಕ್ಕೂ ಪ್ರಶ್ನಿಸಿದೆ.

ಹಣ, ರಾಜಕೀಯ, ಸಂಘಟನೆಗಳ ಪ್ರಭಾವ ಇರುವ ವ್ಯಕ್ತಿಗಳು ಎಷ್ಟೇ ದೊಡ್ಡ ಅಪರಾಧ ಮಾಡಿದರೂ ಅವರನ್ನು ಬಂಧಿಸುವ, ಕಾನೂನು ಕ್ರಮ ಜರಗಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಅವರು ಕಾನೂನಿನ ಕುಣಿಕೆಯಿಂದ ಪಾರಾಗುವುದಲ್ಲದೆ, ನಾವೇನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಅವರಲ್ಲಿ ಮೂಡುತ್ತಿದೆ. ಇದು ಅವರಲ್ಲಿಯೂ ಅವರನ್ನು ಅನುಸರಿಸುವ ಕಾರ್ಯಕರ್ತರಲ್ಲಿಯೂ ಇನ್ನಷ್ಟು ಸಮಾಜ ಘಾತುಕ ಕೃತ್ಯ ನಡೆಸಲು ಪ್ರೇರಣೆಯಾಗುತ್ತಿವೆ. ನಾವು ನಂಬಿರುವ, ಮತ ನೀಡಿರುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗಲೇ ಪರಿಸ್ಥಿತಿ ಈ ರೀತಿಯಾದರೆ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಪ್ರಿಯರ ಹಿತ ಕಾಪಾಡುವವರು ಯಾರು ಎಂಬ ಚರ್ಚೆ ನಡೆದಿವೆ.

ಬೆರಳೆಣಿಕೆಯ ಜನರು ಮಾಡುವ ಈ ಕೃತ್ಯದಿಂದ ಇಡೀ ದಕ್ಷಿಣ ಜಿಲ್ಲೆಯ ಜನತೆ ಭೀತಿಯಿಂದ ಬದುಕುವಂತಾಗಿದೆ. ಮನೆಯಿಂದ ಹೊರ ಹೋದ ನಮ್ಮ ಮಕ್ಕಳು ತಿರುಗಿ ಬರುತ್ತಾರಾ ಎಂಬ ಭಯ ಹೆತ್ತವರಲ್ಲಿ ಅಡಗಿದೆ. ಕತ್ತಲು ಆವರಿಸುತ್ತಿದ್ದಂತೆ ಮಂಗಳೂರು ನಗರ ನಿಶಬ್ದವಾಗುತ್ತಿದೆ. ಪ್ರವಾಸಿ ತಾಣಗಳು ಬಣಗುಡುತ್ತಿವೆ. ಹಲವು ವೈದ್ಯಕೀಯ ಕಾಲೇಜು, ಉತ್ತಮ ಜೀವನ ಶೈಲಿ, ಸದೃಢ ಆರ್ಥಿಕ ವಲಯವನ್ನು ಹೊಂದಿರುವ ಬುದ್ದಿವಂತ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡದ 90ಶೇಕಡ ಜನರು ಶಾಂತಿಯನ್ನು ಬಯಸುತ್ತಿದ್ದಾರೆ. ಆದರೆ, ಶೇ 10ಕ್ಕೂ ಕಡಿಮೆ ಸಂಖ್ಯೆಯ ಜನರು ಜಿಲ್ಲೆಯ ಶಾಂತಿಗೆ ಭಗ್ನ ತರುತ್ತಿದ್ದಾರೆ. ಅವರನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ. ಸರಕಾರ ನಡೆಸುವವರು ಇವೆಲ್ಲವನ್ನು ಬಿಟ್ಟು ಕುರಿ ಘೋಷಣೆ ಮಾಡಿ ಯಾರನ್ನು ಕುರಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

parameshwarB vb 88

ಅಶ್ರಫ್ ಗುಂಪು ಹತ್ಯೆಯ ಸಂದರ್ಭ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಕೆಂಡಮಂಡಲರಾದ ಬ್ಯಾರಿ ನಾಯಕರು, ಈ ಇಬ್ಬರು ಸಚಿವರು ಮಂಗಳೂರಿಗೆ ಭೇಟಿ ನೀಡಿದಾಗ ಅವರು ಕುಳಿತಿದ್ದ ಮುಂದಿನ ಟೇಬಲ್‌ಗೆ ಗುದ್ದಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿಯಾಗಿತ್ತು. ಈ ವರದಿಯನ್ನು ಕೂಡ ಚರ್ಚಾ ವಿಷಯವನ್ನಾಗಿಸಿದ ಸಾಮಾಜಿಕ ಬಳಕೆದಾರರು, ಟೇಬಲ್‌ಗೆ ಗುದ್ದಿ ಬ್ಯಾರಿ ನಾಯಕರ ಕೈ ನೋವು ಆಗಿದೆಯೇ ಹೊರತು ಅವರ ಬೇಡಿಕೆ ಇನ್ನೂ ಈಡೇರಿಲ್ಲ. ಅಶ್ರಫ್ ಗುಂಪು ಹತ್ಯೆಯ ಪ್ರಮುಖ ಆರೋಪಿ ಇನ್ನೂ ಬಂಧನ ಆಗಿಲ್ಲ. ಅವರ ವಿರುದ್ಧ ಯಾವುದೇ ಕಠಿಣ ಕಾನೂನು ಹೇರಿಲ್ಲ. ರೌಡಿ ಶೀಟರ್ ಹತ್ಯೆ ಬಳಿಕ ಬಂದ್‌ಗೆ ಕರೆ ನೀಡಿದ ಶರಣ್ ಪಂಪ್ವೆಲ್ ಬಂಧನ ಕೂಡಾ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರ ಕಾಲು ಎಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಬಂಟ್ವಾಳ ಮುಸ್ಲಿಮ್‌ ಸಮಾಜದ ಅಧ್ಯಕ್ಷ ಕೆ.ಎಚ್‌.ಅಬೂಬಕ್ಕರ್, ಮಂಗಳೂರಿನಲ್ಲಿ ನಡೆದ ಅಶ್ರಫ್‌ ಎಂಬ ಅಮಾಯಕ ಯುವಕನ ಗುಂಪು ಹತ್ಯೆಯನ್ನು ಸರಿಯಾಗಿ ತನಿಖೆ ನಡೆಸಿ ಹಂತಕರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕಾದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು, ಅಶ್ರಫ್‌ ಪಾಕಿಸ್ತಾನ ಝಿಂದಬಾದ್‌ ಘೋಷಣೆ ಕೂಗಿರುವುದಕ್ಕೆ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪರಮೇಶ್ವರ್ ಅವರ ಈ ಹೇಳಿಕೆ ಅಶ್ರಫ್‌ ಹತ್ಯೆಯನ್ನು ಪರೋಕ್ಷವಾಗಿ ಬೆಂಬಲಿಸಿದಂತೆ ಇತ್ತು. ಅಶ್ರಫ್‌ ಹತ್ಯೆ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು ಅಶ್ರಫ್‌ ಪಾಕಿಸ್ತಾನ ಪರ ಘೋಷಣೆ ಕೂಗಿದ ಯಾವುದೇ ಅಂಶ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್‌ ಕಮಿಷನರ್ ಅನುಪಮ್‌ ಅಗರವಾಲ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಪೊಲೀಸರ ತನಿಖೆಯಲ್ಲೂ ಪತ್ತೆಯಾಗದ ಪಾಕಿಸ್ತಾನ್‌ ಝಿಂದಬಾದ್‌ ಘೋಷಣೆ ಕೂಗಿದ್ದಾರೆ ಎಂಬ ವಿಷಯ ಗೃಹ ಸಚಿವರಿಗೆ ಹೇಗೆ ತಿಳಿಯಿತು. ಅವರಿಗೆ ಈ ಮಾಹಿತಿ ಎಲ್ಲಿಂದ ಲಭಿಸಿತು. ಗೃಹ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಹಿತಿ ನೀಡುವವರು ಯಾರು? ಅವರಿಗೆ ಬೇರೆ ಯಾವುದಾದರೂ ಸಂಘದ ಮೂಲದಿಂದ ಮಾಹಿತಿ ನೀಡಲಾಗುತ್ತಿದೆಯಾ? ಈ ಬಗ್ಗೆ ಜಿಲ್ಲೆಯ ಜನರಿಗೆ ಹಲವು ಸಂಶಯಗಳು ಇವೆ. ಜನರಿಗೆ ಇರುವ ಈ ಸಂಶಯಗಳಿಗೆ ಅವರು ಉತ್ತರ ನೀಡಬೇಕು. ಅಶ್ರಫ್‌ ಕೊಲೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಅನ್ಯ ಧರ್ಮದ ಯುವಕನ ಹತ್ಯೆಯಾಗಿದೆ ಎಂದಿದ್ದಾರೆ. ಗುಂಡೂರಾವ್‌ ಹೇಳುವ ಆ ಅನ್ಯ ಧರ್ಮ ಯಾವುದು. ಸರಕಾರಕ್ಕೆ ಇರುವ ಧರ್ಮ ಯಾವುದು. ಗುಂಡೂರಾವ್‌ ಸರಕಾರದ ಪ್ರತಿನಿಧಿಯೋ ಅಥವಾ ಯಾವುದಾದರೂ ಧರ್ಮದ ಪ್ರತಿನಿಧಿಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಒಬ್ಬ ಉಸ್ತವಾರಿ ಸಚಿವರಾದವರೇ ಹೀಗೆ ಹೇಳಿದರೆ ಜಿಲ್ಲೆಯ ಸಾಮಾನ್ಯ ಜನರ ಪಾಡೇನು?

ಅಶ್ರಫ್‌ ಗುಂಪು ಹತ್ಯೆ ಮತ್ತು ರೌಡಿ ಶೀಟರ್ ಸುಹಾಸ್‌ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ ಹೆಸರಿನಲ್ಲಿ ಹಲವು ಅಹಿತಕರ ಘಟನೆಗಳು ಮತ್ತು ಕೊಲೆ ಯತ್ನ ಪ್ರಕರಣಗಳು ನಡೆದಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಆಕ್ರೋಶ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿ ಇದ್ದರೂ ಯಾಕೆ ಈ ರೀತಿಯ ಘಟನೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಅಸಮಾಧಾನ ದಕ್ಷಿಣ ಕನ್ನಡ ಜನರಲ್ಲಿ ಇದೆ. ಇದರ ಬಗ್ಗೆ ಕಾಂಗ್ರೆಸ್‌ನಲ್ಲಿರುವ ಯಾವ ಮುಸ್ಲಿಮ್‌ ನಾಯಕರು ಸ್ವ ಇಚ್ಛೆಯಿಂದ ಮಾತನಾಡಲು ಮುಂದೆ ಬರುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಜನರು ಛೀಮಾರಿ ಹಾಕಿದ ಬಳಿಕ ಒಬ್ಬೊಬ್ಬರಾಗಿ ನಾಯಕರು ಎದ್ದು ಬಂದು ಸರಕಾರ, ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾತನಾಡುತ್ತಾರೆ. ಅಥವಾ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇವು ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತದೆ. ಅಷ್ಟು ಆದರೆ ಸಮಸ್ಯೆಯ ಬಗ್ಗೆ ನಾವು ಮಾತನಾಡಿದ್ದೇವೆ ಎಂಬ ಖುಷಿ ಅವರಲ್ಲಿ ಮೂಡುತ್ತದೆ. ಹೆಮ್ಮೆಯಿಂದ ಜನರಲ್ಲಿ ಅದನ್ನು ಹೇಳುತ್ತಾ ನಡೆಯುತ್ತಾರೆ. ಆದರೆ ಅದರ ಫಲಿತಾಂಶ ಏನಾಗಿದೆ ಎಂದು ಯಾರೂ ಯೋಚಿಸುವುದಿಲ್ಲ. ಎಲ್ಲಾ ಫಲಿತಾಂಶಗಳು ಶೂನ್ಯವಾಗಿರುತ್ತದೆ. ಫಲಿತಾಂಶ ಸಿಗುವುದು ಮಾಧ್ಯಮಗಳಲ್ಲಿ ಮಾತ್ರ. ಸರಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ. ನನ್ನ 45 ವರ್ಷದ ಸಾರ್ವಜನಿಕ ಜೀವನದಲ್ಲಿ ನಾನು ನೋಡಿದ ಸತ್ಯ ಇದು. ಇದಕ್ಕಿಂತ ಆಚೆಗೆ ಯಾವುದೂ ನಡೆಯುತ್ತಿಲ್ಲ.

ಕಾಂಗ್ರೆಸ್‌ ಮುಖಂಡ, ಮಾಜಿ ಮೇಯರ್‍‌ ಅಶ್ರಫ್‌ ಅವರು ಮತ್ತು ಕಾಂಗ್ರೆಸ್‌ ನಾಯಕ ಕೆ.ಕೆ.ಶಾಹುಲ್‌ ಹಮೀದ್‌ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮುಂಚೂಣಿಯಲ್ಲಿದ್ದು ಹೆಚ್ಚು ಮಾತನಾಡುವುದು ನಾವು ಕಾಣುತ್ತಿದ್ದೇವೆ. ಆ ಇಬ್ಬರೇ ಮಾತನಾಡಿದರೆ ಸಾಕಾಗದು. ಎಲ್ಲಾ ನಾಯಕರೂ ಒಗ್ಗಟ್ಟಾಗಿ ಮಾತನಾಡಬೇಕು. ಒಗ್ಗಟ್ಟು ಪ್ರದರ್ಶಿಸದಿದ್ದರೆ ಯಾವ ಪ್ರಯೋಜನವೂ ಆಗುವುದಿಲ್ಲ. ನಮ್ಮ ವೈಯಕ್ತಿಕ ಲಾಭಕ್ಕೆ ಎಲ್ಲಿಯಾದರೂ ಧಕ್ಕೆಯಾಗಬಹುದೇ, ನಮಗೆ ಪಕ್ಷದಲ್ಲಿ ಸಿಗುವ ಸ್ಥಾನ ಮಾನಗಳು ನಷ್ಟವಾಗಬಹುದೇ ಎಂಬ ಭೀತಿಯಲ್ಲಿ ಹೆಚ್ಚಿನ ನಾಯಕರು ಇದ್ದಾರೆ. ಈ ಕಾರಣದಿಂದ ಜಿಲ್ಲೆಯ ಸಮಸ್ಯೆಗೆ ಯಾವ ಪರಿಹಾರವೂ ದೊರೆಯುತ್ತಿಲ್ಲ. ಪದೇ ಪದೇ ಅಹಿತಕರ ಘಟನೆ, ಕೊಲೆ, ಪ್ರತಿಕಾರದ ಘಟನೆಗಳು ಹೆಚ್ಚಲು ಕಾರಣ. ಅಶ್ರಫ್‌ ಕೊಲೆ ಪ್ರಕರಣದ ಕೆಲವು ಆರೋಪಿಗಳ ಬಂಧನ ಆಗಿದೆ. ಆದರೆ ಪ್ರಮುಖ ಆರೋಪಿ ರವೀಂದ್ರ ಎಂಬಾತನ ಬಂಧನ ಇನ್ನೂ ಆಗಿಲ್ಲ. ಯಾಕೆ ಆಗಿಲ್ಲ. ಪೊಲೀಸರು ಬಂಧನ ಮಾಡುತ್ತಿಲ್ಲ ಎಂದಾದರೆ ಪೊಲೀಸರಲ್ಲಿ ಹೇಳಿಸಿ ಬಂಧನ ಮಾಡಿಸಬೇಕಾದವರು ಯಾರು. ಇಲ್ಲಿ ಯಾವ ಸರಕಾರ ಇರುವುದು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದರೆ ಬಿಜೆಪಿಯವರು ಆತನನ್ನು ಪೊಲೀಸರ ಮೇಲೆ ಪ್ರಭಾವ ಬೀರಿ ಬಂಧನ ಆಗದಂತೆ ಮಾಡುತ್ತಿದ್ದಾರೆ ಎಂದು ಹೇಳಬಹುದಿತ್ತು. ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿ ಇದ್ದರೂ ಹತ್ಯೆ ಪ್ರಕರಣದ ಆರೋಪಿಯ ಬಂಧನ ಆಗುತ್ತಿಲ್ಲ ಎಂದಾದರೆ ಏನು ಅರ್ಥ. ಪರಿಸ್ಥಿತಿ ಹೀಗಾದರೆ ಬ್ಯಾರಿ ಸಮುದಾಯ ಕಾಂಗ್ರೆಸ್‌ ಮೇಲೆ ನಂಬಿಕೆ ಇಡುವುದು ಹೇಗೆ. ಕಾಂಗ್ರೆಸ್‌ಗೆ ಮತ ಕೊಡಿ ಎಂದು ಮುಸ್ಲಿಮರಲ್ಲಿ ಕೇಳುವುದಾದರೂ ಹೇಗೆ. ಗುಂಪು ಹತ್ಯೆ ಗಂಭೀರ ಪ್ರಕರಣವಾಗಿದೆ. ಗುಂಪು ಹತ್ಯೆಯನ್ನು ಬುಡದಿಂದಲೇ ಕಿತ್ತು ಬಿಸಾಡಬೇಕಿದೆ. ಹಾಗಾಗಿ ಮಂಗಳೂರು ಗುಂಪು ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಯು.ಎ.ಪಿ.ಎ. ಹೇರುವಂತೆ ಬ್ಯಾರಿ ಸಮುದಾಯ ಒತ್ತಾಯ ಮಾಡುತ್ತಿದೆ. ಆದರೆ ಸರಕಾರ ಈ ಒತ್ತಾಯವನ್ನು ಕೇಳಿಸುತ್ತಿಲ್ಲ. ಯು.ಎ.ಪಿ.ಎ. ಅಂತಹ ಕಠಿಣ ಕಾನೂನುಗಳು ಮುಸ್ಲಿಮರು, ಪ್ರಗತಿಪರರು, ಸರಕಾರದ ಜನ ವಿರೋಧಿ ನಡೆಯ ವಿರುದ್ಧ ದ್ವನಿ ಎತ್ತುವ ಹೋರಾಟಗಾರರ ಮೇಲೆ ಹೇರಳು ಮಾತ್ರ ಇರುವುದೇ? ಸಮಾಜ ಘಾತುಕ ಕೃತ್ಯ ಎಸಗುವ, ಗುಂಪು ಹತ್ಯೆ ನಡೆಸುವ ಸಂಘ ಪರಿವಾರದವರ ಮೇಲೆ ಯಾಕೆ ಈ ಕಠಿಣ ಕಾನೂನುಗಳು ಹಾಕಲಾಗುತ್ತಿಲ್ಲ. ಬ್ಯಾರಿ ಸಮುದಾಯದ ಚರ್ಚೆ ಸರಿಯಾಗಿದೆ. ಕುರಿ ಕೊಟ್ಟು ಯಾರೂ ನಮ್ಮನ್ನು ಕುರಿ ಮಾಡುವುದು ಬೇಡ. ಕ್ರಿಮಿನಲ್‌ಗಳಿಗೆ ಶಿಕ್ಷೆಯಾಗುವಂತೆ ಮಾಡಿ ನಮಗೆ ನ್ಯಾಯ ಒದಗಿಸಲಿ. ಅಷ್ಟು ಸಾಕು. ಕುರಿ ನೀಡಲು ನಾವು ಕಾಂಗ್ರೆಸ್‌ಗೆ ಮತ ಹಾಕಿರುವುದಲ್ಲ. ಕುರಿ ಯಾರೂ ಬೇಕಾದರೂ ಕೊಡಬಹುದು. ನಮ್ಮ ಸಮಸ್ಯೆಗೆ ಸ್ಪಂದಿಸುವ ರಾಜಕೀಯ ನಾಯಕರು ನಮಗೆ ಬೇಕಾಗಿದ್ದಾರೆ. ಅಂಹತ ನಾಯಕರನ್ನು ಆಯ್ಕೆ ಮಾಡಲು ಬ್ಯಾರಿ ಸಮುದಾಯ ಒಗ್ಗಟ್ಟಾಗಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ 25 ವರ್ಷಗಳಲ್ಲಿ ದಕ್ಷಿಣಕನ್ನಡದಲ್ಲಿ ನಡೆದ ಕೋಮುದ್ವೇಷದ ಕೊಲೆಗಳೆಷ್ಟು ಗೊತ್ತೇ?

ಸರಕಾರ ವಿರುದ್ಧ ನಡೆಯುತ್ತಿರುವ ಚರ್ಚೆಗೆ ಹೆಚ್ಚಿನವರು ದ್ವನಿಗೂಡಿಸಿದ್ದಾರೆ. ಕೆಲವು ಗ್ರೂಪ್‌ಗಳಲ್ಲಿ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಸಂಜೆ ಆರಂಭವಾದ ಚರ್ಚೆ ಸೋಮವಾರವೂ ಮುಂದುವರಿದಿದೆ. ಚರ್ಚೆಯ ಕಾವು ಹೆಚ್ಚುತ್ತಿದ್ದಂತೆ, ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿರುವ ಬ್ಯಾರಿ ನಾಯಕರು ನಿಯೋಗವೊಂದನ್ನು ರಚಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಜಿಲ್ಲೆಯ ಶಾಂತಿಪ್ರಿಯ ಜನರ ಬೇಡಿಕೆ, ಅದಕ್ಕಿರುವ ಪರಿಹಾರದ ಬಗ್ಗೆ ಚರ್ಚಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಇಂತಹ ಹಲವು ನಿಯೋಗ, ಭೇಟಿ, ಚರ್ಚೆ, ತೀರ್ಮಾನಗಳು ನಡೆದಿವೆಯಾದರೂ ಯಾವುದೂ ಫಲ ನೀಡಿಲ್ಲ. ಮುಂದೆ ನಡೆಯುವ ನಿಯೋಗದ ಭೇಟಿಯ ಉದ್ದೇಶವಾದರೂ ಫಲ ನೀಡಲಿದೆಯಾ ಎಂಬುದು ಕಾದು ನೋಡಬೇಕಾಗಿದೆ.

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪುತ್ತೂರು | ಅತ್ಯಾಚಾರ, ವಂಚನೆ ಪ್ರಕರಣ: ಸಂತ್ರಸ್ತೆ ಮಗು, ಆರೋಪಿಯ ಡಿಎನ್ಎ ಪರೀಕ್ಷೆ

ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ನಿಂದ ಅತ್ಯಾಚಾರ, ವಂಚನೆಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X